ಸುದ್ದಿಮೂಲ ವಾರ್ತೆ
ಬೆಂಗಳೂರು,ಜೂ.22:ಎಲ್ಲೋ ಹಾತ್ ರೈಡರ್ಸ್ ಕ್ಲಬ್ ಹಾಗೂ ರೆಡಿಅಸಿಸ್ಟ್ ಸಂಸ್ಥೆಯ ಸಹಯೋಗದೊಂದಿಗೆ ಮೊದಲ ಬಾರಿಗೆ ದೇಶದ ಪ್ರಮುಖ ಬೈಕ್ ರೈಡರ್ ಗಳು ಬೆಂಗಳೂರಿನಲ್ಲಿ ಸಮಾವೇಶಗೊಂಡಿದ್ದು, ಬೈಕ್ ರೈಡಿಂಗ್ ಸಮುದಾಯಕ್ಕೆ ರಾಷ್ಟ್ರಮಟ್ಟದಲ್ಲಿ ಪುಷ್ಟಿ ನೀಡುವ ಪ್ರಯತ್ನ ಆರಂಭವಾಗಿದೆ.
ಬೆಂಗಳೂರಿನ ಕನಕಪುರ ರಸ್ತೆಯ ಬಿ.ಎಲ್.ಆರ್. ಬ್ರೇವಿಂಗ್ ರೆಸಾರ್ಟ್ಸ್ ನಲ್ಲಿ ಬೈಕ್ ರೈಡರ್ಸ್ ಗಳು ಅಮಿತೋತ್ಸಾಹ, ಸ್ಪೂರ್ತಿಯಿಂದ ರೋಮಾಂಚಕಾರಿ ಸಾಹಸ ಪ್ರದರ್ಶನ ಮಾಡಿದರು. ಬಳಿಕ ನಡೆದ ಕಾರ್ಯಕ್ರಮದಲ್ಲಿ ದೇಶದ ಪ್ರಮುಖ ಬೈಕ್ ರೈಡರ್ಸ್ ಗಳಿಗೆ ಸ್ವತಃ ಬೈಕ್ ರೈಡರ್ ಆಗಿರುವ ಬಾಲಿವುಡ್ ಖ್ಯಾತ ನಟ ವಿವೇಕ್ ಒಬೆರಾಯ್ ಎಲ್ಲೋ ಹಾತ್ ರೈಡರ್ಸ್ ಕ್ಲಬ್ ಪ್ರಶಸ್ತಿ ನೀಡಿ ಗೌರವಿಸಿದರು.
ನಂತರ ಮಾತನಾಡಿದ ವಿವೇಕ್ ಒಬೆರಾಯ್ ದೇಶದಲ್ಲಿ ಬೈಕ್ ರೈಡರ್ಸ್ ಗಳಿಗೆ ಮಾನ್ಯತೆ ಇರಲಿಲ್ಲ. ಇದೀಗ ಬೈಕ್ ರೈಡರ್ ಗಳನ್ನು ಉತ್ತೇಜಿಸಲು ದೊಡ್ಡ ಮಟ್ಟದ ವೇದಿಕೆ ಕಲ್ಪಿಸಲಾಗಿದೆ. ಬೈಕ್ ರೈಡಿಂಗ್ ಒಂದು ಅದ್ಭುತ ಅನುಭವವಷ್ಟೇ ಅಲ್ಲದೇ ಜೀವನ ಕ್ರಮವಾಗಿದೆ. ಇದು ದೇಶವನ್ನು ಒಗ್ಗೂಡಿಸುತ್ತದೆ. ಹೀಗಾಗಿ ಬೈಕ್ ರೈಡರ್ ಗಳಿಗೆ ಸಕಲ ವ್ಯವಸ್ಥೆ ಹೊಂದಿರುವ ಪರಿಸರ ಸ್ನೇಹಿ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಇನ್ನೊಂದು ವರ್ಷದಲ್ಲಿ ೨೯ ರಾಜ್ಯಗಳಲ್ಲೂ ಬೈಕ್ ರೈಡಿಂಗ್ ಕ್ಲಬ್ ಗಳನ್ನು ವಿಸ್ತರಿಸಲಾಗುವುದು. ವಿಶೇಷವಾಗಿ ಮಹಿಳೆಯರಿಗಾಗಿಯೇ ಪ್ರತ್ಯೇಕ ಬೈಕ್ ರೈಡಿಂಗ್ ಕ್ಲಬ್ ಗಳನ್ನು ಸ್ಥಾಪಿಸಿ ಎಲ್ಲಾ ರೀತಿಯ ರಕ್ಷಣೆ, ಸುರಕ್ಷತೆ ಕಲ್ಪಿಸಿ ಈ ವಲಯದಲ್ಲಿ ಹೊಸ ಅಧ್ಯಾಯ ಆರಂಭಿಸಲಾಗುವುದು ಎಂದು ಪ್ರಕಟಿಸಿದರು.
