ಸುದ್ದಿಮೂಲ ವಾರ್ತೆ
ಬೆಂಗಳೂರು,ಏ.22: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಮಾಜಿ ಸದಸ್ಯೆ ಬಿ.ಎಲ್ ರಾಣಿ ಸಂಯುಕ್ತ ಅವರು ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಿದ್ದು, ಅವರನ್ನು ಹೃದಯಪೂರ್ವಕವಾಗಿ ಸ್ವಾಗತಿಸುತ್ತೇನೆ. ಇಂದು ಮೂರನೇ ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮವಾಗಿದ್ದು, ಇದು ರಾಜ್ಯದಲ್ಲಿ ಬದದಲಾವಣೆಗೆ ಸಾಕ್ಷಿಯಾಗಿದೆ ಎಂದು ಎಐಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಜೈರಾಮ್ ರಮೇಶ್ ಹೇಳಿದರು.
ಬಿಜೆಪಿಯ ಹಲವು ಹಿರಿಯ ನಾಯಕರು ಕಾಂಗ್ರೆಸ್ ಸೇರಿದ್ದು, ಮೇ 10ರಂದು ಕರ್ನಾಟಕ ರಾಜ್ಯದ ಜನ ಬದಲಾವಣೆಗಾಗಿ ಮತ ಹಾಕಲಿದ್ದಾರೆ. ಬೆಲೆ ಏರಿಕೆ, ಭ್ರಷ್ಟಾಚಾರ, ದ್ವೇಷ ರಾಜಕಾರಣದಿಂದ ಮುಕ್ತಿ ಪಡೆಯಲು ರಾಜ್ಯದ ಜನ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಲಿದ್ದಾರೆ.
ರಾಣಿ ಸಂಯುಕ್ತಾ ಅವರ ಜತೆಗೆ 18 ಇತರ ಬಿಜೆರಿ ನಾಯಕರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ಪಕ್ಷದ ಎಲ್ಲಾ ನಾಯಕರ ಪರವಾಗಿ ಇವರನ್ನು ಆತ್ಮೀಯವಾಗಿ ಪಕ್ಷಕ್ಕೆ ಬರ ಮಾಡಿಕೊಳ್ಳುತ್ತೇನೆ.
ರಾಣಿ ಸಂಯುಕ್ತಾ ಮಾತನಾಡಿ, ನಾನಿಂದು ಬಿಜೆಪಿ ಪಕ್ಷವನ್ನು ತ್ಯಜಿಸಿ ಕಾಂಗ್ರೆಸ್ ಪಕ್ಷವನ್ನು ಸೇರುತ್ತಿದ್ದು, ಆ ಪಕ್ಷದಲ್ಲಿ ನಮಗೆ ಸಾಕಷ್ಟು ನೋವಾಗಿದೆ. ನಾವು ಅನೇಕ ದಿನಗಳಿಂದ ಕಾಂಗ್ರೆಸ್ ಪಕ್ಷವನ್ನು ಗಮನಿಸುತ್ತಿದ್ದೆವು. ಅವರು ಯಾರನ್ನೂ ಕೈಬಿಟ್ಟಿಲ್ಲ. ಆದರೆ ಬಿಜೆಪಿಯಲ್ಲಿ ಅದು ಆಗಿಲ್ಲ. ಕೇವಲ ಟಿಕೆಟ್ ಹಂಚಿಕೆ ಮಾತ್ರವಲ್ಲ, ಬಿಜೆಪಿಯಲ್ಲಿ ಎಲ್ಲರಿಗೂ ನೋವುಂಟು ಮಾಡಲಾಗಿದೆ. ನನಗಿಂತ ಮುಂಚಿತವಾಗಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಲಿದ್ದಾರೆ.
ಕಾಂಗ್ರೆಸ್ ಪಕ್ಷ ಯಾವ ಸಿದ್ಧಾಂತದ ಮೇಲೆ ಸಾಗುತ್ತಿದೇಯೋ ಅದೇ ಸಿದ್ಧಾಂತದ ಮೇಲೆ ನಾವು ನಡೆಯುತ್ತೇವೆ. ನಮ್ಮ ಜಿಲ್ಲೆಯಲ್ಲಿ ನಾವು ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬುತ್ತೇವೆ.
