ಸುದ್ದಿಮೂಲ ವಾರ್ತೆ
ಬೆಂಗಳೂರು ಅ.4: ನಮೂನೆ 50, 53, 57 ಅರ್ಜಿಗಳ ನ್ಯಾಯಯುತ ವಿಲೇವಾರಿ ಹಾಗೂ ಅನಧಿಕೃತ ಸಾಗುವಳಿ ಭೂಮಿಯನ್ನು ಬಗರ್ ಹುಕುಂ ತಂತ್ರಾಶದ ಮೂಲಕ ಸಕ್ರಮಗೊಳಿಸುವ ಪ್ರಕ್ರಿಯೆಯನ್ನು ಶೀಘ್ರ ಮುಗಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಅವರು ಸೂಚಿಸಿದರು.
ಬುಧವಾರ ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ ಬಗರ್ ಹುಕುಂ ತಂತ್ರಾಶದ ಬಳಕೆಯ ಕುರಿತು ಸಚಿವರಿಗೆ ಪ್ರಾತ್ಯಕ್ಷಿಕೆ ತೋರಿಸಲಾಯಿತು. ಈ ವೇಳೆ ಅಧಿಕಾರಿಗಳಿಗೆ ಸೂಚನೆ ನೀಡಿದ ಸಚಿವರು, “ರಾಜ್ಯಾದ್ಯಂತ ನಮೂನೆ 50, 53, 57 ಅರ್ಜಿಗಳ ಸಂಖ್ಯೆ ಏರಿಕೆಯಾಗುತ್ತಲೇ ಇದೆ.
ಅನಧಿಕೃತವಾಗಿ ಸಾಗುವಳಿದಾರರು ಕೃಷಿಯಲ್ಲಿ ತೊಡಗಿದರೆ, ಅಕ್ರಮ-ಸಕ್ರಮ ಅಡಿಯಲ್ಲಿ ಸಾಗುವಳಿ ಚೀಟಿ ನೀಡಲು ಇಲಾಖೆ ಬದ್ದವಾಗಿದೆ. ಆದರೆ, ಸಾವಿರಾರು ಎಕರೆ ಭೂಮಿ ಅಕ್ರಮ ಸಾಗುವಳಿದಾರರ ಪಾಲಾಗಿದೆ. ಪ್ರತಿಯೊಂದು ಭಾಗಕ್ಕೂ ಅಧಿಕಾರಿಗಳೇ ನೇರ ಹೋಗಿ ಕೃಷಿ ನಡೆಯುತ್ತಿದೆಯೇ? ಎಂದು ಪರಿಶೀಲಿಸುವುದು ಸಾಧ್ಯವಿಲ್ಲ.
ಹೀಗಾಗಿ ಬಗರ್ ಹುಕುಂ ತಂತ್ರಾಶದ ಮೂಲಕ ಅಕ್ರಮ ಸಾಗುವಳಿ ಭೂಮಿಯಲ್ಲಿ ಕೃಷಿ ಅಥವಾ ಇನ್ಯಾವುದೇ ಚಟುವಟಿಕೆ ಬಗ್ಗೆ ಸ್ಯಾಟಲೈಟ್ ಇಮೇಜ್ ಮೂಲಕ ಮಾಹಿತಿ ಪಡೆದು ಅರ್ಜಿ ವಿಲೇವಾರಿ ಮಾಡುವುದು ನ್ಯಾಯಸಮ್ಮತವಾಗಲಿದೆ. ಅಲ್ಲದೆ, ಶೀಘ್ರ ಪ್ರಕ್ರಿಯೆಗೂ ಈ ಆ್ಯಪ್ ಸಹಕಾರಿಯಾಗಲಿದೆ, ಜನರಿಗೂ ಈ ಮೂಲಕ ಸುಲಭ ಆಡಳಿತ ಸಿಗಲಿದೆ ಎಂದರು.
ಮುಂದುವರೆದು, ಈ ಆ್ಯಪ್ ನಲ್ಲಿ ಯಾವುದೇ ಲೋಪದೋಷಗಳು ಇಲ್ಲದಂತೆ ಶೀಘ್ರದಲ್ಲೇ ಅಭಿವೃದ್ಧಿಪಡಿಸಿ ಕಾರ್ಯಯೋಜನೆಗೆ ತರುವಂತೆಯೂ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಯಿತು.
ಸಭೆಯಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ರಾಜೇಂದ್ರ ಕುಮಾರ್ ಕಟಾರಿಯಾ, ಕಂದಾಯ ಇಲಾಖೆ ಆಯುಕ್ತರಾದ ಸುನೀಲ್ ಕುಮಾರ್ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳು ಉಪಸ್ಥಿತರಿದ್ದರು.