ಸುದ್ದಿಮೂಲ ವಾರ್ತೆ
ಬಾಗೇಪಲ್ಲಿ,ನ.28: ತಾಲೂಕಿನ ಪಂಚಾಯಿತಿ ಸಭಾಂಗಣದಲ್ಲಿ ಶಾಸಕರಿಂದ ಪ್ರಗತಿ ಪರಿಶೀಲನ ಸಭೆ ನಡೆಯಿತು. ಸಭೆಯಲ್ಲಿ ಪ್ರಗತಿ ಬಗ್ಗೆ ಪರಿಶೀಲನೆಗಿಂತ ಗೈರಾದ ಅಧಿಕಾರಿಗಳದ್ದೆ ಸಭೆಯಲ್ಲಿ ಸದ್ದು ಬಲು ಜೋರಾಗಿತ್ತು. ಈ ಸಭೆಗೆ ಗೈರಾದ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳ ವಿರುದ್ದ ಪುಲ್ ಗರಂ ಆದ ಶಾಸಕ ಸುಬ್ಬಾರೆಡ್ಡಿ, ಗೈರಾದ ಅಧಿಕಾರಿಗಳ ಇಲಾಖೆಗಳಿಗೆ ಮುಂದಿನ ದಿನ ಖುದ್ದು ನಾನೇ ಭೇಟಿ ನೀಡಿ ಇಲಾಖೆಗೆ ಸಂಬಂಧಿಸಿದ ಪ್ರಗತಿಯ ಬಗ್ಗೆ ಮಾಹಿತಿ ಕಲೆಹಾಕುವುದಾಗಿ ತಿಳಿಸಿದರು.
ಮೂರು ತಿಂಗಳಿಗೆ ಒಮ್ಮೆ ಸರ್ಕಾರದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯನ್ನು ಮಾಡಲಾಗುತ್ತೆ. ಆದರೆ ಈ ಸಭೆಗೆ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಬಹುತೇಕ ಅಧಿಕಾರಿಗಳು ವಿವಿಧ ನೆಪಗಳನ್ನ ಹೇಳಿ ಸಭೆಗೆ ಗೈರು ಹಾಜರಿಯಾಗುತ್ತಿದ್ದಾರೆ. ಇನ್ನು ಕೆಲವು ಅಧಿಕಾರಿಗಳು ತಮ್ಮ ಸಹಾಯಕರನ್ನು ಸಭೆಗೆ ಕಳಹಿಸುವಂತಹ ಅಭ್ಯಾಸ ಮಾಡಿಕೊಂಡಿದ್ದಾರೆ. ಇನ್ನೂ ಕೆಲ ಅಧಿಕಾರಿಗಳು ಸಭೆಗೆ ಬಂದರೂ ಸಹ ಸಮರ್ಪಕವಾದ ಮಾಹಿತಿ ಇರುವುದಿಲ್ಲ ಎಂಬುದು ಶಾಸಕರ ಪ್ರಶ್ನೆಯಾಗಿದೆ.
ಹಲವು ಬಾರಿ ತ್ರೈ ಮಾಸಿಕ ಪ್ರಗತಿ ಪರಿಶೀಲನಾ ಸಭೆಗೆ ಗೈರು ಹಾಜರಿಯಾಗುವ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ತಾ.ಪಂ ಇಒಗೆ ಹಲವಾರು ಸಲ ಸೂಚನೆ ನೀಡಿದ್ದರೂ ಏಕೆ ನೋಟೀಸ್ ನೀಡುತ್ತಿಲ್ಲ ನೀವು? ಅಧಿಕಾರಿಗಳ ವಿರುದ್ದ ಏಕೆ ಕ್ರಮಕ್ಕೆ ಮುಂದಾಗಿಲ್ಲ? ಜೊತೆಗೆ ಅಂತಹ ಅಧಿಕಾರಿಗಳ ರಕ್ಷಣೆಗೆ ನಿಂತಿದ್ದೀರಿ, ಎಂದು ತಾಲೂಕು ಪಂಚಾಯ್ತಿ ಅಧಿಕಾರಿಯನ್ನ ತರಾಟೆಗೆ ತೆಗೆದುಕೊಂಡರು.
