ಸುದ್ದಿಮೂಲ ವಾರ್ತೆ
ಶಿಡ್ಲಘಟ್ಟ, ಏ.11: ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ನಗರದ ರೈಲ್ವೆ ನಿಲ್ದಾಣದಿಂದ ಚಿಕ್ಕಬಳ್ಳಾಪುರ ನಗರದ ರೈಲ್ವೆ ನಿಲ್ದಾಣದವರೆಗೂ ಪ್ರಯಾಣಿಸಿ ರೈಲಿನಲ್ಲಿ ಮತದಾನ ಕುರಿತು ಜಾಗೃತಿ ಮೂಡಿಸಲಾಯಿತು.
ಈ ಕುರಿತು ತಾಲ್ಲೂಕು ಸ್ವೀಪ್ ಸಮಿತಿಯ ನೋಡಲ್ ಅಧಿಕಾರಿ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಯವರಾದ ಮುನಿರಾಜ ಮಾತನಾಡಿ, ಶಿಡ್ಲಘಟ್ಟದಿಂದ ಚಿಕ್ಕಬಳ್ಳಾಪುರದ ಮಾರ್ಗ ಮಧ್ಯೆದ ರೈಲ್ವೆ ನಿಲ್ದಾಣದ ಬಳಿ ಮತದಾನ ಕುರಿತ ಪ್ರತಿಜ್ಞಾ ವಿಧಿಯನ್ನು ಬೋಧಿಸಿ. ಮತದಾನದ ಹಕ್ಕಿನ ಬಗ್ಗೆ ಪ್ರಯಾಣಿಕರಿಗೆ ಜಾಗೃತಿ ಮೂಡಿಸಲಾಯಿತು. ಮತದಾನ ದಿನದಂದು ಹಬ್ಬದ ವಾತಾವರಣವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಈಗಾಗಲೇ ಪಂಚಾಯಿತಿ ವ್ಯಾಪ್ತಿಯಲ್ಲಿ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡುವಂತೆ ಮನವಿ ಮಾಡಿದರು. ಮತದಾನದಿಂದಲೇ ಪ್ರಜಾಪ್ರಭುತ್ವ ಬಲಿಷ್ಠವಾಗುವುದರಿಂದ ಮತದಾನವನ್ನು ಹೆಮ್ಮೆಯಿಂದ ಚಲಾಯಿಸಬೇಕು. ಯಾರೂ ಸಹ ಮತದಾನದಿಂದ ಹಿಂದೆ ಸರಿಯದೇ ಮತ ಹಾಕಲು ಸಮಯ ಕಾಯ್ದಿರಿಸಿರಿ, ಪುರುಷರಿರಲಿ-ಮಹಿಳೆಯರಿರಲಿ- ವಿಕಲಚೇತನರಿರಲಿ- ತೃತೀಯ ಲಿಂಗಿಗಳಿರಲಿ(ವಿಶೇಷ ಚೇತನರು) ಮತ ಹಾಕುವುದು ಎಲ್ಲರ ಜವಾಬ್ದಾರಿಯಿಂದ, ವ್ಯರ್ಥವಾಗದೇ ಮತ ಹಾಕುವುದು ನಮ್ಮೇಲ್ಲರ ಕರ್ತವ್ಯ ಎಂದು ಭಾವಿಸಿ ಎಂದು ರೈಲ್ವೆ ಪ್ರಯಾಣಿಕರಿಗೆ ಮತದಾನ ಬಗ್ಗೆ ಜಾಗೃತಿ ಮೂಡಿಸಿದರು. ಈ ವೇಳೆ ಮತದಾನದ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಕಮಿಷನರ್ ಶ್ರೀನಾಥ್, ಸಿಡಿಪಿಓ ನೌತಾಜ್ , ತಾಲ್ಲೂಕಿನ ಸೆಕ್ಟರ್ ಅಧಿಕಾರಿಗಳು, ತಾಲ್ಲೂಕು ನರೇಗಾ ಸಂಯೋಜಕರಾದ ಲೋಕೇಶ ಸೇರಿದಂತೆ ಇತರರು ಹಾಜರಿದ್ದರು.