ಸುದ್ದಿಮೂಲ ವಾರ್ತೆ
ತಿಪಟೂರು, ಸೆ. 8 : ರಾಜ್ಯಸರ್ಕಾರದ ರೈತ ವಿರೋಧಿ ಧೋರಣೆ, ಬೆಸ್ಕಾಂ ಇಲಾಖೆ ಲೋಡ್ ಶೆಡ್ಡಿಂಗ್, ಕೊಬ್ಬರಿ ಬೆಳೆಗೆ ಉತ್ತಮ ಬೆಲೆ ನೀಡದಿರುವ ಸರ್ಕಾರದ ವಿರುದ್ದ ಮಾಜಿ ಸಚಿವ ಬಿ.ಸಿ ನಾಗೇಶ್ ನೇತೃತ್ವದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿತು.
ನಗರದ ಡಾ. ಬಿ.ಆರ್ ಅಂಬೇಡ್ಕರ್ ವೃತ್ತದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಬೆಸ್ಕಾಂ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಿ ಸರ್ಕಾರ ಹಾಗೂ ಬೆಸ್ಕಾಂ ಲೋಡ್ ಶೆಡ್ಡಿಂಗ್ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಸರ್ಕಾರ ಹಾಗೂ ಬೆಸ್ಕಾಂ ಇಲಾಖೆ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ತಿಪಟೂರು ಉಪವಿಭಾಗಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿದರು.
ಬಳಿಕ ಮಾತನಾಡಿದ ಬಿ.ಸಿ ನಾಗೇಶ್, ಅನಗತ್ಯ ಲೋಡ್ ಶೆಡ್ಡಿಂಗ್, ವಿದ್ಯುತ್ ದರ ಏರಿಕೆ, ತಾಲೂಕಿನ ಈಚನೂರು ಕೆರೆಗೆ ನೀರು ಹರಿಸದ ಪರಿಣಾಮ ನಗರದ ಜನ ಕುಡಿಯುವ ನೀರಿಗೂ ಹಾಹಾಕಾರ ಪಡಬೇಕಾಗುವ ಸ್ಥಿತಿ ತಲುಪಿದ್ದಾರೆ. ಕೆರೆ ತುಂಬಿಸಲು ಶಾಸಕರು ವಿಫಲರಾಗಿದ್ದಾರೆ.
ಕೊಬ್ಬರಿ ಬೆಲೆ ಕುಸಿತವಾಗಿದ್ದರೂ ರಾಜ್ಯಸರ್ಕಾರ ಬೆಲೆ ಹೆಚ್ವಳಕ್ಕೆ ಕ್ರಮವಹಿಸದೆ ರೈತ ವಿರೋಧಿ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಮಾಜಿ ನಗರಸಭಾ ಅಧ್ಯಕ್ಷ ರಾಮ್ಮೋಹನ್, ಮುಖಂಡರಾದ ಪ್ರಸನ್ನಕುಮಾರ್ ರಾಜ್ಯ ಎಸ್ಸಿ ಮೋರ್ಚಾ ಮುಖಂಡ ಗಂಗರಾಜು, ಹಿಂದುಳಿದ ವರ್ಗಗಳ ಮುಖಂಡ ಆಯರಹಳ್ಳಿ ಶಂಕರಪ್ಪ, ಹಾಲ್ಕುರಿಕೆ ನಾಗರಾಜು,ಬಳ್ಳೆಕಟ್ಟೆ ಸುರೇಶ್, ಗುಲಾಬಿ ಸುರೇಶ್, ಶಶಿಕಿರಣ್, ಬಿಸಲೇಹಳ್ಳಿ ಜಗದೀಶ್, ಪರಪ್ಪ, ಸದಾಶಿವಯ್ಯ, ಗುರುಗದಹಳ್ಳಿ ಉಮಾಶಂಕರ್ ಮುಂತಾದವರು ಉಪಸ್ಥಿತರಿದರು.