ಬೈಕ್ ರೈಡಿಂಗ್ ನಲ್ಲಿ ಸುರಕ್ಷತೆಗೆ ಒತ್ತು ನೀಡಬೇಕು. ಸರ್ಕಾರದ ನಿಯಮಗಳನ್ನು ಪ್ರತಿಯೊಬ್ಬರೂ ಪರಿಪಾಲಿಸಬೇಕು. ತಾವೂ ಕೂಡ ಹೆಲ್ಮೆಟ್ ಧರಿಸಿದೇ ದಂಡ ಕಟ್ಟಿದ್ದೇನೆ. ಸಿನೆಮಾಗಳಲ್ಲಿ ಹೆಲ್ಮಟ್ ಧರಿಸದೇ ರೈಡ್ ಮಾಡುವುದನ್ನು ಮಾದರಿಯಾಗಿ ಸ್ವಿಕರಿಸಬಾರದು. ಸುರಕ್ಷತೆಗೆ ಒತ್ತು ನೀಡಬೇಕು. ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳು ಬೈಕ್ ರೈಡಿಂಗ್ ವಲಯಕ್ಕೆ ದೊಡ್ಡ ಮಟ್ಟದಲ್ಲಿ ಪರಿಚಯಿಸಿದರೆ ಪರಿಸರ ಸ್ನೇಹಿ ವಾಹನಗಳನ್ನು ಉತ್ತೇಜಿಸಿದಂತಾಗಲಿದೆ. ಕರ್ನಾಟಕ ಪ್ರವಾಸೋದ್ಯಮಕ್ಕೆ ಖ್ಯಾತಿ ಪಡೆದಿದ್ದು, ಬೈಕ್ ರೈಡಿಂಗ್ ಮೂಲಕ ವಿಶಿಷ್ಟ ತಾಣಗಳನ್ನು ಅನ್ವೇಷಣೆ ಮಾಡಬೇಕು ಎಂದು ವಿವೇಕ್ ಒಬೆರಾಯ್ ಸಲಹೆ ಮಾಡಿದರು.
ರೆಡಿಅಸಿಸ್ಟ್ ನ ಸಂಸ್ಥಾಪಕ ಮತ್ತು ಸಿಇಒ ಎಸ್.ವಿ. ವಿಮಲ್ ಸಿಂಗ್ ಮಾತನಾಡಿ, ಬೈಕ್ ರೈಡಿಂಗ್ ಮೂಲಕ ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆಯಲಿದ್ದು, ವಿವಿಧ ಕ್ಷೇತ್ರಗಳ ಬೆಳಣಿಗೆಗೆ ಸಹಕಾರಿಯಾಗಲಿದೆ. ನಿರ್ದಿಷ್ಟ ಉದ್ದೇಶದಿಂದ ಬೈಕ್ ರೈಡಿಂಗ್ ಮಾಡಬೇಕು ಎನ್ನುವುದು ನಮ್ಮ ಉದ್ದೇಶವಾಗಿದ್ದು, ರೈಡಿಂಗ್ ಮೂಲಕ ಪ್ರಮುಖ ಸ್ಥಳಗಳನ್ನು ವೀಕ್ಷಿಸುವ ದ್ಯೇಯ ಹೊಂದಿರಬೇಕು ಎಂದರು.
ರೆಡಿಅಸಿಸ್ಟ್ ಸಂಸ್ಥೆ ಈ ಕಾರ್ಯಕ್ರಮದ ಮೂಲಕ ಹಲವು ೩೬ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಾಯೋಜಕತ್ವವನ್ನು ಸಂಸ್ಥೆ ವಹಿಸಿಕೊಂಡಿತು.