ಸುದ್ದಿಮೂಲ ವಾರ್ತೆ
ನ. 19 : ತಾಲೂಕಿನಲ್ಲಿ ಭೂಮಿ ಬೆಲೆ ಗಗನಕ್ಕೇರಿದ್ದು ಸರಕಾರಿ ಗೋಮಾಳ ಜಾಗಗಳನ್ನು ಕೆಲ ಭೂಮಾಫಿಯಾಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿ ಖಾತೆ ಮಾಡಿಕೊಂಡಿದ್ದಾರೆ ಇದಕ್ಕೆ ಸರಕಾರಿ ಅಧಿಕಾರಿಗಳು ಸಹ ಶಾಮೀಲಾಗಿರುವವರ ವಿರುದ್ಧ ನಮ್ಮ ಸಂಘಟನೆಯಿಂದ ಹೋರಾಟ ಮಾಡಲಾಗುವುದು ಎಂದು ಪ್ರಜಾವಿಮೋಚನ ಬಹುಜನ ಸಮಿತಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಬಿಜ್ಜವಾರ ನಾಗರಾಜ್ ತಿಳಿಸಿದರು.
ಪಟ್ಟಣದ ದೊಡ್ದಬಳ್ಳಾಪುರ ರಸ್ತೆಯಲ್ಲಿರುವ ಪ್ರಜಾವಿಮೋಚನ ಚಳುವಳಿ ಬಹುಜನ ಸಮಿತಿ ಕಚೇರಿಯಲ್ಲಿ ಜಿಲ್ಲಾಧ್ಯಕ್ಷರ ಪುನರಾಯ್ಕೆ ಹಾಗೂ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಗ್ರಾ.ಪಂ ಚುನಾವಣೆಯಲ್ಲಿ ಸ್ಪರ್ಧಿಸಿ ಚುನಾಯಿತನಾದ ಮೇಲೆ ಕಳೆದ 2 ವರ್ಷಗಳಿಂದ ಸಂಘಟನೆಯ ಹೋರಾಟ ಕುಂಠಿತವಾಗಿತ್ತು ಹಾಗೂ ಜಿಲ್ಲಾಧ್ಯಕ್ಷರ ಸ್ಥಾನ ಖಾಲಿ ಇದ್ದದರಿಂದ ಸಂಘಟನೆ ತಟಸ್ಥವಾಗಿತ್ತು. ಸಂಘಟನೆಯನ್ನು ಬಲಪಡಿಸಿ ಭ್ರಷ್ಟಭೂಗಳ್ಳರ ವಿರುದ್ಧ ಹೋರಾಟ ಮಾಡಲು ಜಿಲ್ಲಾಧ್ಯಕ್ಷರ ನಾಯಕತ್ವ ಅತಿ ಮುಖ್ಯ ಹಾಗಾಗಿ ನಮ್ಮ ಸಂಘಟನೆಯಲ್ಲಿ ಪ್ರಾಮಾಣಿಕವಾಗಿ ಈ ಹಿಂದೆ ಕೆಲಸ ನಿರ್ವಹಿಸುತ್ತಿದ್ದ ನಂಜೇಶ್ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ಪುನರಾಯ್ಕೆ ಮಾಡಲಾಗಿದೆ.
ದೇವನಹಳ್ಳಿ ತಾಲೂಕಿನಲ್ಲಿ ಕೆಐಎಡಿಬಿ ಕೆಲ ಗ್ರಾಮಗಳಲ್ಲಿ ರೈತರಿಂದ ಭೂಮಿ ವಶಪಡಿಸಿಕೊಂಡು ಉಳಿದ ಸರಕಾರಿ ಜಮೀನುಗಳಿಗೆ 1968-69 ರಲ್ಲಿ ಮಂಜೂರಾದ ರೀತಿಯಲ್ಲಿ ದಾಖಲೆಗಳನ್ನು ಸೃಷ್ಟಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ತಾಲ್ಲೂಕಿನಲ್ಲಿ ನಕಲಿ ದಾಖಲೆಗಳ ಸೃಷ್ಟಿಸುವ ದೊಡ್ಡಮಟ್ಟದ ಭ್ರ್ರಷ್ಟಾಚಾರ ನಡೆಯುತ್ತಿದೆ ಸರಕಾರಿ ಆಸ್ತಿಯನ್ನು ಲೂಟಿ ಮಾಡುವ ಭೂಗಳ್ಳರಿಗೆ ತಹಶಿಲ್ದಾರ್ ಹಾಗೂ ಕಂದಾಯ ಅಧಿಕಾರಿಗಳು ಸಾಥ್ ನೀಡುತ್ತಿದ್ದಾರೆ.
