ಸುದ್ದಿಮೂಲ ವಾರ್ತೆ
ಬೆಂಗಳೂರು, ಅ.25: ದಸರಾ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿರುವ ಉತ್ತರ ಕರ್ನಾಟಕದ ಜನರು ಬನ್ನಿ ಬಂಗಾರ ಹಬ್ಬವನ್ನು ಯಶಸ್ವಿಯಾಗಿ ಆಚರಿಸಿದರು.
ಉತ್ತರ ಕರ್ನಾಟಕ ನಾಗರೀಕರ ಅಭಿವೃದ್ದಿ ಸಂಘದ ವತಿಯಿಂದ ರಾಜಾಜಿನಗರದ ಬಸವೇಶ್ವರ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕ ಭಾಗರದ ಹಿರಿಯರು, ಮಕ್ಕಳು, ಎಲ್ಲ ವಯೋಮಾನದವರು ಸೇರಿ ಪರಸ್ಪರ ಬನ್ನಿ ಬಂಗಾರ ವಿನಿಮಯ ಮಾಡಿಕೊಂಡರು.
ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಬಲವಂತರಾವ ಪಾಟೀಲ್ ಮಾತನಾಡಿ, ಉತ್ತರ ಕರ್ನಾಟಕದಿಂದ ಆಗಮಿಸಿರುವ ಎಲ್ಲ ಬಂಧುಗಳನ್ನು ಒಂದೆಡೆ ಸೇರಿಸಿ ಕಾರ್ಯಕ್ರಮ ಆಯೋಜನೆ ಮಾಡಿರುವ ಶ್ರೇಯಸ್ಸು ಇತ್ತರ ಕರ್ನಾಟಕ ಸಂಘಕ್ಕೆ ಇದೆ.
ಭಾರತೀಯರಾದ ನಾವು ಅನೇಕ ಹಬ್ಬಗಳನ್ನು ಆಚರಣೆ ಮಾಡಿ ಸಂತೋಷ ಪಡುತ್ತೇವೆ ಪ್ರತಿ ಹಬ್ಬಕ್ಕೂ ಒಂದು ಹಿನ್ನೆಲೆ ಇರುತ್ತದೆ. ಭಾರತೀಯರಾದ ನಾವು ದಸರಾ ಹಬ್ಬವನ್ನು ವಿಜ್ರಂಬಣೆಯಿಂದ ಆಚರಿಸುತ್ತೇವೆ. ನಮಗೆ ತಿಳಿದಿರುವಂತೆ ವಿಜಯನಗರ ಕಾಲದಲ್ಲಿ ದಸರಾ ಆಚರಣೆ ಆರಂಭವಾಯಿತು ಅಂತ ನಾವು ಹೇಳುತ್ತೇವೆ. ಇದಕ್ಕೂ ಮೊದಲು ನಮ್ಮ ಬುಡಕಟ್ಟು ಜನರು ಆಯುಧಗಳನ್ನು ಪೂಜೆ ಮಾಡುತ್ತಾರೆ. ರೈತರು ಅದೆ ರೀತಿ ಆಚರಣೆ ಮಾಡುತ್ತಾರೆ ಎಂದು ಹೇಳಿದರು.
ನಾವು ಬಂಧುಗಳಾಗಿ ವೈಷಮ್ಯ ಮರೆತು ಸೌಹಾರ್ದಯುತವಾಗಿ ಬದುಕೋಣ ಅನ್ನುವ ಸಂದೇಶ ಈ ಹಬ್ಬದಲ್ಲಿದೆ ನಾವೆಲ್ಲ ಇಲ್ಲಿ ಒಟ್ಟಾಗಿ ಇರಲು ಈ ರೀತಿಯ ಹಬ್ಬಗಳನ್ನು ನಿರಂತರ ಆಚರಿಸೋಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೆಎಸ್ಡಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ. ಉಮಾಶಂಕರ ಅಪಾಲಿ, ಸಂಘದ ಅಧ್ಯಕ್ಷರಾದ ಮುರುಗೇಶ ಜವಳಿ, ಪದಾಧಿಕಾರಿಗಳ ಶಂಕರ ಪಾಟೀಲ್, ದಯಾನಂದ ಪಾಟೀಲ್, ಶಿವಕುಮಾರ್ ಸರಶೆಟ್ಟಿ, ಕಲ್ಲಪ್ಪ ನವಣಿ, ಶಂಕರ ಪಾಗೋಜಿ, ತಿಮ್ಮಣ್ಣ ಹೊಸೂರು ಮತ್ತಿತರರು ಹಾಜರಿದ್ದರು.