ಬೆಂಗಳೂರು: ಫೆರಿಫೆರಲ್ ರಿಂಗ್ ರಸ್ತೆ ನಿಲ್ಲಿಸುವುದಿಲ್ಲ
ಬೆಂಗಳೂರು, ಜು. 31: ಬೆಂಗಳೂರು ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಪೆರಿಫೆರಲ್ ರಿಂಗ್ ರಸ್ತೆ ಅಗತ್ಯ. ಅದನ್ನು ಕೈಬಿಡುವ ಮಾತಿಲ್ಲ. ಆದರೆ, ಭೂಮಿ ಕಳೆದುಕೊಳ್ಳುವ ರೈತರಿಗೆ ನ್ಯಾಯ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ಉಪಮುಖ್ಯಮಂತ್ರಿಗಳು ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಡಿ.ಕೆ. ಶಿವಕುಮಾರ್ ತಿಳಿಸಿದರು.
ಅರಮನೆ ರಸ್ತೆಯ ಜ್ಞಾನಭಾರತಿ ಸಭಾಂಗಣದಲ್ಲಿ ಪೆರಿಫೆರಲ್ ರಿಂಗ್ ರಸ್ತೆ ಯೋಜನೆ ರೈತರು ಹಾಗೂ ಭೂ ಮಾಲೀಕರ ಜತೆ ಸಂವಾದ ಕಾರ್ಯಕ್ರಮ ನಡೆಸಿದ ಶಿವಕುಮಾರ್ ಅವರು ಯೋಜನೆಯಲ್ಲಿ ಭೂಮಿ ಕಳೆದುಕೊಂಡಿರುವವರ ಸಮಸ್ಯೆ ಆಲಿಸಿ, ಅವರ ಸಲಹೆ ಮತ್ತು ಅಭಿಪ್ರಾಯ ಪಡೆದರು.
ನಂತರ ಮಾತನಾಡಿದ ಅವರು, ‘ಜಮೀನು ಉಳಿಸಿಕೊಳ್ಳಬೇಕು, ಮನೆ ಕಟ್ಟಬೇಕು ಎಂಬುದು ಪ್ರತಿಯೊಬ್ಬರ ಕನಸು. ಇಂದಿನ ಸಭೆಯಲ್ಲಿ ನೀವು ಅನೇಕ ಉತ್ತಮ ಸಲಹೆಗಳನ್ನು ನೀಡಿದ್ದೀರಿ. ಕಾಲಮಿತಿಯಲ್ಲಿ ಯೋಜನೆ ಜಾರಿ, ಪರ್ಯಾಯ ಭೂಮಿ ಹಂಚಿಕೆ, ಸ್ವಾಧೀನ ಪಡಿಸಿಕೊಂಡಿರುವ ಭೂಮಿಗೆ ಎನ್ ಓ ಸಿ ನೀಡಬೇಕು, ಬದಲಿ ನಿವೇಶನ ನೀಡುವ ಬಗ್ಗೆ ಸಲಹೆ ನೀಡಿದ್ದೀರಿ. ನಾನು ಸ್ವಾಧೀನ ಆಗಿರುವ ಭೂಮಿ ಎನ್ಓಸಿ ನೀಡಲು ಸಾಧ್ಯವಿಲ್ಲ. ಅದನ್ನು ನೇರವಾಗಿ ನಿಮಗೆ ಸ್ಪಷ್ಟಪಡಿಸುತ್ತೇನೆ,’ ಎಂದರು.
ನಾನು ಈ ಯೋಜನೆ ನಿಲ್ಲಿಸಲು ಆಗುವುದಿಲ್ಲ. ಆದರೆ ಯಾವ ರೀತಿ ನಿಮ್ಮ ಹಿತ ಕಾಯಬೇಕು, ಯಾವ ರೀತಿ ನಿಮಗೆ ಹೆಚ್ಚಿನ ಅನುಕೂಲ ಆಗುವಂತೆ ಅಗತ್ಯ ಕ್ರಮ ಕೈಗೊಳ್ಳುತ್ತೇನೆ. ರಸ್ತೆಯೂ ಆಗಬೇಕು, ನಿಮಗೂ ನ್ಯಾಯ ಒದಗಿಸಬೇಕು ಎಂಬುದು ನನ್ನ ಉದ್ದೇಶ. ನೀವು ಕೊಟ್ಟಿರುವ ಅಮೂಲ್ಯ ಸಲಹೆಗಳನ್ನು ನಾನು ಕಾನೂನು ತಜ್ಞರ ಜೊತೆ ಚರ್ಚೆ ಮಾಡುತ್ತೇನೆ. ನಂತರ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ಆದಷ್ಟು ಬೇಗ ಈ ವಿಚಾರವಾಗಿ ತೀರ್ಮಾನ ಮಾಡಲಾಗುವುದು ಎಂದು ಹೇಳಿದರು.
