ಸುದ್ದಿಮೂಲ ವಾರ್ತೆ
ಬೆಂಗಳೂರು, ಸೆ.26: ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದನ್ನು ವಿರೋಧಿಸಿ ಮಂಗಳವಾರ ಕರೆ ನೀಡಲಾಗಿದ್ದ ಬೆಂಗಳೂರು ಬಂದ್ಗೆ ವ್ಯಾಪಕ ಪ್ರತಿಕ್ರಿಯೆ ಸಿಕ್ಕಿದ್ದು, ಸಣ್ಣಪುಟ್ಟ ಅವಘಡಗಳ ಮಧ್ಯೆ ಬಂದ್ ಸಂಪೂರ್ಣ ಯಶಸ್ವಿಯಾಗಿದೆ. ವಿಶೇಷವೆಂದರೆ ಯಾವುದೇ ಒತ್ತಡಗಳು ಇಲ್ಲದೆ ಜನರೇ ಸಂಪೂರ್ಣವಾಗಿ ಸಹಕಾರ ನೀಡಿ ಅಂಗಡಿ ಮುಂಗಟ್ಟುಗಳನ್ನು ಸ್ಥಗಿತಗೊಳಿಸುವ ಮೂಲಕ ಬಂದ್ ಯಶಸ್ವಿಗೆ ಸಹಕಾರ ನೀಡಿದ್ದರು.
ಕಾವೇರಿ ನೀರು ನಿರ್ವಹಣಾ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಕರೆ ನೀಡಿದ ಬೆಂಗಳೂರು ಬಂದ್ ಗೆ ಮುಂಜಾಗ್ರತಾ ಕ್ರಮವಾಗಿ ಬೆಂಗಳೂರಿನ ಎಲ್ಲಾ ಶಾಲೆಗಳಿಗೆ ಕಾಲೇಜುಗಳಿಗೆ ರಜೆ ಘೋಷಿಸಿತು. ಇದರ ಜೊತೆಗೆ ನೆನ್ನೆ ಮಧ್ಯರಾತ್ರಿಯಿಂದಲೇ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.
ಬಂದ್ ಹಿನ್ನೆಲೆಯಲ್ಲಿ ನಗರ ಬಹುತೇಕ ಸ್ಥಬದ್ಧವಾಗಿತ್ತು. ಅಂಗಡಿ ಮುಂಗಟ್ಟುಗಳು ಬೆಳಗ್ಗೆಯಿಂದಲೇ ಬಂದ್ ಆಗಿದ್ದವು. ಹಾಲು, ತರಕಾರಿ, ಆಸ್ಪತ್ರೆ, ಮೆಡಿಕಲ್ ಸೇರಿದಂತೆ ಅಗತ್ಯ ಮತ್ತು ತುರ್ತು ಸೌಲಭ್ಯಗಳು ಮಾತ್ರ ಲಭ್ಯವಿದ್ದವು. ಹೋಟೆಲ್ಗಳಲ್ಲಿ ಅಲ್ಲಲ್ಲಿ ತೆರೆದಿದ್ದವಾದರೂ ಸಹ ಜನದಟ್ಟಣೆ ಇರಲಿಲ್ಲ. ನಗರದ ರಸ್ತೆಗಳೆಲ್ಲವೂ ಜನರ ಓಡಾಟ ಇಲ್ಲದೆ ಬಿಕೋ ಎನ್ನುತ್ತಿದ್ದವು.
ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡ, ವಿಶ್ವೇಶ್ವರಯ್ಯ ಗೋಪುರ, ಲೋಕೋಪಯೋಗಿ ಇಲಾಖೆ ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿಗಳ ಕೊರತೆ ಕಾಡುತ್ತಿತ್ತು. ಬಹುತೇಕ ಕುರ್ಚಿಗಳು ಖಾಲಿಯಾಗಿಯೇ ಇದ್ದವು. ತಮ್ಮ ಕೆಲಸಕಾರ್ಯಗಳಿಗಾಗಿ ಬೆಂಗಳೂರಿಗೆ ಬರುವ ಜನರೂ ಸಹ ಒಂದು ದಿನ ಬಿಡುವು ಮಾಡಿಕೊಂಡಿದ್ದರು.
ಬಿಎಂಟಿಸಿ ಬಸ್ಗಳ ಸಂಚಾರಕ್ಕೆ ಯಾವುದೇ ತೊಂದರೆ ಇರಲಿಲ್ಲ. ಆದರೆ, ಬಸ್ಗಳಲ್ಲಿ ಪ್ರಯಾಣಿಕರೇ ಇರಲಿಲ್ಲ. ಒಂದು ಬಸ್ನಲ್ಲಿ ಕೇವಲ ನಾಲ್ಕಾರು ಜನರು ಮಾತ್ರ ಕಾಣಸಿಗುತ್ತಿದ್ದರು. ಪ್ರಯಾಣಿಕರ ಕೊರತೆ ಹಿನ್ನೆಲೆಯಲ್ಲಿ ಬಸ್ಗಳ ಸಂಚಾರ ಸಹ ವಿರಳ ಮಾಡಲಾಗಿತ್ತು. ಆಟೋಗಳು ಇದ್ದವಾದರೂ ಪ್ರಯಾಣಿಕರಿಂದ ಬೇಡಿಕೆ ಇರಲಿಲ್ಲ.