ಗೌರವ್ ವಲ್ಲಭ್ ಮಾತನಾಡಿ, ಕಾಂಗ್ರೆಸ್ ಪಕ್ಷದ ಸಿದ್ಧಾಂತ, ಜನಪರ ಕಾರ್ಯಗಳು ಶ್ರಮತಿ ರಾಣಿ ಸಂಯುಕ್ತಾ ಅವರು ಪಕ್ಷವನ್ನು ಸೇರುವಂತೆ ಸೆಳೆದಿದೆ. ಈ ಸಂದರ್ಭದಲ್ಲಿ ನಾನು ಅವರನ್ನು ಪಕ್ಷಕ್ಕೆ ಸ್ವಾಗತಿಸುತ್ತೇನೆ. ನಾವೆಲ್ಲರೂ ಸೇರಿ ಬಿಜೆಪಿಯ ಧೃವೀಕರಣ ರಾಜಕೀಯವನ್ನು, 40% ಕಮಿಷನ್ ಸರ್ಕಾರವನ್ನು ಮಣಿಸುತ್ತೇವೆ.
ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ತಿರಸ್ಕಾರಕ್ಕೆ ಸಿಎಂ ಕಚೇರಿ ದುರ್ಬಳಕೆ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಬಿ.ಕೆ ಹರಿಪ್ರಸಾದ್, ‘ಕೇವಲ ಮುಖ್ಯಮಂತ್ರಿ ಕಚೇರಿ ಮಾತ್ರವಲ್ಲ, ಎಲ್ಲಾ ಸಂಸ್ಥೆಗಳ ದುರ್ಬಳಕೆಯಾಗುತ್ತಿರುವುದನ್ನು ನಾವು ನೋಡಿದ್ದೇವೆ. ಇಡಿಯನ್ನು ಜಾರಿ ನಿರ್ದೇಶನಾಲಯ ಎನ್ನುವುದಕ್ಕಿಂತ ಬಿಜೆಪಿಯ ಚುನಾವಣಾ ವಿಭಾಗ ಎಂದು ಹೇಳಬಹುದು’ ಎಂದು ಟೀಕಿಸಿದರು.
ಜಗದೀಶ್ ಶೆಟ್ಟರ್ ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಬಿಜೆಪಿಯಲ್ಲಿ ಯಾರು ಮುಖ್ಯಮಂತ್ರಿ ಅಭ್ಯರ್ಥಿ ಯಾರು? ಅವರ ಪಕ್ಷದ ಹಿರಿಯ ನಾಯಕ ಯತ್ನಾಳ್ ಅವರು ಹೇಳಿದ ಪ್ರಕಾರ ಬಿಜೆಪಿಯಲ್ಲಿ ಮುಖ್ಯಮಂತ್ರಿ ಹುದ್ದೆಗೆ 2500 ಕೋಟಿ ಕೊಡಬೇಕು. ಈ ಮೊತ್ತವನ್ನು ಬಿಜೆಪಿಯಲ್ಲಿ ಯಾರು ನೀಡಲಿದ್ದಾರೆ ಎಂದು ಬಿಜೆಪಿ ಹೇಳಬೇಕು. ಮಂತ್ರಿಯಾಗಲು 100 ಕೋಟಿ ನೀಡಬೇಕು ಎಂದು ಹೇಳಿದ್ದು, 34 ಮಂದಿ ಯಾರು 100 ಕೋಟಿ ಕೊಟ್ಟು ಮಂತ್ರಿಯಾಗಲಿದ್ದಾರೆ ಎಂದು ಹೇಳಬೇಕು. ನಮ್ಮ ಪಕ್ಷದಲ್ಲಿ ಆರಿಸಿಬರುವ ಶಾಸಕರ ಅಭಿಪ್ರಾಯ ಪಡೆದು ಯಾರು ಮುಖ್ಯಮಂತ್ರಿಯಾಗಬೇಕು ಎಂದು ಹೈಕಮಾಂಡ್ ತೀರ್ಮಾನ ಮಾಡುವುದು ಈ ಹಿಂದಿನಿಂದ ನಡೆದುಕೊಂಡು ಬಂದಿರುವ ಪದ್ಧತಿ’ ಎಂದು ತಿಳಿಸಿದರು.
ಶೆಟ್ಟರ್ ಅವರು ಕಾಂಗ್ರೆಸ್ ಸೇರ್ಪಡೆಯಿಂದ ಅವರ ಮೇಲೆ ನಿಗಾವಹಿಸಲಾಗಿದೆ ಎಂಬ ಪ್ರಶ್ನೆಗೆ, ‘ಕೇವಲ ಅವರು ಮಾತ್ರವಲ್ಲ, ನಮ್ಮೆಲ್ಲರೂ ದೂರವಾಣಿ ಕದ್ದಾಲಿಕೆ ಮಾಡಲಾಗುತ್ತಿದೆ’ ಎಂದು ತಿಳಿಸಿದರು.