ಸುದ್ದಿಮೂಲ ವಾರ್ತೆ
ಬೆಂಗಳೂರು, ಅ. 17 : ಬಿಬಿಎಂಪಿ ವ್ಯಾಪ್ತಿಯಲ್ಲಿ ಹಸಿರೀಕರಣ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ “ಹಸಿರು ಬೆಂಗಳೂರು” ಕಾರ್ಯಕ್ರಮದಡಿ 90 ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಡಲು ಬಿಬಿಎಂಪಿ ನಿರ್ಧರಿಸಲಿದೆ.
ಬೆಂಗಳೂರು ನಗರವನ್ನು ಹಸಿರುಗೊಳಿಸುವ ಸಂಬಂಧ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಶಯದಂತೆ “ಹಸಿರು ಬೆಂಗಳೂರು ಕಾರ್ಯಕ್ರಮದಡಿ ಬೆಂಗಳೂರಿನಾದ್ಯಂತ ಗಿಡಗಳನ್ನು ಬೆಳೆಸಲು ಕ್ರಮ ಕೈಗೊಳ್ಳಲಾಗಿದೆ.
ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಸುಮಾರು 250 ಸರ್ಕಾರಿ,ಸರ್ಕಾರೇತರ ಶಾಲೆಗಳಿಂದ ಒಡಂಬಡಿಕೆ ಮಾಡಿಕೊಂಡು ಸುಮಾರು 50 ಸಾವಿರ ಶಾಲಾ-ಕಾಲೇಜು ಸಹಯೋಗದೊಂದಿಗೆ ಗಿಡ ನೆಡುವ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.
ಬಿಬಿಎಂಪಿ ಅರಣ್ಯ ಘಟಕದ ವತಿಯಿಂದ ನೆಡಲಾದ ಗಿಡಗಳನ್ನು 3 ವರ್ಷಗಳ ಕಾಲ ಶಾಲಾ ವಿದ್ಯಾರ್ಥಿಗಳ ಹಾಗೂ ಅರಣ್ಯ ಅಧಿಕಾರಿಗಳ ಸಹಯೋಗದೊಂದಿಗೆ ಪೋಷಣೆ ಮಾಡಲಾಗುವುದು. ಈ ಸಂಬಂಧ ಪಾಲಿಕೆ ವತಿಯಿಂದ ಸಾಮಾಜಿಕ ಜಾಲತಾಣವನ್ನು ರೂಪಿಸಿ ನಗರದಾದ್ಯಂತ ನೆಡಲಾಗಿರುವ ಗಿಡಗಳ ಸಂಪೂರ್ಣ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಲಾಗುವುದು.
ನಗರದಲ್ಲಿ ಈಗಾಗಲೇ ಶಾಲಾ-ಕಾಲೇಜು ವಿದ್ಯಾರ್ಥಿಗಳು ವಲಯವಾರು ನೆಟ್ಟಿರುವ ಗಿಡಗಳ ಸಂಖ್ಯೆ, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಬಗ್ಗೆ ಜಾಲತಾಣದಲ್ಲಿ ಮಾಹಿತಿ ನೀಡಲಾಗುವುದು. ಜೊತೆಗೆ ಸಿಎಂಪಿ ಅರಣ್ಯ ಘಟಕದ ಸಸ್ಯಕ್ಷೇತ್ರಗಳಿಂದ ಸಾರ್ವಜನಿಕರಿಗೆ ಉಚಿತವಾಗಿ ಗಿಡಗಳನ್ನು ಸಹ ವಿತರಿಸಲಾಗಿರುತ್ತದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.