ನಗರದ ಅನೇಕ ಕಡೆಗಳಲ್ಲಿ ಜನರು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ಮಾಡಿದರು. ಎಲ್ಲೆಡೆ ಉರುಳು ಸೇವೆಗಳು, ಖಾಲಿ ಕೊಡಗಳ ಮೆರವಣಿಗೆ ನಡೆಯುತು. ತಮಿಳುನಾಡು ಸರ್ಕಾರದ ವಿರುದ್ಧ ಜನಕ್ರೋಶ ಕಂಡುಬಂತು. ಕನ್ನಡಿಗರಿಗೆ ಅನ್ಯಾಯ ಮಾಡಿ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನೂ ಸಹ ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡರು.
ಬೆಂಗಳೂರು ಜೊತೆಗೆ ಅಕ್ಕಪಕ್ಕದ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿಯೂ ಪ್ರತಿಭಟನೆಯ ಬಿಸಿ ಜೋರಾಗಿಯೇ ಇತ್ತು. ರಾಮನಗರದಲ್ಲಿ ಬಂದ್ ನಡೆಸುವ ಮೂಲಕ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಪ್ರತಿಭಟನೆ ಮಾಡಲಾಯಿತು. ಮಳವಳ್ಳಿ, ಮದ್ದೂರು, ಮಾಗಡಿ, ದೇವನಹಳ್ಳಿ, ಯಲಹಂಕ, ಆನೇಕಲ್ ಸಹಿತ ಹಲವು ತಾಲ್ಲೂಕುಗಳಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ ಕಾವೇರಿ ನೀರು ಉಳಿಸಿ ಎಂದು ಸರ್ಕಾರಕ್ಕೆ ಆಗ್ರಹಿಸಿದರು.
ಪೊಲೀಸ್ ವಶಕ್ಕೆ:
ಇಂದು ಬೆಳಗ್ಗೆ ಬೆಂಗಳೂರು ನಗರದ ಟೌನ್ಹಾಲ್ ಬಳಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮತ್ತು ಅವರ ಬೆಂಬಲಿಗ ಬೆಂಬಲಿಗರು ಮೆರವಣಿಗೆಯಲ್ಲಿ ಪುರಭವನದ ಕಡೆ ಹೊರಟಿದ್ದಾಗ ಪೊಲೀಸರು ವಶಕ್ಕೆ ಪಡೆದು ಬಂಧಿತರನ್ನು ಫ್ರೀಡಂ ಪಾರ್ಕ್ಗೆ ಕರೆ ತಂದರು. ಬಳಿಕ ಫ್ರೀಡಂ ಪಾರ್ಕ್ನಲ್ಲೇ ಪ್ರತಿಭಟನೆಯನ್ನು ತೀವ್ರಗೊಳಿಸಿದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ನಂತರ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಶಾಂತಕುಮಾರ್, ನಾವು ಶಾಂತಿಯುತವಾಗಿ ಪ್ರತಿಭಟನೆಯನ್ನು ಮಾಡುತ್ತಿದ್ದರೂ ಸರ್ಕಾರ ನಮ್ಮ ಪ್ರತಿಭಟನೆಯನ್ನು ಹತ್ತಿಕ್ಕುವ ಸಲುವಾಗಿ ಪ್ರತಿಭಟನಾಕಾರರ ಮೇಲೆ ದೌರ್ಜನ್ಯ ಎಸೆಗಿದೆ ಎಂದು ಸರ್ಕಾರದ ಕ್ರಮವನ್ನು ತೀವ್ರವಾಗಿ ಖಂಡಿಸಿದರು.
ನಾವು ಬೆಂಗಳೂರು ನಗರದ ಟೌನ್ ಹಾಲ್ ಮುಂಭಾಗದಲ್ಲಿ ಪ್ರತಿಭಟನೆಯನ್ನು ಮಾಡುವುದಾಗಿ ಈ ಮುಂಚೆಯೇ ಸಭೆಯಲ್ಲಿ ಘೋಷಣೆ ಮಾಡಲಾಗಿದೆ. ಜೊತೆಗೆ ಪ್ರತಿಭಟನೆಯನ್ನು ಮಾಡಲು ಪೊಲೀಸರಿಂದ ಅನುಮತಿಯನ್ನು ಪಡೆಯಲಾಗಿದೆ. ಆದರೂ ಕೂಡಾ ಏಕಾಏಕಿ ಮಧ್ಯರಾತ್ರಿಯಿಂದಲೇ ನಿಷೇಧಾಜ್ಞೆಯನ್ನು ಜಾರಿ ಮಾಡಿ ಪ್ರತಿಭಟನೆ ಮಾಡದಂತೆ ತಡೆಯೊಡ್ಡಿದೆ ಎಂದರು.
ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು ಮಾತನಾಡಿ, ನಾವೇನೂ ನಮ್ಮ ಸ್ವಾರ್ಥಕ್ಕಾಗಿ ಪ್ರತಿಭಟನೆಯನ್ನು ಮಾಡಲು ಬಂದಿಲ್ಲ. ರಾಜ್ಯದ ಜನತೆ ಮತ್ತು ದೇಶದ ಅನ್ನದಾತರ ಪರವಾಗಿ ಹೋರಾಟ ಮಾಡಲು ಬಂದಿದ್ದೇವೆ ಎಂದರು. ಹೋರಾಟಗಾರರ ಕಿಚ್ಚನ್ನು ಅರಿತ ಸರ್ಕಾರ ಹೋರಾಟವನ್ನು ಹತ್ತಿಕ್ಕುವ ಸಲುವಾಗಿ ಹೋರಾಟಗಾರರನ್ನು ಕಾನೂನಿನ ನೆಪವೊಡ್ಡಿ ಬಂಧಿಸಿರುವುದು ಅಕ್ಷ್ಯಮ್ಯ ಎಂದರು.
ಮಂಡ್ಯ ರೈತ ಹಿತರಕ್ಷಣಾ ಸಮಿತಿಯ ಸುನಂದಾ ಜಯರಾಂ ಮಾತನಾಡಿ, ಪ್ರಾಧಿಕಾರದ ತೀರ್ಪಿಗೆ ಅನುಗುಣವಾಗಿ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸಿದೆ. ಈ ಮುಂಚೆ ತಮಿಳುನಾಡಿಗೆ ನೀರು ಹರಿಸಬೇಕಾದ ಸಂದರ್ಭದಲ್ಲಿ ಸರ್ಕಾರದ ಸರ್ವ ಪಕ್ಷಗಳ ಸಭೆ ಕರೆದು ತೀರ್ಮಾನ ಕೈಗೊಳ್ಳುತ್ತಿತ್ತು. ಆದರೆ, ಜಲ ಸಂಪನ್ಮೂಲ ಸಚಿವ ಡಿಕೆಶಿ ರವರು ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಅವರ ಜೊತೆಗೆ ವ್ಯವಹಾರಿಕ ಮೈತ್ರಿಗಾಗಿ ರಾಜ್ಯದ ಜನರ ಹಿತವನ್ನು ಕಾಪಾಡಲು ವಿಫಲರಾಗಿ ಏಕಾಏಕಿ ನೀರನ್ನು ಹರಿಸಿ ರಾಜ್ಯದ ಜನರ ಮರಣ ಶಾಸನ ಬರೆಯಲು ಹೊರಟಿದೆ ಎಂದರು.
ಸಚಿವ ರಾಮಲಿಂಗಾರೆಡ್ಡಿ ಭೇಟಿ:
ನಂತರ ಮುಖ್ಯಮಂತ್ರಿಗಳ ಪರವಾಗಿ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ರವರು ಪ್ರತಿಭಟನೆಯ ಸ್ಥಳಕ್ಕೆ ಆಗಮಿಸಿ ಪ್ರತಿಭಟನಕಾರರಿಂದ ಮನವಿಯನ್ನು ಸ್ವೀಕರಿಸಿ, ಮುಖ್ಯಮಂತ್ರಿಗಳು ತಮ್ಮ ಅಧಿಕೃತ ಕಾರ್ಯದ ಮೇಲೆ ಮೈಸೂರಿಗೆ ಹೋಗಿದ್ದಾರೆ. ಅವರು ಬಂದ ನಂತರ ನಿಮ್ಮ ಮನವಿಯನ್ನು ಅವರಿಗೆ ತಿಳಿಸಿ, ನೀವು ವಿಧಿಸಿರುವ ಮೂರು ದಿನಗಳ ಗಡುವಿನ ಒಳಗಾಗಿ ವಿವಿಧ ಸಂಘಟನೆಗಳ ಮುಖ್ಯಸ್ಥರುಗಳ ಸಭೆಯನ್ನು ಕರೆಯಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು. ಜೊತೆಗೆ ಮುಖ್ಯಮಂತ್ರಿ ಜೊತೆಗೆ ಮಾತನಾಡಿ ಇಂದು ಬಂಧಿತರಾಗಿರುವವರನ್ನು ಬಿಡುಗಡೆ ಮಾಡಿಸುವುದಾಗಿ ತಿಳಿಸಿದರು.