ಸುದ್ದಿಮೂಲ ವಾರ್ತೆ
ದೇವನಹಳ್ಳಿ, ಜು 22 : ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ಭೂ ಸ್ವಾಧೀನಕ್ಕೆ ಒಳಪಟ್ಟಿರುವ 13 ಹಳ್ಳಿಗಳಲ್ಲಿಯೂ ಶುಕ್ರವಾರ ರೈತರ ಪ್ರತಿಭಟನೆಯ ಕಾವು ಜೋರಾಗಿತ್ತು.
ನೂತನ ಸರ್ಕಾರವೂ ರೈತ ವಿರೋಧಿ ವರ್ತನೆಯನ್ನು ಖಂಡಿಸಿ ಬೈಕ್ ರ್ಯಾಲಿಯ ಮೂಲಕ ಅನ್ನದಾತರು ಆಕ್ರೋಶ ಹೊರಹಾಕಿ, ಫಲವತ್ತಾದ ಕೃಷಿ ಭೂಮಿಯ ಉಳಿವಿಗಾಗಿ ಘೋಷಣೆ ಕೂಗಿದರು.
ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿಯ ವತಿಯಿಂದ ಇಲ್ಲಿನ ಚನ್ನರಾಯಪಟ್ಟಣ ನಾಡಕಚೇರಿಯ ಮುಂದೆ ‘ರೈತ ಹುತಾತ್ಮ’ ದಿನಾಚರಣೆಯ ಪ್ರಯುಕ್ತ ನರಗುಂದ- ನವಲಗುಂದ ರೈತ ಬಂಡಾಯದಲ್ಲಿ ಹುತಾತ್ಮರಾದ ಈರಪ್ಪ ಕಡ್ಲಿಕೊಪ್ಪ ಮತ್ತು ಬಸಪ್ಪ ಲಕ್ಕುಂಡಿರವರ ಸ್ಮರಣಾರ್ಥ ಸ್ಥಾಪಿಸಿದ್ದ ವೇದಿಕೆಯಲ್ಲಿ ರಾಜ್ಯದ ವಿವಿಧ ಭಾಗದ ರೈತ ಮುಖಂಡರು ಸರ್ಕಾರ ವಿರುದ್ಧ ಹರಿಹಾಯ್ದರು.
ರೈತ ಚಳುವಳಿಯ ಪ್ರಮುಖರಾದ ಚುಕ್ಕಿ ನಂಜುಂಡಸ್ವಾಮಿ ಮಾತನಾಡಿ, ‘ರಾಜ್ಯದಲ್ಲಿ ಯಾವುದೇ ಪಕ್ಷವೂ ಅಧಿಕಾರಕ್ಕೆ ಬಂದರೂ, ರೈತರ ಬಗ್ಗೆ ಇರುವ ಧೋರಣೆ ಬದಲಾಗಿಲ್ಲ. ಎಲ್ಲರೂ ಅನ್ನದಾತರನ್ನು ಒಕ್ಕಲೆಬ್ಬಿಸುವುದು, ಗುಂಡಿಕ್ಕಿ ಕೊಲ್ಲುವುದು ಹಾಗೂ ಕೃಷಿಕರ ಜೀವನ ಹಾಳು ಮಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದು, ‘ಅಭಿವೃದ್ಧಿ’ ಎಂಬ ಮಾರ್ಗಸೂಚಿಯನ್ನೇ ಸರ್ಕಾರ ಬದಲಾಯಿಸಿಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು.
ರೈತ ಚಳುವಳಿಯ ಕೆ.ಟಿ.ಗಂಗಾಧರ ಮಾತನಾಡಿ, ‘ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ರೈತರು ತಾಳ್ಮೆಯಿಂದ ಇದ್ದು, ಕಳೆದ 473 ದಿನಗಳಿಂದ ಚನ್ನರಾಯಪಟ್ಟಣ ರೈತರು ಹೋರಾಟ ಮಾಡುತ್ತಿದ್ದರು. ರಾಜ್ಯ ಸರ್ಕಾರ ಮೌನವಾಗಿರುವುದು ಖಂಡನೀಯವಾದದ್ದು, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಕೆ.ಎಚ್.ಮನಿಯಪ್ಪರವರು ಗೆದ್ದು ಬಂದರೇ ಭೂ ಸ್ವಾಧೀನ ಕೈಬಿಡುವುದಾಗಿ ತಿಳಿಸಿದ್ದರು ಈಗ ನುಡಿದಂತೆ ನಡೆಯಬೇಕಿದೆ’ ಎಂದು ತಿಳಿಸಿದರು.
