ಸುದ್ದಿಮೂಲ ವಾರ್ತೆ
ಬೆಂಗಳೂರು, ಅ. 19 : ಮಾನಸಿಕ ಆರೋಗ್ಯ ಬಹಳ ಪ್ರಮುಖವಾದ ವಿಷಯವಾಗಿದೆ. ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಹೆಚ್ಚಿನವರು ನಿರ್ಲಕ್ಷ್ಯ ವಹಿಸುತ್ತಾರೆ. ಈ ಸಮಸ್ಯೆಯ ಗುರುತಿಸುವಿಕೆ ನಡೆಯಬೇಕು. ಜೊತೆಗೆ ನಾಗರೀಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಕೆಲಸವಾಗಬೇಕೆಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಉಪ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ರಾಘವೇಂದ್ರ ಶೆಟ್ಟಿಗಾರ್ ತಿಳಿಸಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಾನಸಿಕ ಆರೋಗ್ಯ ವಿಭಾಗದಿಂದ ಆರ್.ವಿ ಕಾಲೇಜ್ ಆಫ್ ನರ್ಸಿಂಗ್ ಬೆಂಗಳೂರು ರವರ ಸಹಯೋಗದೊಂದಿಗೆ ನಡೆದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯಲ್ಲಿ ಮಾತನಾಡಿದ ಅವರು, ಮಾನಸಿಕ ಆರೋಗ್ಯ ಹಾಗೂ ಖಿನ್ನತೆಯ ಕುರಿತು ಮಾಹಿತಿ ನೀಡಿದರು.
ನಿಮ್ಹಾನ್ಸ್ ನ ಪ್ರಾಧ್ಯಾಪ ಡಾ. ಗಿರೀಶ್. ಎನ್ ಮಾತನಾಡಿ, ಮಾನಸಿಕ ಆರೋಗ್ಯ, ಮಾದಕ ದ್ರವ್ಯ ಸೇವನೆಯಿಂದ ಮಾನವನ ಕಲ್ಪನೆಯಿಂದ ನೈಜತೆ ಹಾಗೂ ವಾಸ್ತವಿಕತೆ ವ್ಯತ್ಯಾಸದ ಕುರಿತು ಮಾಹಿತಿ ನೀಡಿದರು.
ಪಾಲಿಕೆಯ ಡಿ.ಎಮ್.ಹೆಚ್.ಪಿಯ ಕಾರ್ಯಕ್ರಮ ಅಧಿಕಾರಿಯಾದ ಡಾ. ಕುಮಾರ್ ಎಮ್.ವಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಚಿಕ್ಕವಯಸ್ಸಿನವರಲ್ಲಿ ಮಾನಸಿಕ ಸಮಸ್ಯೆಗಳನ್ನು ಹೆಚ್ಚಾಗುತ್ತಿದ್ದು, ಆ ಬಗ್ಗೆ ಗಮನವರಿಸಬೇಕು. ಮನಸ್ಸು ಮತ್ತು ದೇಹ ಎರಡನ್ನೂ ಬೇರೆ ಬೇರೆಯಾಗಿ ನೋಡಬಾರದು. ದೇಹ ಎಷ್ಟು ಮುಖ್ಯವೋ ಮನಸ್ಸು ಕೂಡ ಅಷ್ಟೇ ಮುಖ್ಯ ಎಂದು ತಿಳಿಸಿದರು.
ಈ ವೇಳೆ ಮಾನಸಿಕ ಆರೋಗ್ಯದ ಉಪ ನಿರ್ದೇಶಕರಾದ ಡಾ. ರಜನಿ.ಪಿ, ಮಾನಸಿಕ ಆರೋಗ್ಯ ಮನೋವೈದ್ಯ ಡಾ. ವಿಕ್ರಂ ಅರುಣಾಚಲಮ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.