ನಾನು ನಿಮ್ಮ ಜತೆ ಇದ್ದು, ನ್ಯಾಯ ಒದಗಿಸುವ ಕೆಲಸ ಮಾಡುತ್ತೇನೆ. ಪೆರಿಫೆರಲ್ ರಿಂಗ್ ರಸ್ತೆ ಯೋಜನೆಗೆ 2007ರಲ್ಲಿ ಅಧಿಸೂಚನೆ ಹೊರಡಿಸಿದೆ. ಆಗಲೇ ಈ ರಸ್ತೆ ನಿರ್ಮಾಣ ಆಗಿದ್ದಾರೆ ನಮಗೆ ಇಷ್ಟು ಹೊರೆ ಆಗುತ್ತಿರಲಿಲ್ಲ. ನ್ಯಾಯಾಲಯದಲ್ಲಿ ಈ ಯೋಜನೆ ವಿಚಾರಣೆ ಆಗಿ ಭೂಸ್ವಾಧೀನ ಪ್ರಕ್ರಿಯೆ ಮುಂದುವರಿಸಲು ಆದೇಶ ಬಂದಿದೆ. ಬಿಡಿಎಗೆ ಹೊಸ ಭೂಸ್ವಾಧೀನ ಕಾನೂನು ಅನ್ವಯ ಆಗುವುದಿಲ್ಲ. ಬಿಡಿಎ ಹಳೆ ಕಾನೂನಿನ ಪ್ರಕಾರ ಭೂಸ್ವಾಧೀನ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ನಲ್ಲಿ ಹೇಳಿದೆ ಎಂದು ತಿಳಿಸಿದರು.
ನಮ್ಮ ಸರ್ಕಾರ ಹೊಸ ಭೂಮಿಗೆ ಅಧಿಸೂಚನೆ ಹೊರಡಿಸುವ ಪರಿಸ್ಥಿತಿಯಲ್ಲಿ ಇಲ್ಲ. ನನ್ನ ಜಮೀನು ಕೂಡ ಭೂ ಸ್ವಾಧೀನ ಆಗುತ್ತಿದೆ. ಈ ಸಮಯದಲ್ಲಿ ನೋಟಿಫಿಕೇಶನ್ ಆಗಿರುವ ಜಮೀನುಗಳನ್ನು ಡಿನೋಟಿಫಿಕೇಶನ್ ಮಾಡಲು ಸಾಧ್ಯವಿಲ್ಲ. ಒಂದುವೇಳೆ ಮಾಡಿದರೆ ಕಾನೂನು ಸಮಸ್ಯೆ ಎದುರಿಸಬೇಕಾಗುತ್ತದೆ. ರೈತನಿಗೆ ಸಹಾಯ ಮಾಡಬೇಕು ಎಂಬುದು ನಮ್ಮ ಆಸೆ. ಈ ಯೋಜನೆಗೆ 25 ಸಾವಿರ ಕೋಟಿ ಅಗತ್ಯವಿದೆ. ಈ ಯೋಜನೆ ಆದರೆ ಸುತ್ತಮುತ್ತಲ ಜಮೀನು ಬೆಲೆ 5 ಪಟ್ಟು ಹೆಚ್ಚಾಗಲಿದೆ ಎಂದರು.
ಇನ್ನು ನಾವು ಈ ಯೋಜನೆ ತಳ್ಳಿಕೊಂಡು ಹೋಗಲು ಆಗುವುದಿಲ್ಲ. ಇದಕ್ಕಾಗಿ ರೈತರಿಂದಲೇ ಅವರ ಸಮಸ್ಯೆ ಅರಿತು, ಅವರ ಸಲಹೆ ಮತ್ತು ಅಭಿಪ್ರಾಯ ಪಡೆಯಲು, ಪರಿಹಾರ ಇದ್ದಾರೆ ಅದನ್ನು ಪಡೆಯಲು ಈ ಸಭೆ ಮಾಡಿದ್ದೇನೆ. ನಿಮ್ಮ ಪರಿಸ್ಥಿತಿ ನಾನು ಅರಿತಿದ್ದೇನೆ. ನೀವು ನನ್ನ ಸ್ಥಾನದಲ್ಲಿ ನಿಂತು ಈ ವಿಚಾರದಲ್ಲಿ ಯಾವ ರೀತಿ ಮುಂದುವರಿಯಬೇಕು ಎಂದು ಸಲಹೆ ನೀಡಿ.” ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.