ಪ್ರಾಂತ್ಯ ರೈತ ಸಂಘದ ಚಂದ್ರ ತೇಜಸ್ವಿ, ದೇವನಹಳ್ಳಿ ಪಟ್ಟಣದಲ್ಲಿ ಕಳೆದ ವರ್ಷ ಆಗಸ್ಟ್ 15ರಂದು ನಡೆದ ಜಿಲ್ಲಾ ಮಟ್ಟದ ಸ್ವಾತಂತ್ರೋತ್ಸವ ಸಮಾರಂಭದ ವೇಳೆ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಸದಸ್ಯರನ್ನು, ರೈತರನ್ನು ಪೊಲೀಸರ ಬೂಟು ಕಾಲುಗಳಲ್ಲಿ ಒದ್ದು, ಅಂದಿನ ಬಿಜೆಪಿ ಸರ್ಕಾರವೂ ಕ್ರಿಮಿನಲ್ ಪ್ರಕರಣ ದಾಖಲು ಮಾಡಲಾಗಿತ್ತು. ಕಾಂಗ್ರೆಸ್ ಸರ್ಕಾರವೂ ನಿಜವಾಗಲೂ ರೈತಪರವಾಗಿದ್ರೇ ಈ ಕ್ರಿಮಿನಲ್ ಪ್ರಕರಣ ರದ್ದು ಮಾಡಿ, ಮುಂದಿನ ಆಗಸ್ಟ್ 15ರ ಒಳಗೆ ಮುಖ್ಯಮಂತ್ರಿ ಸಿದ್ದರಾಮಯ್ಯರವರೇ ರೈತ ಹೋರಾಟಗಾರರ ಬಳಿಗೆ ಬಂದು ಭೂ ಸ್ವಾಧೀನ ಪ್ರಕ್ರಿಯೆ ರದ್ದು ಮಾಡಿರುವ ಆದೇಶ ಪತ್ರ ನೀಡಲಿ ಎಂದು ಒತ್ತಾಯಿಸಿದರು.
ದೇವನಹಳ್ಳಿಯ ಚನ್ನರಾಯಪಟ್ಟಣ ಹೋಬಳಿಯ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿಯ ವತಿಯಿಂದ ಹಮ್ಮಿಕೊಂಡಿದ್ದ ‘ರೈತ ಹುತಾತ್ಮ’ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ವಿರುದ್ಧ ವಿವಿಧ ಭಾಗದಿಂದ ಆಗಮಿಸಿದ್ದ ಹೋರಾಟಗಾರರು ಧಿಕ್ಕಾರ ಕೂಗಿದರು.
ದೇವನಹಳ್ಳಿಯ ಚನ್ನರಾಯಪಟ್ಟಣ ಹೋಬಳಿ 13 ಹಳ್ಳಿಯಲ್ಲಿ ರೈತರು ಬೈಕ್ ರ್ಯಾಲಿ ಮಾಡುವ ಮೂಲಕ ರಾಜ್ಯ ಸರ್ಕಾರ ವಿರುದ್ಧ ಪ್ರತಿಭಟಿಸಿದರು. ಇದೇ ವೇಳೆ ಕೋಲಾರ ಕಾಮ್ರೇಡ್ ಗೀತಾ, ಚಿಕ್ಕಬಳ್ಳಾಪುರದ ಆರ್.ಆಂಜನೇಯರೆಡ್ಡಿ, ಅನುಸೂಯಮ್ಮ, ಪ್ರಭಾ ಬೆಳವಂಗಲ, ಬೆಳಗಾವಿ ಮಂಜು ಗದಾಡಿ, ಕೋಲಾರದ ನಳಿನಿ ಗೌಡ, ಮೈಸೂರಿನ ರಘು, ರಾಮನಗರ ತಮ್ಮೇಗೌಡ, ದಾವಣಗೆರೆ ಪರಮೇಶ್ವರಪ್ಪ, ಚಿಕ್ಕಬಳ್ಳಾಪುರ ಲಕ್ಷ್ಮೀನಾರಾಯಣ, ಮಂಡ್ಯದ ನಾಗಣ್ಣ ಸೇರಿದಂತೆ ಇದ್ದರು.