ಸುದ್ದಿಮೂಲ ವಾರ್ತೆ
ತುಮಕೂರು, ಏ.2: ಗುಬ್ಬಿ ತಾಲ್ಲೂಕಿನಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಶೇ.100 ರಷ್ಟು ಮತದಾನವಾಗಬೇಕಿದೆ. ಈನಿಟ್ಟಿನಲ್ಲಿ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮತದಾನದ ಬಗ್ಗೆ ಹೆಚ್ಚಿನ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವಂತೆ ತಾಲ್ಲೂಕು ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಪರಮೇಶ್ ಕುಮಾರ್ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಕರೆ ನೀಡಿದರು.
ಗುಬ್ಬಿ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಬೈಕ್ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳ ಮಾರ್ಗದರ್ಶನದಲ್ಲಿ ತಾಲ್ಲೂಕು ಸ್ವೀಪ್ ಚಟುವಟಿಕೆಗಳ ಅಂಗವಾಗಿ ಇಂದು ಬೈಕ್ ಮೂಲಕ ಜಾಗೃತಿ ಮೂಡಿಸಲಾಗಿದೆ. ಕಳೆದ ಬಾರಿಯ ವಿಧಾನಸಭಾ
ಚುನಾವಣೆಯಲ್ಲಿ ಮತದಾನದ ಪ್ರಮಾಣ ಕಡಿಮೆಯಾಗಿತ್ತು. ಆದರೆ ಈ ಬಾರಿ ಮಾತ್ರ ಮತದಾನದ ಪ್ರಮಾಣ ಶೇ.100 ರಷ್ಟು ಆಗಲೇಬೇಕು. ಅಲ್ಲದೆ ಯುವ ಮತದಾರರ ಗಮನ ಸೆಳೆಯುವ ನಿಟ್ಟಿನಲ್ಲಿ ಎಲ್ಲರೂ ಮುಂದಾಗಬೇಕಿದೆ. ಈ ನಿಟ್ಟಿನಲ್ಲಿ ತಾಲ್ಲೂಕಿನ ಎಲ್ಲಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಎಲ್ಲಾ ಹಳ್ಳಿಗಳಲ್ಲಿಯೂ ಸ್ವಚ್ಛ ವಾಹಿನಿ ವಾಹನದ ಮೂಲಕ ವ್ಯಾಪಕ ಪ್ರಚಾರ ಕೈಗೊಳ್ಳುವಂತೆ ಮನವಿ ಮಾಡಿದರು.
ಗುಬ್ಬಿ ತಾಲೂಕು ಆರೋಗ್ಯಾಧಿಕಾರಿಗಳಾದ ಡಾ. ಬಿಂದು ಮಾದವ್ ಮಾತನಾಡಿ, ಈ ಬಾರಿ ಕಳೆದ ಬಾರಿಗಿಂತ ಹೆಚ್ಚಿನ ಮತ ಚಲಾವಣೆ ಆಗಬೇಕು ಯಾವೊಬ್ಬ ಮತದಾರರೂ ಮತದಾನದಿಂದ ಹೊರಗೆ ಉಳಿಯಬಾರದು. ಈ ನಿಟ್ಟಿನಲ್ಲಿ ಎಲ್ಲರೂ ಸಹ ಹೆಚ್ಚು ಶ್ರಮವಹಿಸಿ ಕೆಲಸ ನಿರ್ವಹಿಸುವಂತೆ ಮನವಿ ಮಾಡಿದರು.
ಬೈಕ್ ಜಾಥಾ ಕಾರ್ಯಕ್ರಮದಲ್ಲಿ ತಾಲೂಕಿನ ಸ್ವೀಪ್ ನೋಡಲ್ ಅಧಿಕಾರಿ ಸುಮನ, ಜಿಲ್ಲಾ ಪಂಚಾಯಿತಿ ಸ್ವೀಪ್ ಸಮಿತಿ ಸಹಾಯಕ ನೋಡಲ್ ಅಧಿಕಾರಿ ಜಿ.ಆರ್. ಶ್ರೀನಿವಾಸ್ , ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ(ಗ್ರಾ.ಉ.)ರಾದ ಜೆ.ಹೆಚ್.ಇಂದ್ರೇಶ್, ತಾಲ್ಲೂಕು ಸಹಾಯಕ ಲೆಕ್ಕಾಧಿಕಾರಿ, ತಾಲ್ಲೂಕು ಐಇಸಿ ಸಂಯೋಜಕರಾದ ರಾಘವೇಂದ್ರ, ಟಿ.ಕೆ. ವಿನುತ್ ಸೇರಿದಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ತಾಲ್ಲೂಕು ಪಂಚಾಯಿತಿ ಸಿಬ್ಬಂದಿ ಹಾಜರಿದ್ದರು.
ಗುಬ್ಬಿ ತಾಲೂಕು ಪಂಚಾಯಿತಿ ಆವರಣದಿಂದ ಆರಂಭವಾದ ಬೈಕ್ ಜಾಥಾವು ಶ್ರೀ ಗೋಸಲ ಚನ್ನಬಸವೇಶ್ವರ ಸ್ವಾಮಿ ದೇವಸ್ಥಾನದ ಮಾರ್ಗವಾಗಿ ಬಿದರೆ ಹಾಗೂ ಇರಕಸಂದ್ರ ಗ್ರಾಮ ಪಂಚಾಯಿತಿಗಳ ಮೂಲಕ ಚೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಚರಿಸಿ ಜಾಗೃತಿ ಮೂಡಿಸಲಾಯಿತು.