ಕಂದಾಯ ಇಲಾಖೆಯಲ್ಲಿ ಬಹಳಷ್ಟು ಅಕ್ರಮಗಳಾಗುತ್ತಿದ್ದು, ತಾಲೂಕು ಕಚೇರಿಗಳಲ್ಲಿ ಸರಕಾರಿ ಸುತ್ತೋಲೆಗಳನ್ನು ಮೀರಿ ಬೇಕಾದ ವ್ಯಕ್ತಿಗಳಿಗೆ ಜಮೀನು ಮಂಜೂರು ಮಾಡುತ್ತಿದ್ದಾರೆ. ಅಧಿಕಾರಿಗಳಿಗೆ ಬೇಕಾದ ರಾಜಕೀಯ ಹಿಂಬಾಲಕರಿಗೆ 18 ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ಜಮೀನು ಮಂಜೂರು ಮಾಡುವಂತಿಲ್ಲ ಆಗಿದ್ದರು ಸಹ ಮಂಜೂರು ಮಾಡುತ್ತಿದ್ದಾರೆ. ಕೆಐಎಡಿಬಿಯಲ್ಲಿ ಅರ್ಹ ಪಲಾನುಭವಿಗಳಿಗೆ ಭೂ ಪರಿಹಾರ ಹಣ ಸಿಗುತ್ತಿಲ್ಲ. ದಳ್ಳಾಗಿಗಳಿಗೆ ಸಿಗುತ್ತಿದ್ದು ಅದರ ವಿರುದ್ಧ ನಮ್ಮ ಸಂಘಟನೆ ಹೋರಾಟದ ರೂಪುರೇಷೆಗಳನ್ನು ಸಿದ್ದಪಡಿಸಲಿದ್ದೇವೆ ಹಾಗೂ ಸರಕಾರದಿಂದ ದೊರೆಯುವ ಸವಲತ್ತುಗಳನ್ನು ಬಡವರಿಗೆ ತಲುಪಿಸುವ ಕೆಲಸ ನಮ್ಮ ಸಂಘಟನೆಯಿಂದ ಮಾಡಲಾಗುವುದು ಎಂದರು.
ಪ್ರಜಾವಿಮೋಚನ ಬಹುಜನ ಸಮಿತಿ ಜಿಲ್ಲಾಧ್ಯಕ್ಷ ನಂಜೇಶ್ ಮಾತನಾಡಿ, ಕಾರಣಾಂತದಿಂದ ಸಂಘಟನೆ 2 ವರ್ಷದಿಂದ ತಟಸ್ಥವಾಗಿತ್ತು. ಮತ್ತೆ ನನ್ನನ್ನು ಮರು ಆಯ್ಕೆ ಮಾಡಿದ್ದಾರೆ. ಜಿಲ್ಲೆಯಲ್ಲಿ ಸಂಘಟನೆಯನ್ನು ಬಲಿಷ್ಟಗೊಳಿಸಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಹೋರಾಟ ಮಾಡಲು ಸಜ್ಜಾಗಿದ್ದೇವೆ ಎಂದರು.
ಇದೆ ವೇಳೆ ಪ್ರಜಾವಿಮೋಚನ ಬಹುಜನ ಸಮಿತಿ ರಾಜ್ಯ ಉಪಾಧ್ಯಕ್ಷ ಸಿಂಗ್ರಹಳ್ಳಿ ನರಸಿಂಹಯ್ಯ, ಪ್ರಧಾನ ಕಾರ್ಯದರ್ಶಿ ಎಂ.ಚನ್ನಿಗರಾಯಪ್ಪ, ಗೌರವಾಧ್ಯಕ್ಷ ಶ್ರೀನಿವಾಸ್, ಗ್ರಾಮಾಂತ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಲಕ್ಷ್ಮೀ ಶ್ರೀನಿವಾಸ್, ತಾಲೂಕು ಅಧ್ಯಕ್ಷ ಮುನಿಂದ್ರಕುಮಾರ್, ದೊಡ್ದಬಳ್ಳಾಪುರ ನಗರ ಅಧ್ಯಕ್ಷ ಶ್ರೀನಿವಾಸ್, ಮಹಿಳಾ ಘಟಕ ತಾಲೂಕು ಅಧ್ಯಕ್ಷೆ ಅನುಪಮ, ಉಪಾಧ್ಯಕ್ಷ ಶಿವಾನಂದ್, ಕಾರ್ಯದರ್ಶಿ ಸುರೇಶ್, ಮೂರ್ತಿ ಪದಾಧಿಕಾರಿಗಳು, ಮುಖಂಡರು ಇದ್ದರು.