ಸುದ್ದಿಮೂಲವಾರ್ತೆ
ಕೊಪ್ಪಳ ಜು 17: ದಕ್ಷಿಣ ಭಾರತ ಮಹಾಕುಂಬ ಮೇಳ ಎಂದು ಜಾತ್ರೆಯನ್ನು ಕರೆಯುವ ಕೊಪ್ಪಳದ ಗವಿಮಠಕ್ಕೆ ಇಂದು ಅಧಿಕ ಮಾಸದ ಅಮವಾಸ್ಯೆ ಹಿನ್ನೆಲೆ ಅಪಾರ ಪ್ರಮಾಣದ ಭಕ್ತರು ಆಗಮಿಸಿದ್ದರು.
ಆಷಾಢ ಮಾಸ ಕಳೆದು ಶ್ರಾವಣ ಮಾಸ ಆರಂಭವಾಗಬೇಕಿತ್ತು. ಆದರೆ ಹಿಂದು ಪಂಚಾಂಗದಲ್ಲಿ ಇಂದು ಒಂದು ತಿಂಗಳು ಅಧಿಕ ಮಾಸವಾಗಿದೆ. ಅಧಿಕ ಮಾಸದ ಹಿನ್ನೆಲೆಯಲ್ಲಿ ಇಂದು ಗವಿಮಠಕ್ಕೆ ಲಕ್ಷಾಂತರ ಜನರು ಆಗಮಿಸಿದ್ದರು.
ಕೊಪ್ಪಳ ಜಿಲ್ಲೆ, ಗದಗ, ಬಳ್ಳಾರಿ, ವಿಜಯನಗರ, ರಾಯಚೂರು ಸೇರಿ ಸುತ್ತಮುತ್ತಲಿನ ಜಿಲ್ಲೆಯಿಂದ ಇಂದು ಮುಂಜಾನೆಯಿಂದಲೇ ಗವಿಮಠಕ್ಕೆ ಆಗಮಿಸಿ ಶ್ರೀಗವಿಸಿದ್ದೇಶ್ವರರ ಕರ್ತೃ ಗದ್ದುಗೆಯ ದರ್ಶನ ಪಡೆದರು. ಗದ್ದುಗೆ ಹಾಗು ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿಗಳ ದರ್ಶನಕ್ಕೆ ಸಾಲುಗಟ್ಟಿ ನಿಂತಿದ್ದರು. ಸಾಲಿನಲ್ಲಿ ಆಗಮಿಸಿ ದೇವರ ದರ್ಶನ ಹಾಗು ಸ್ವಾಮೀಜಿಗಳ ಆಶೀರ್ವಾದ ಪಡೆದರು.
ಶಕ್ತಿ ಯೋಜನೆ ಜಾರಿಯಾದ ಹಿನ್ನೆಲೆಯಲ್ಲಿ ಇಂದು ಗವಿಮಠಕ್ಕೆ ಭೇಟಿ ಮಾಡುವದರಲ್ಲಿ ಅತ್ಯಧಿಕ ಜನ ಮಹಿಳೆಯರು ಇದ್ದರು. ದೂರ ದೂರ ಊರಿನಿಂದ ಆಗಮಿಸಿದ ಮಹಿಳೆಯರು ಗವಿಸಿದ್ದೇಶ್ವರರ ದರ್ಶನ ಪಡೆದರು. ಇದೇ ವೇಳೆ ಇಲ್ಲಿ ದಾಸೋಹದಲ್ಲಿ ಊಟ ಮಾಡಿ ಮುಂದಿನ ಪ್ರಯಾಣ ಮಾಡಿದರು.
ಪ್ರತಿ ಸೋಮುವಾರ ಹಾಗು ಅಮವಾಸ್ಯೆಯ ದಿನದಂದು ಗವಿಮಠಕ್ಕೆ ಭಕ್ತರ ಸಂಖ್ಯೆ ಅಧಿಕ, ಇಂದು ಸೋಮುವಾರ ಹಾಗು ಅಮವಾಸ್ಯೆ ಎರಡೂ ಒಂದೇ ದಿನ ಬಂದಿರುವ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆ ಅಧಿಕವಾಗಿತ್ತು. ಬಂದ ಭಕ್ತರು ದೇವರ ದರ್ಶನ ಪಡೆದು ಕಾಯಿ ಒಡಿಸಿಕೊಂಡು ತಮ್ಮೂರಿಗೆ ಮರಳಿದರು.
ಸಾಮಾನ್ಯವಾಗಿ ಇತ್ತೀಚಿಗೆ ಇಲ್ಲಿಗೆ ಬರುವ ಭಕ್ತರು ಇಲ್ಲಿಂದ ಹುಲಿಗಿಯ ಶ್ರೀಹುಲಿಗೆಮ್ಮ ದೇವಸ್ಥಾನ ಹಾಗು ಅಂಜನಾದ್ರಿಗೆ ಭೇಟಿ ನೀಡುತ್ತಾರೆ. ಗವಿಮಠದಲ್ಲಿ ವಾಸ್ತವ್ಯಕ್ಕೆ ಯಾತ್ರಿ ನಿವಾಸವಿದ್ದು ಅತ್ಯಂತ ಕಡಿಮೆ ದರದಲ್ಲಿ ಇಲ್ಲಿ ವಾಸ್ತವ್ಯ ಹೂಡಿ ಇಲ್ಲಿ ದಾಸೋಹದಲ್ಲಿ ಊಟ ಮಾಡಿ ಜಿಲ್ಲೆಯ ಬೇರೆ ಬೇರೆ ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ.