ಸುದ್ದಿಮೂಲ ವಾರ್ತೆ
ಬೆಂಗಳೂರು, ಸೆ.8: ಸಾರ್ವಜನಿಕ ಗಣೇಶೋತ್ಸವ ಆಚರಣೆಗೂ ಮುನ್ನ ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿ ಪಡೆಯಬೇಕು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಗಣೇಶ ಚತುರ್ಥಿ ಮತ್ತು ಈದ್ ಮಿಲಾದ್ ಸಮೀಪಿಸುತ್ತಿರುವ ಹಿನ್ನೆಲೆ ನಡೆದ ಶಾಂತಿ ಸೌಹಾರ್ದ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ನಗರದ ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಗಣೇಶೋತ್ಸವ ಸಮಿತಿಗಳು, ಸಂಘಟಕರು, ಸಂಘ, ಸಂಸ್ಥೆಗಳ ಮುಖಂಡರೊಂದಿಗೆ ಶಾಂತಿ ಸೌಹಾರ್ದ ಸಭೆಗಳನ್ನು ನಡೆಸಲಾಗಿದೆ. ಗಣೇಶೋತ್ಸವ ಸಂದರ್ಭಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಲಾಗಿದೆ ಎಂದು ಹೇಳಿದರು.
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿ, ಹಬ್ಬವನ್ನು ಸುಗಮವಾಗಿ ನಡೆಸಲು ನಗರಸಭೆಯ 63 ಉಪವಿಭಾಗಗಳು ಬಿಬಿಎಂಪಿ, ಬೆಸ್ಕಾಂ ಮತ್ತು ಅಗ್ನಿಶಾಮಕ ಇಲಾಖೆಯ ಪ್ರತಿನಿಧಿಗಳೊಂದಿಗೆ ಏಕಗವಾಕ್ಷಿ ವ್ಯವಸ್ಥೆಯನ್ನು ಜಾರಿಗೆ ತರುತ್ತಿದೆ. ಈ ಕೇಂದ್ರಗಳು ಗಣೇಶ ಮೂರ್ತಿಗಳನ್ನು ಪೆಂಡಾಲ್ಗೆ ಪರವಾನಿಗೆ ನೀಡಲು ಅನುಕೂಲ ಮಾಡಿಕೊಡುತ್ತವೆ. ಈ ಕೇಂದ್ರಗಳಲ್ಲಿ ಸಂಘಟಕರು ಅನುಮತಿ ಪತ್ರ ಪಡೆಯಬಹುದು. ಪರಿಸರಸ್ನೇಹಿ ಗಣೇಶ ಮೂರ್ತಿಗಳನ್ನು ಜನತೆ ಬಳಕೆ ಮಾಡಬೇಕೆಂದು ಮನವಿ ಮಾಡಿದರು.
ಗಣೇಶ ಮೂರ್ತಿ ವಿಸರ್ಜನೆಗೆ ಸ್ಯಾಂಕಿ ಕೆರೆ, ಹಲಸೂರು ಕೆರೆ, ಯಡಿಯೂರು ಕೆರೆ, ಹೆಬ್ಬಾಳ ಕೆರೆ ಹಾಗೂ ಇತರೆ ಪ್ರಮುಖ ಕೆರೆ,ಕಲ್ಯಾಣಿಗಳಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದರು.