ಸುದ್ದಿಮೂಲ ವಾರ್ತೆ
ಮೈಸೂರು,ಮೇ.5: ( ಟಿ. ನರಸೀಪುರ) ವರುಣ ಮತ್ತು ಟಿ.ನರಸಿಪುರದಲ್ಲಿನ ಜಿಡ್ಡುಗಟ್ಟಿದ ಆಡಳಿತ ಬದಲಾವಣೆ ಆಗಬೇಕಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮೈಸೂರಿನ ವರುಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಹಾಗೂ ಟಿ. ನರಸಿಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ರೇವಣ್ಣ ಪರವಾಗಿ ರೋಡ್ ಶೋ ನಡೆಸಿದ ಬಳಿಕ ಮಾತನಾಡಿದರು.
ವರುಣ ಕ್ಷೇತ್ರ ವರ್ಣಮಯ ಆಗಿದೆ. ರೈತರು, ಯುವಕರು, ಮಹಿಳೆಯರು ಎಲ್ಲರೂ ಸೇರಿ ಸೋಮಣ್ಣ ಅವರನ್ನು ಗೆಲ್ಲಿಸಿಕೊಂಡು ಬರಲು ಒಟ್ಟಾಗಿರುವುದರಿಂದ ಈ ಕ್ಷೇತ್ರ ವರ್ಣಮಯ ಆಗಿದೆ ಎಂದರು.
ಸೋಮಣ್ಣ ಬೆಳಿಗ್ಗೆ ಐದು ಗಂಟೆಗೆ ಎದ್ದು ಸೇವೆ ಆರಂಭಿಸುತ್ತಾರೆ. ಐದು ಗಂಟೆಗೆ ಎದ್ದು ಸೇವೆ ಮಾಡುವ ಸೋಮಣ್ಣ ಬೇಕಾ? ಬೇಡ್ವಾ, ಈ ಕ್ಷೇತ್ರದಲ್ಲಿ ಬದಲಾವಣೆ ಆಗಬೇಕಿದೆ. ಚಾಮರಾಜನಗರ, ಮೈಸೂರು ಅಭಿವೃದ್ಧಿ ಮಾಡಲು ಸೋಮಣ್ಣ ಬಂದಿದ್ದಾರೆ ಎಂದರು.
ಒಂದು ಕ್ಷೇತ್ರಕ್ಕೆ ತಾಲ್ಲೂಕು ಕೇಂದ್ರ ಇಲ್ಲ. ಈ ಜಿಡ್ಡುಗಟ್ಟಿದ ಆಡಳಿತ ಎಷ್ಟು ದಿನ ಸಹಿಸಿಕೊಳ್ಳುತ್ತಿರಿ. ಯಾವ ನಾಯಕರು ಇಷ್ಟು ವರ್ಷ ಸೇವೆ ಮಾಡಿದ್ದಾರೆ. ಯಾವ ನಾಯಕ ಎಲ್ಲ ಜನರನ್ನು ತೆಗೆದುಕೊಂಡು ಹೋಗುವ ಶಕ್ತಿ ಇದೆ, ಆ ನಾಯಕರನ್ನು ನಾವು ಇಲ್ಲಿ ತಂದು ನಿಲ್ಲಿಸಿದ್ದೇವೆ ಎಂದರು.
ಟಿ. ನರಸಿಪುರ ಕ್ಷೇತ್ರದ ಅಭ್ಯರ್ಥಿ ಡಾ. ರೇವಣ್ಣ ಅವರು ಡಾಕ್ಟರ್. ವೃತ್ತಿ ಮಾಡಿ ಜನರ ಸೇವೆ ಮಾಡುವ ವೈದ್ಯರು ಬೇಕಾ? ಮನೆಯಲ್ಲಿಯೇ ಕುಳಿತು ಆದೇಶ ಮಾಡುವ ಶಾಸಕರು ಬೇಕಾ? ನೀವು ಯಾವಾಗ ಕರೆದರೂ ನಿಮ್ಮ ಸೇವೆಗೆ ಬರುತ್ತಾರೆ. ಎಲ್ಲ ಕಾರ್ಯಕರ್ತರು ಕನಿಷ್ಟ 10 ಮತಗಳನ್ನು ಹಾಕಿಸಿದರೆ, ರೇವಣ್ಣ 10 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದರು.
ವಿ. ಸೋಮಣ್ಣ ಅಂದರೆ ವಿಕ್ಟರಿ ಸೋಮಣ್ಣ ಅಂತ. ಇಲ್ಲಿ ಆಡಳಿತ ನಡೆಸಿದವರು ಜಿಡ್ಡುಗಟ್ಟಿದ ಆಡಳಿತ ನೀಡಿದ್ದಾರೆ. ನೀವು ಸೋಮಣ್ಣ ಅವರನ್ನು ಗೆಲ್ಲಿಸಿದರೆ, ಸಮೃದ್ದಿಯ ಸುಭೀಕ್ಷ ಸರ್ಕಾರ ಬರಲಿದೆ. ನಿಮ್ಮೆಲ್ಲೆರ ಆಶೀರ್ವಾದ ಇರಲಿ ಎಂದರು.