ಸುದ್ದಿಮೂಲ ವಾರ್ತೆ
ಕುಷ್ಟಗಿ,ಜೂ.18: ರಾಜ್ಯದಲ್ಲಿರುವ ಲಿಂಗಾಯತ ಸಮುದಾಯಕ್ಕೆ ಅಲ್ಪಸಂಖ್ಯಾತರ ಸ್ಥಾನಮಾನ ನೀಡಲು ಹಾಗೂ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ನೀಡುವಂತೆ ಕೇಂದ್ರ ಸರಕಾರಕ್ಕೆ ಶಿಫಾರಸು ಸಲ್ಲಿಸಬೇಕೆಂದು ಆಗ್ರಹಿಸಿ ಕುಷ್ಟಗಿ ತಾಲೂಕು ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಬಸವ ಸಮಿತಿ ಪ್ರಮುಖರು ನೂತನ ಶಾಸಕ ದೊಡ್ಡನಗೌಡ ಪಾಟೀಲ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಬಸವ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಚನ ಚಿಂತನ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರಿಗೆ ಕುಷ್ಟಗಿ ತಾಲೂಕು ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಬಸವ ಸಮಿತಿ ವತಿಯಿಂದ ಗೌರವಿಸಿದ ಬಳಿಕ ಮನವಿ ಸಲ್ಲಿಸಿ ಸಿಎಂ ಸಿದ್ದರಾಮಯ್ಯ ಅವರಿಗೆ ಒತ್ತಡ ಹೇರಲು ವಿನಂತಿಸಿಕೊಂಡರು.
ಬಸವಣ್ಣನವರಿಂದ ಸ್ಥಾಪನೆಯಾದ ಲಿಂಗಾಯತ ಧರ್ಮ ವೀರಶೈವ ಹಾಗೂ ಹಿಂದೂ ಧರ್ಮಗಳಿಗಿಂತ ಭಿನ್ನವಾಗಿದೆ. ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಸ್ಥಾನಮಾನಕ್ಕಾಗಿ ಕಳೆದ ಹಲವಾರು ವರ್ಷಗಳಿಂದ ಹೋರಾಟ ಮಾಡಲಾಗುತ್ತಿದೆ. ಸ್ವತಂತ್ರ ಧರ್ಮ ರಚನೆಗಾಗಿ ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಸರ್ಕಾರ ನ್ಯಾಯಮೂರ್ತಿ ನಾಗಮೋಹನ ದಾಸ್ ನೇತೃತ್ವದಲ್ಲಿ ಸಮಿತಿ ರಚಿಸಿ ವರದಿ ಪಡೆದುಕೊಂಡಿತ್ತು. ಈ ಸಮಿತಿಯ ವರದಿಯನ್ನು ಪರಿಗಣಿಸಿ, 2007ರಲ್ಲಿ ಜೈನ, ಬೌದ್ಧ ಹಾಗೂ ಸಿಖ್ ಧರ್ಮಗಳಿಗೆ ಕರ್ನಾಟಕದ ಅಲ್ಪಸಂಖ್ಯಾತರ ಆಯೋಗದ ಕಾಯ್ದೆ 1994 ಕಲಂ 2(ಡಿ) ಪ್ರಕಾರ ಆದೇಶ ಹೊರಡಿಸಿದಂತೆ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ನೀಡಿ ಕೇಂದ್ರಕ್ಕೆ ಶಿಫಾರಸು ಮಾಡಬೇಕೆಂದು ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಬಸವ ಸಮಿತಿಯ ಪ್ರಮುಖರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.
ಈ ವೇಳೆ ಮಾಜಿ ಶಾಸಕ ಕೆ.ಶರಣಪ್ಪ ವಕೀಲರು, ಜಾಗತಿಕ ಲಿಂಗಾಯತ ಮಹಾಸಭಾದ ಹಾಗೂ ಬಸವ ಸಮಿತಿ ಪ್ರಮುಖರಾದ ಟಿ.ಬಸವರಾಜ, ಶಿವಸಂಗಪ್ಪ ಬಿಜಕಲ್, ಮಹಾದೇವಪ್ಪ ಮಹಾಲಿಂಗಪೂರ, ಎಸ್.ಎಂ.ಗೋನಾಳ, ರಾಮನಗೌಡ ಪಾಟೀಲ್, ಎಚ್. ಎಸ್. ಹಿರೇಮಠ ಇತರರು ಉಪಸ್ಥಿತರಿದ್ದರು.
…