ಪಟ್ಟಣದ ಗೂಳೂರು ರಸ್ತೆ ಅಗಲೀಕರಣದ ವಿಚಾರದಲ್ಲಿ ಮೊದಲು ಪುರಸಭೆಗೆ ಸೇರಿದ ಕಟ್ಟಡಗಳನ್ನು ತೆರವುಗೊಳಿಸಿ. ನಂತರ ಖಾಸಗಿಯವರ ಅಂಗಡಿಗಳನ್ನು ತೆರವುಗೊಳಿಸುವಂತೆ ಪುರಸಭೆ ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಿದರು. ಇದಕ್ಕೆ ಉತ್ತರಿಸಿದ ತಹಶೀಲ್ದಾರ್ ಪಟ್ಟಣದ ಎಸ್ಬಿಎಮ್ ಬ್ಯಾಂಕ್ ರಸ್ತೆ ಅಗಲೀಕರಣಕ್ಕೆ ತಡೆಯಜ್ಞೆ ತಂದಿದ್ದಾರೆ. ಅವರಂತೆ ಇವರು ತಡೆಯಾಜ್ಞೆ ತಂದಿದ್ದಾರೆ ಎಂದಾಗ, ತಡೆಯಾಜ್ಞೆ ಕ್ಯಾನ್ಸಲ್ ಮಾಡುವ ಪ್ರಯತ್ನ ಮಾಡಿ ಎಂದು ಪುರಸಭೆ ಅಧಿಕಾರಿ, ತಹಶೀಲ್ದಾರ್ ಹಾಗು ಲೋಕೋಪಯೋಗಿ ಅಧಿಕಾರಿಗೆ ಸೂಚಿಸಿದರು.
ನಂತರ ಪುರಸಭೆ ವ್ಯಾಪ್ತಿಯ ವಾರ್ಡ್ ಗಳ ಸಮಸ್ಯೆ ಬಗ್ಗೆ ವಿವರಿಸುತ್ತಾ, ಪುರಸಭೆ ಅಧಿಕಾರಿಗಳಿಗೆ ನೀವು ಯಾವುದೇ ವಾರ್ಡಿಗೆ ಭೇಟಿ ನೀಡುತ್ತಿಲ್ಲ, ಪೌರ ಕಾರ್ಮಿಕರಿಗೆ ಸಂಬಳ ಪಾವತಿ ಮಾಡುತ್ತಿಲ್ಲ, ಎಂದು ದೂರುಗಳು ಕೇಳಿಬರುತ್ತಿವೆ. ಏಕೆ ನೀವು ವಾರ್ಡ್ ಗಳಿಗೆ ಭೇಟಿ ನೀಡುತ್ತಿಲ್ಲ ಎಂದು ಶಾಸಕರು ಪ್ರಶ್ನೆ ಮಾಡಿದರು.
ಇದಕ್ಕೆ ಉತ್ತರಿಸಿದ ಅಧಿಕಾರಿ ಬುಧವಾರದಿಂದ ವಾರ್ಡ್ ಗಳಿಗೆ ಭೇಟಿ ನೀಡುವುದಾಗಿ ಹಾಗೂ ಇಲಾಖೆಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಪುರಸಭೆ ಮುಖ್ಯಾಧಿಕಾರಿ ರುದ್ರಮ್ಮ ತಿಳಿಸಿದರು.
ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟ ರಾಜಾರೋಷವಾಗಿ ನಡೆಯುತ್ತಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಬಕಾರಿ ಇಲಾಖೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ರೈತರಿಗೆ ಹಗಲಿನಲ್ಲಿ ವಿದ್ಯುತ್ ನೀಡಬೇಕು. ರೈತರಿಗೆ ಯಾವುದೇ ಸಮಸ್ಯೆ ಉಂಟಾಗಬಾರದು. ಶಾಲಾ ಕಟ್ಟಡಗಳ ಬಳಿ ಹಾದು ಹೋಗಿರುವ ವಿದ್ಯುತ್ ತಂತಿಗಳು ಎಲ್ಲಾದರೂ ಇದ್ದರೆ ಅವುಗಳನ್ನು ಕೂಡಲೇ ತೆರುವುಗೊಳಿಸಿ ಎಂದು ವಿದ್ಯುತ್ ಇಲಾಖೆ ಅಧಿಕಾರಿಗಳಿಗೆ ಕಿವಿ ಮಾತು ಹೇಳಿದರು.
