ಸುದ್ದಿಮೂಲ ವಾರ್ತೆ
ಕೆ.ಆರ್.ಪುರ ಏ14: ಯಾವೊಬ್ಬರನ್ನು ಕಡೆಗಣಿಸದೇ ಎಲ್ಲರನ್ನೂ ಗಣನೆಗೆ ತೆಗೆದುಕೊಂಡು ಕ್ಷೇತ್ರದಾದ್ಯಂತ ಕೆಲಸ ಮಾಡುವಂತೆ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಕಾರ್ಯಕರ್ತರಿಗೆ ಕಿವಿ ಮಾತು ಹೇಳಿದರು.
ಕ್ಷೇತ್ರದ ಭಟ್ಟರಹಳ್ಳಿಯ ಶ್ರೀಆಂಜನೇಯ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮುಖಾಂತರ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಚುನಾವಣೆಯನ್ನು ಲಘುವಾಗಿ ತೆಗೆದುಕೊಳಬೇಡಿ, ಪ್ರತಿಷ್ಠೆಯಾಗಿ ತೆಗೆದುಕೊಂಡು ಕಾರ್ಯ ನಿರ್ವಹಿಸಿ. ಎದುರಾಳಿಗಳು ಬಲಾಡ್ಯರೋ ಇಲ್ಲವೋ ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳದೇ ಜವಾಬ್ದಾರಿಯಿಂದ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಕಾರ್ಯ ನಡೆಸಬೇಕು. ಪ್ರತಿಯೊಬ್ಬರನ್ನು ಗಣನೆಗೆ ತೆಗೆದು ಕೊಂಡು ಎದುರಾಳಿಗಳನ್ನು ಸೋಲಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಪ್ರತಿಯೊಬ್ಬ ಕಾರ್ಯಕರ್ತರು ಮತದಾರರ ಮನೆ ಬಾಗಿಲಿಗೆ ತೆರಳಿ ಕೇಂದ್ರ ಮತ್ತು ಸರ್ಕಾರದ ಸಾಧನೆಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವ ಮುಖಾಂತರ ಮತಗಳನ್ನು ಕೇಳಿ, ದೇಶ,ರಾಜ್ಯ ಹಾಗೂ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳೇ ನಮಗೆ ಶ್ರೀರಕ್ಷೆಯಾಗಿದ್ದು ಗೆಲುವಿಗೆ ಪೂರಕವಾಗಲಿವೆ. ಮುಂದಿನ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮುಖಾಂತರ ನರೇಂದ್ರ ಮೋದಿಯವರ ಕೈ ಬಲಪಡಿಸಬೇಕಿದೆ ಎಂದು ತಿಳಿಸಿದರು.
ಏ.18ರಂದು ನಾಮಪತ್ರ ಸಲ್ಲಿಸಲಿದ್ದು ಪ್ರತಿಯೊಬ್ಬರೂ ಪಾಲ್ಗೊಳ್ಳುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಪಾಲಿಕೆ ಮಾಜಿ ಸದಸ್ಯರಾದ ಜಯಪ್ರಕಾಶ್, ಎಸ್.ಜಿ.ನಾಗರಾಜ್, ವಿ.ಸುರೇಶ್, ಅಂತೋಣಿಸ್ವಾಮಿ, ಶ್ರೀಕಾಂತ್ ,ಸಿದ್ದಲಿಂಗಯ್ಯ, ಮುಖಂಡರಾದ ಮುನೇಗೌಡ,ನಾಗೇನಹಳ್ಳಿ ಲೋಕೇಶ್,ಮಾರ್ಕೆಟ್ ರಮೇಶ್,ಮೇಡಹಳ್ಳಿ ಕೃಷ್ಣಮೂರ್ತಿ, ಶಾಂತಾಕೃಷ್ಣಮೂರ್ತಿ,ಗಂಗಾಧರ, ಶಿವಪ್ಪ, ಇಟಾಚಿ ಮಂಜುನಾಥ್ ಇದ್ದರು.