ಮಂಗಳೂರು,ಸೆ.14:ಉದ್ಯಮಿಯೊಬ್ಬರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ಚೈತ್ರಾ ಕುಂದಾಪುರರಿಂದ ವಂಚನೆಯಾಗಿರುವ ಪ್ರಕರಣಕ್ಕೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚೈತ್ರಾ ಕುಂದಾಪುರ ಕೇಸ್ ನ ವ್ಯವಹಾರಕ್ಕೂ ನಮಗೂ ಸಂಬಂಧವಿಲ್ಲ. ಈ ಪ್ರಕರಣದಲ್ಲಿ ಸಮಗ್ರ ತನಿಖೆ ಆಗಬೇಕು, ಯಾರೇ ಇದ್ದರೂ ಉಗ್ರ ಶಿಕ್ಷೆ ಆಗಲಿ. ಸ್ವಾಮೀಜಿ ಅಲ್ಲ, ಯಾರೇ ಇದ್ದರೂ ಅವರ ಬಂಧನ ಆಗಬೇಕು ಎಂದು ಆಗ್ರಹಿಸಿದ್ದಾರೆ.
ಟಿಕೆಟ್ ಕೊಡಿಸುತ್ತೇವೆ ಎಂದು ಹಣ ಪಡೆದಿರುವ ವಿಚಾರವನ್ನ ನಾವು ಗಂಭೀರವಾಗಿ ಪರಿಗಣಿಸುತ್ತೇವೆ. ಬಿಜೆಪಿಗೆ ಇದರಲ್ಲಿ ಯಾವುದೇ ಸಂಬಂಧ ಇಲ್ಲ ಎನ್ನುವುದು ಸ್ಪಷ್ಟ. ತನಿಖೆ ಆಗಲಿ,
ಅಪರಾಧಿ ಸ್ಥಾನದಲ್ಲಿ ಇದ್ದವರು ದೊಡ್ಡ ದೊಡ್ಡ ಹೆಸರನ್ನು ಹೇಳುತ್ತಾರೆ. ಆದರೆ ತನಿಖೆ ಆಗಿ ಅದರ ಸತ್ಯ ಹೊರ ಬರಲಿ ಎಂದು ತಿಳಿಸಿದರು.
ಮೈತ್ರಿ ಪ್ರಾಥಮಿಕ ಹಂತದಲ್ಲಿದೆ
ಲೋಕಸಭೆ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮೈತ್ರಿ ವಿಚಾರ ಪ್ರಾಥಮಿಕ ಹಂತದಲ್ಲಿದೆ. ಮೈತ್ರಿಯಲ್ಲಿ ಕ್ಷೇತ್ರ ಹಂಚಿಕೆ ಅಂತಿಮ ಹಂತ ತಲುಪಿಲ್ಲ. ಮುಂದಿನ ದಿನಗಳಲ್ಲಿ ಪಕ್ಷದ ವರಿಷ್ಠರು ಈ ಬಗ್ಗೆ ಚರ್ಚಿಸಲಿದ್ದಾರೆ. ಮೈತ್ರಿ ಸಮಯದಲ್ಲಿ ನಮ್ಮ ಜತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದರು.
ಸಿಎಂ ಸ್ಟಾಲಿನ್ ಜೊತೆ ಮಾತನಾಡುತ್ತಿಲ್ಲ
ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿಚಾರದಲ್ಲಿ
ತಮಿಳುನಾಡಿನ ಡ್ಯಾಂಗಳಲ್ಲಿ ನೀರಿನ ಸ್ಟಾಕ್ ಹೆಚ್ಚಾಗಿದೆ ಎಂದು
ನಾವು ಮೊದಲಿನಿಂದಲೂ ನಾವು ಹೇಳಿಕೊಂಡು ಬಂದಿದ್ದೇವೆ ಆದರೂ, ರಾಜ್ಯ ಸರ್ಕಾರ ನೀರು ಬಿಡುತ್ತ ಬಂದಿದೆ. ರಾಜ್ಯ ಸರ್ಕಾರ ಕಾನೂನಾತ್ಮಕವಾಗಿ ಗಂಭೀರವಾಗಿ ತೆಗೆದುಕೊಂಡು ಹೋರಾಟ ಮಾಡುತ್ತಿಲ್ಲ. ಹೀಗಾಗಿ ಕಾವೇರಿ ಜಲಾನಯನ ರೈತರಿಗೆ, ಬೆಂಗಳೂರಿಗೆ ಕಷ್ಟ ಆಗಲಿದೆ. ಸರ್ಕಾರ ಕಾನೂನಾತ್ಕವಾಗಿ ಅಥವಾ ಮಾತುಕತೆಯಿಂದ ಬಗೆ ಹರಿಸಬೇಕು. ಆದರೆ ನಮ್ಮ ಸಿಎಂ ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಅವರ ಜೊತೆಗೆ ಮಾತನಾಡಲು ತಯಾರಿಲ್ಲ. ಇಂಡಿಯಾ ಒಕ್ಕೂಟ ಅಂತ ಹೇಳುತ್ತಾರೆ. ಇವರು ನಮ್ಮ ನೀರಿನ ಹಕ್ಕಿನ ಬಗ್ಗೆ ಮಾತನಾಡುವುದಿಲ್ಲ. ಸದ್ಯ ನೀರು ಬಿಡುವುದಿಲ್ಲ ಅನ್ನುವ ತಮ್ಮ ನಿಲುವಿಗೆ ಅವರು ಗಟ್ಟಿಯಾಗಿ ನಿಲ್ಲಬೇಕು. ನಾವು ಈ ನಿಲುವಿನ ಬಗ್ಗೆ ಸರ್ಕಾರದ ಜೊತೆ ನಿಲ್ಲುತ್ತೇವೆ. ಒಂದು ವೇಳೆ ನೀರು ಬಿಟ್ಟರೆ ನಾವು ಸರ್ಕಾರದ ವಿರುದ್ದ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಬರ ಪೀಡಿತ ತಾಲೂಕುಗಳಲ್ಲಿ ಬಿಜೆಪಿ ಹೋರಾಟ:
ರಾಜ್ಯ ಸರ್ಕಾರ ಬರ ಘೋಷಣೆಗೆ ಅನಗತ್ಯ ಕಾಲ ಹರಣ ಮಾಡಿದೆ. ಜೂನ್ ತಿಂಗಳಿನಿಂದಲೇ ವಸ್ತು ಸ್ಥಿತಿ ಅರಿತು ಬರ ತಾಲೂಕುಗಳ ಘೋಷಣೆಗೆ ಕ್ರಮ ಕೈಗೊಳ್ಳಬೇಕಿತ್ತು. ಆದರೆ, ಸೆಪ್ಟಂಬರ್ ಬಂದರೂ ಇನ್ನೂ ಮೀನಮೇಷ ಎಣಿಸುತ್ತಿದೆ. ಬರ ಪೀಡಿತ ತಾಲೂಕುಗಳಲ್ಲಿ ಕುಡಿಯುವ ನೀರು, ದನಗಳಿಗೆ ಮೇವಿನ ವ್ಯವಸ್ಥೆ ಮಾಡಬೇಕು. ಮುಂಗಾರು ಬೆಳೆ ಹಾನಿಯಾಗಿದ್ದು ತಕ್ಷಣ ರೈತರಿಗೆ ಪರಿಹಾರ ನೀಡಬೇಕು. ಈ ಸರ್ಕಾರ ಕೇಂದ್ರ ಸರ್ಕಾರದ ಮಾನದಂಡಗಳ ನೆಪ ಹೇಳುತ್ತಿದೆ. ಅಲ್ಪಾವಧಿ ಸಾಲವನ್ನು ದೀರ್ಘಾವಧಿ ಸಾಲವನ್ನಾಗಿ ಪರಿವರ್ತಿಸಬೇಕು ಎಂದು ಆಗ್ರಹಿಸಿದರು.
ನಮ್ಮ ಅವಧಿಯಲ್ಲಿ ಪ್ರವಾಹ ಬಂದಾಗ ಒಂದು ತಿಂಗಳಲ್ಲಿ ಪರಿಹಾರ ಘೋಷಣೆ ಮಾಡಿ ಬಿಡುಗಡೆ ಮಾಡಿದ್ದೇವು. ಕೇಂದ್ರ ಸರ್ಕಾರ ನೀಡುವ ಎರಡು ಪಟ್ಟು ಪರಿಹಾರ ನೀಡಿದ್ದೇವು. ಈ ಸರ್ಕಾರ ಬರ ಪೀಡಿತ ಪ್ರದೇಶಗಳಿಗೆ ಸೂಕ್ತ ಪರಿಹಾರ ನೀಡದಿದ್ದರೆ ಬಿಜೆಪಿ ವತಿಯಿಂದ ಬರ ಪೀಡಿತ ತಾಲೂಕುಗಳಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ಹೇಳಿದರು.