ಶಿಕ್ಷಣಾಧಿಕಾರಿಗಳಿಗೆ ಶಿಕ್ಷಣ ವಂಚಿತ ಮಕ್ಕಳಿಗೆ ಶಿಕ್ಷಣ ದೊರಕುವ ಕೆಲಸ ಮಾಡಿ, ಸರ್ಕಾರಿ ಶಾಲೆಗಳಿಗೆ ಯಾವುದೇ ತೊಂದರೆ ಬಾರದಂತೆ ನೋಡಿಕೊಳ್ಳಿ ಎಂದು ಶಿಕ್ಷಣ ಇಲಾಖೆಗೆ ತಿಳಿಸಿದರು. ನಂತರ ಆರ್ ಟಿ ಓ ಅಧಿಕಾರಿಗಳಿಗೆ ಹಣ ವಸೂಲಿ ಹಾಗೂ ಭ್ರಷ್ಟಾಚಾರ ವಿಷಯದಲ್ಲಿ ಮುಂಚೂಣಿ ಯಲ್ಲಿ ನಿಮ್ಮ ಇಲಾಖೆ ಇದೆ, ಸಣ್ಣ ಪುಟ್ಟ ವಾಹನಗಳಿಗೆ ದಂಡ ಹಾಕುತ್ತೀರಿ. ದೊಡ್ಡ ದೊಡ್ಡ ಭಾರ ಹೊತ್ತು ಹೋಗುವಂತ ವಾಹನಗಳಿಗೆ ಏಕೆ ದಂಡ ಹಾಕುತ್ತಿಲ್ಲ ಎಂದು ಪ್ರಶ್ನೆ ಮಾಡಿದರು. ಈ ಸಭೆಗೆ ತಹಶೀಲ್ದಾರ್, ತಾಲೂಕು ಪಂಚಾಯ್ತಿ ಅಧಿಕಾರಿ ಹಾಗೂ ಕೆಲ ಇಲಾಖೆ ಅಧಿಕಾರಿಗಳು ಮಾತ್ರ ಭಾಗಿಯಾಗಿದ್ದರು.
ಸಭೆಯಲ್ಲಿ ಮಾತ್ರ ಶಾಸಕರು ಗೈರಾದ ಅಧಿಕಾರಿಗಳ ವಿರುದ್ಧ ಗುಡುಗುತ್ತಾರೆ. ನಂತರ ಮರೆಯುತ್ತಾರೆ. ಕೇವಲ ಸಭೆಯಲ್ಲಿ ಮಾತ್ರ ಅಧಿಕಾರಿಗಳು ಹಾಜರು ಆಗಿಲ್ಲ. ಏಕೆ ಅವರಿಗೆ ನೋಟೀಸ್ ಕೊಟ್ಟಿಲ್ಲಾ ಎಂದು ಕೇಳುವುದು ಬಿಟ್ಟರೆ, ಅಂತಹ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮುಂದಾಗಲ್ಲಾ. ಕೆಲ ದಿನಗಳ ಹಿಂದೆ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭಕ್ಕೆ ಸುಮಾರು ಇಲಾಖೆ ಅಧಿಕಾರಿಗಳು ಗೈರು ಆಗಿದ್ದರು. ಆ ಸಮಾರಂಭದಲ್ಲಿ ಶಾಸಕರು ನೋಟೀಸ್ ಕೊಡಿ ಕ್ರಮ ಕೈಗೊಳ್ಳಿ ಎಂದು ತಹಶೀಲ್ದಾರ್ ಗೆ ತಿಳಿಸಿದ್ದರು. ಇದಕ್ಕೆ ತಹಶೀಲ್ದಾರ್ ಕೂಡ ಬಸವಣ್ಣನಂತೆ ತಲೆ ಅಲ್ಲಾಡಿಸಿದ್ದರು. ಮೈಕ್ ಮುಂದೆ ಗೈರಾದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಶಿಸ್ತಿನ ಸಿಪಾಯಿ ತರ ಹೇಳಿಕೆ ಕೊಟ್ಟಿದ್ದರು. ನಂತರ ಏನಾಯಿತು ಎಂಬುದು ಗೊತ್ತಿಲ್ಲ. ಮಂಜುನಾಥ್.ದಲಿತ ಸಂಚಾಲಕರು, ಚೇಳೂರು