ಸುದ್ದಿಮೂಲ ವಾರ್ತೆ
ದೇವನಹಳ್ಳಿ, ಆ.12 : ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಬಹುಜನ ಸಮಾಜ ಪಕ್ಷ ಸಮುದಾಯದ ಸರ್ವತೋಮುಖ ಬೆಳವಣಿಗೆಗೆ ಬರುವಂತೆ ಅವರೊಂದಿಗೆ ಶ್ರಮಿಸುವ ಪಕ್ಷವಾಗಿದೆ ಎಂದು ಬಹುಜನ ಸಮಾಜ ಪಾರ್ಟಿಯ ರಾಜ್ಯ ಕಾರ್ಯದರ್ಶಿ ನಂದಿಗುಂದ ಪಿ.ವೆಂಕಟೇಶ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಹುಜನ ಸಮಾಜ ಪಕ್ಷದ ತಾಲ್ಲೂಕು ಪದಾಧಿಕಾರಿಗಳ ಆಯ್ಕೆ ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಶೇ.85ರಷ್ಟಿರುವ ಬಹುಜನರನ್ನು ಶೇ.15ರಷ್ಟು ಇರುವವರು ಶೋಷಣೆ ಮಾಡುತ್ತಿದ್ದರು. ಇದನ್ನು ತಡೆಗಟ್ಟುವ ಸಲುವಾಗಿ ಬಿ ಎಸ್ ಪಿ ಅಸ್ತಿತ್ವಕ್ಕೆ ಬಂದಿದೆ. ಬಹುಜನ ಸಮಾಜ ಪಕ್ಷ ಬೆಳೆಯದಂತೆ ಇಲ್ಲಸಲ್ಲದ ಸುಳ್ಳು ಹೇಳಿ, ವೈಮನಸ್ಸು ಮೂಡಿಸಿ ಅದನ್ನು ನಾಶ ಪಡಿಸಲು ಮನುವಾದಿಗಳು ಶ್ರಮಿಸುತ್ತಿದ್ದಾರೆ. ಇದನ್ನು ಬಹುಜನರು ಅರ್ಥೈಸಿಕೊಂಡು ಎಚ್ಚೆತ್ತುಕೊಳ್ಳಬೇಕು ಎಂದರು.
ಸಮಾಜವು ಆಧುನಿಕತೆಯಲ್ಲಿ ಎಷ್ಟೇ ಮುಂದುವರೆದಿದ್ದರೂ ಈಗಲೂ ಸಹ ರಾಜ್ಯದ ಕೆಲವು ಹಳ್ಳಿಗಳಲ್ಲಿ ಅಸ್ಪೃಶ್ಯತೆ ಹಾಗೂ ನಮ್ಮ ಸಮುದಾಯಗಳ ಮೇಲೆ ಮಾನಸಿಕ ಮತ್ತು ದೈಹಿಕವಾಗಿ ವಿನಾಕಾರಣ ಮನುವಾದಿಗಳು ಕೆಲವು ರಾಜಕೀಯ ಪಕ್ಷಗಳೊಂದಿಗೆ ಸೇರಿ ನಿರಂತರವಾಗಿ ಹಲ್ಲೆ ನಡೆಸುತ್ತಿದ್ದಾರೆ. ಇದಕ್ಕೆ ಮೊನ್ನೆಯಷ್ಟೇ ಚಿತ್ರದುರ್ಗದಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ ಎಂದರು.
ನೂತನ ಪದಾಧಿಕಾರಿಗಳು: ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ ಶಶಿಕಲಾ, ತಾಲ್ಲೂಕು ಸಂಯೋಜಕ ನಾರಾಯಣಸ್ವಾಮಿ, ಅಧ್ಯಕ್ಷ ನಾಗರಾಜ್, ಉಪಾಧ್ಯಕ್ಷ ಮುರಳಿ, ಕಾರ್ಯದರ್ಶಿ ಮೂರ್ತಿ, ಗೋವಿಂದರಾಜು, ಗಂಗಾಧರ್, ರಮೇಶ್, ಗೋಪಾಲ್, ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ನೇಮಕಗೊಂಡಿದ್ದಾರೆ.
ಇದೆ ವೇಳೆ ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷ ಮಹದೇವ್, ಮಹಿಳಾ ಅಧ್ಯಕ್ಷೆ ರಮಾದೇವಿ, ಜಿಲ್ಲಾ ಉಪಾಧ್ಯಕ್ಷ ನಾಗರಾಜ್, ಪ್ರಧಾನ ಕಾರ್ಯದರ್ಶಿ ಗೋಪಾಲ್, ಕಾರ್ಯದರ್ಶಿ ಹರಳೂರು ನರಸಿಂಹಯ್ಯ, ಚಿಕ್ಕರಂಗಣ್ಣ, ದ್ಯಾವಪ್ಪ, ರಾಜ್ ಕುಮಾರ್, ವಿಜಯಪುರ ನಾಗಣ್ಣ ಕಾರ್ಯಕರ್ತರು ಇದ್ದರು.