ಸುದ್ದಿಮೂಲ ವಾರ್ತೆ
ಬೆಂಗಳೂರು, ಜೂ.21: ಹಗರಿಬೊಮ್ಮನಹಳ್ಳಿ ಮಾಜಿ ಶಾಸಕ ಭೀಮಾ ನಾಯ್ಕ ಅವರು ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಅಧ್ಯಕ್ಷರಾಗಿ ಅವಿರೋಧ ಆಯ್ಕೆಗೊಂಡಿದ್ದಾರೆ.
ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಇಂದು ಚುನಾವಣೆ ನಿಗದಪಡಿಸಲಾಗಿತ್ತು. ಭೀಮಾನಾಯ್ಕ ಮಾತ್ರ ನಾಮಪತ್ರ ಸಲ್ಲಿಸಿದ ಕಾರಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ನೂತನ ಕೆಎಂಎಫ್ ಅಧ್ಯಕ್ಷರಿಗೆ ಅಭಿನಂದಿಸಿ, ಹಾಲು ಉತ್ಪಾದಕರ ಹಿತ ಕಾಪಾಡುವ ನಿಟ್ಟಿನಲ್ಲಿ ಕಾಳಜಿ ವಹಿಸಿ ಎಂದು ಸಲಹೆ ಮಾಡಿದ್ದಲ್ಲದೆ, ಈ ವಿಷಯಕ್ಕೆ ಸಂಬಂಧಪಟ್ಟಂತೆ ತಾವು ಸಹ ಮುಖ್ಯಮಂತ್ರಿಯೊಂದಿಗೆ ಚರ್ಚೆ ಮಾಡಲಾಗುವುದು ಎಂದು ರಾಜಣ್ಣ ಹೇಳಿದರು.
ರೈತರ ಹಾಲಿನ ದರ ಹೆಚ್ಚಳವಾಗಬೇಕು. ಇದಕ್ಕೆ ಗ್ರಾಹಕರು ಸಹಕರಿಸಬೇಕು ಎಂದು ಹಾಲಿನ ದರದ ಹೆಚ್ಚಳ ಮುನ್ಸೂಚನೆ ನೀಡಿದ ರಾಜಣ್ಣ, ರಾಜ್ಯದಲ್ಲಿ ಕೆಎಂಎಫ್ ನಂದಿನಿ- ಅಮೂಲ್ ಜೊತೆ ವಿಲೀನ ಮಾಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಈ ವೇಳೆ ಪಶುಸಂಗೋಪನೆ ಸಚಿವ ಕೆ. ವೆಂಕಟೇಶ್ ಮತ್ತು ಶಾಸಕ ಕೆ.ಎಂ. ಶಿವಲಿಂಗೇಗೌಡ ಸಹ ಹಾಜರಿದ್ದರು ಭೀಮಾನಾಯ್ಕ್ ಅವರನ್ನು ಅಭಿನಂದಿಸಿದರು.