ಸುದ್ದಿಮೂಲ ವಾರ್ತೆ
ಚಿಕ್ಕಬಳ್ಳಾಪುರ, ಏ. 27: ಮನುಷ್ಯರಾದವರು ಸಮಾಜಕ್ಕೆ ಏನಾದರೂ ಕೊಡುಗೆ ನೀಡಿದರೆ ಮಾತ್ರ ಮನುಷ್ಯ ಜನ್ಮ ಸಾರ್ಥಕವಾಗುತ್ತದೆ. ಭಗೀರಥರ ಆದರ್ಶ ಪಾಲಿಸುತ್ತಾ ಅವರ ಮಾರ್ಗದಲ್ಲಿ ನಾವೆಲ್ಲ ಮುನ್ನಡೆಯಬೇಕೆಂದು ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಭಗೀರಥ ಜಯಂತಿಯಲ್ಲಿ ಭಗೀರಥ ಮಹರ್ಷಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.
ಪ್ರಸ್ತುತ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿರುವ ಹಿನ್ನಲೆಯಲ್ಲಿ ಶ್ರೀ ಭಗೀರಥ ಜಯಂತಿಯನ್ನು ಸಾಂಕೇತಿಕವಾಗಿ ಆಚರಿಸಲಾಗುತ್ತಿದೆ. ಭಗೀರಥ ಮಹರ್ಷಿಗಳ ಕೊಡುಗೆ ಅಪಾರವಾದದ್ದು, ಶಿವನನ್ನು ಕುರಿತು ತೀವ್ರ ತಪಸ್ಸು ಮಾಡಿ ಶಿವನಿಂದ ಪಡೆದ ವರದ ಪ್ರತಿಫಲವೇ ಗಂಗಾದೇವಿಯು ನದಿಯ ರೂಪದಲ್ಲಿ ಭೂಮಿಗೆ ಇಳಿಯಲು ಕಾರಣವಾಯಿತು. ಪ್ರಯತ್ನಕ್ಕೆ ಮತ್ತೊಂದು ಹೆಸರೇ ಭಗೀರಥ.
ಅಸಾಧ್ಯವಾದ ಕೆಲಸವನ್ನು ಛಲಬಿಡದೆ ಕಾರ್ಯರೂಪಕ್ಕೆ ತಂದವರು. ಅಂತಹ ಮಹಾನ್ ತಪಸ್ವಿ ಭಗೀರಥ ಮಹರ್ಷಿ ಅವರ ತತ್ವಾದರ್ಶಗಳನ್ನು ನಾವೆಲ್ಲರೂ ಪಾಲಿಸೋಣ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಉಪ್ಪಾರ ಮಹಾಸಭಾ ರಾಜ್ಯ ಉಪಾಧ್ಯಕ್ಷ ಬಿ.ವೆಂಕಟೇಶ್ ಮಂಚನಬಲೆ, ಶ್ರೀ ಭಗೀರಥ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಅಧ್ಯಕ್ಷ ವಿ.ಕೃಷ್ಣಪ್ಪ, ಮುಖಂಡರಾದ ನಾರಾಯಣಸ್ವಾಮಿ, ರಂಜಿತ್ ಕುಮಾರ್, ಬೈರಪ್ಪ, ಆಂಜಿನಪ್ಪ, ದೇವರಾಜ್ ಮತ್ತಿತರರು ಉಪಸ್ಥಿತರಿದ್ದರು.