ಮೈಸೂರು, ಜೂನ್ 8 : ಬೆಂಗಳೂರು ಮತ್ತು ಮೈಸೂರು ನಗರಗಳು ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ಮಗದಷ್ಟು
ಬೆಳೆಯಲಿ ಮತ್ತು ಜನರ ಪ್ರಯಾಣದ ಅವಧಿ ಇಳಿಮುಖವಾಗಬೇಕು ಎಂಬ ಉದ್ದೇಶದಿಂದ 9 ಸಾವಿರ ಕೋಟಿ ರೂಪಾಯಿ
ವೆಚ್ಚದಲ್ಲಿ ಬೆಂಗಳೂರು ಮತ್ತು ಮೈಸೂರು ದಶಪಥ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲಾಗಿದೆ.. ಆದರೆ ಈ ರಸ್ತೆ ಈಗ
ಅಪಘಾತದ ರಸ್ತೆಯಾಗಿ ಮಾರ್ಪಡಾಗಿದೆ.
ಆರು ತಿಂಗಳಲ್ಲಿ 55 ಸಾವು
2023ರ ಜನವರಿ ತಿಂಗಳಿಂದ ಮೇ ತಿಂಗಳ ಅಂತ್ಯದ ವರೆಗೆ 570 ಅಪಘಾತ ಪ್ರಕರಣಗಳು ನಡೆದಿವೆ. ಅದರಲ್ಲಿ 55 ಮಂದಿ
ಮೃತಪಟ್ಟಿದ್ದರೇ, 52 ಮಂದಿಗೆ ತೀವ್ರ ಪೆಟ್ಟು ಬಿದ್ದಿದೆ. ಇನ್ನು 184 ಮಂದಿಗೆ ಕೈ-ಕಾಲು ಮುರಿದಿದ್ದು, 279 ಜನರಿಗೆ
ಅಪಘಾತದಲ್ಲಿ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ಪೊಲೀಸರ ಅಂಕಿ ಅಂಶಗಳಿಂದ ತಿಳಿದು ಬಂದಿದೆ.
ಪ್ರತಿದಿನ ಬೆಂಗಳೂರು-ಮೈಸೂರು ಸಂಚರಿಸುವ ಜನರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಕೇಂದ್ರ ಸರ್ಕಾರ 9000 ಕೋಟಿವೆ ಚ್ಚದಲ್ಲಿ ದಶಪಥ ಹೆದ್ದಾರಿ ನಿರ್ಮಾಣ ಮಾಡಲಾಗಿದೆ. ಈ ಹೈವೇ ಮಂಡ್ಯ ಜಿಲ್ಲೆ ವ್ಯಾಪ್ತಿಯಲ್ಲಿಯೇ ಹೆಚ್ಚು
ಹಾದು ಹೋಗಿದೆ. ಬರೋಬ್ಬರಿ 55 ಕಿ.ಮೀಗೂ ಹೆಚ್ಚು ದಶಪಥ ಹೆದ್ದಾರಿ ಇದಾಗಿದೆ. ಸದ್ಯ ದಶಪಥ ಹೆದ್ದಾರಿ ಕಾಮಗಾರಿ ಸಂಪೂರ್ಣ ಮುಗಿದಿದ್ದು, ವಾಹನ ಸವಾರರು ಖುಷಿಯಿಂದ ಪ್ರಯಾಣ ಬೆಳೆಸುತ್ತಿದ್ದಾರೆ. ಆದರೆ ದಶಪಥ ಹೆದ್ದಾರಿಯಲ್ಲಿ ನಡೆದಿರುವ ಅಪಘಾತ ಪ್ರಕರಣ ಹಾಗೂ ಅದರಿಂದ ಮೃತಪಟ್ಟವರ ಸಂಖ್ಯೆ ಭಯಹುಟ್ಟಿಸದೇ ಇರದು.
ಅತಿಯಾದ ವೇಗ
ಎಕ್ಸ್ ಪ್ರೆಸ್ ವೇ ಸೇರಿದಂತೆ ಸರ್ವಿಸ್ ರಸ್ತೆಯಲ್ಲಿಯೂ ವೇಗವಾಗಿ ವಾಹನಗಳು ಬರುತ್ತಿರುವ ಕಾರಣ
ನಿಯಂತ್ರಿಸಲಾಗದೇ ಅಪಘಾತ ನಡೆಯುತ್ತಿದೆ. ಇನ್ನೊಂದೆಡೆ ಅವೈಜ್ಞಾನಿಕವಾಗಿ ಕಾಮಗಾರಿಯು ಕಾರಣ ಎಂಬ ಅಸಮಾಧಾನದ ಮಾತುಗಳು ಕೇಳಿಬರುತ್ತಿವೆ. ಮತ್ತೊಂದೆಡೆ ಸರ್ವಿಸ್ ರಸ್ತೆಗಳಲ್ಲಿ ಅವೈಜ್ಞಾನಿಕವಾಗಿ ದಿಬ್ಬ ನಿರ್ಮಾಣ ವಾಗಿದ್ದು, ಅಲ್ಲಿಯೂ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿದೆ. ಇನ್ನು ಹಲವು ಕಾರಣಗಳಿಂದ ಅಪಘಾತ ದಿನೇ ದಿನೇ ಹೆಚ್ಚಾಗಿದ್ದು, ಕೊಂಚ ನಿರ್ಲಕ್ಷ್ಯ ವಹಿಸಿದರೂ ಅಪಾಯ ತಪ್ಪಿದಲ್ಲ.. ಅಪಘಾತದಿಂದ ಪಾರಾಗಲು ವಾಹನಗಳನ್ನು ಚಾಲನೆ ಮಾಡುವವರು ತಮ್ಮ ವಾಹನಗಳನ್ನು ನಿಧಾನವಾಗಿ ಚಾಲನೆ ಮಾಡಬೇಕು.