ಸುದ್ದಿಮೂಲ ವಾರ್ತೆ
ಮೈಸೂರು, ಏ.28: ಚುನಾವಣೆಯ ಪ್ರಚಾರ ಅಬ್ಬರ ಹೆಚ್ಚಾಗುತ್ತಿದ್ದಂತೆ ಆರೋಪ, ಪ್ರತ್ರಾರೋಪಗಳು ಮತ್ತು ಟೀಕೆ, ಟಿಪ್ಪಣೆಗಳು ಎಲ್ಲೆ ಮೀರುತ್ತಿವೆ. ಹಾಗೆಯೇ ಹಲ್ಲೆ, ಕಲ್ಲು ತೂರಾಟ ಪ್ರಕರಣಗಳು ಮತ್ತು ವೈಯಕ್ತಿಕ ನೆಲೆಯಲ್ಲಿ ಆರೋಪ ಮಾಡಲಾಗುತ್ತಿದೆ. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರ ಹುಟ್ಟೂರು ಸಿದ್ದರಾಮನಹುಂಡಿಯಲ್ಲಿ ವರುಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೋಮಣ್ಣನವರು ಗುರುವಾರ ರಾತ್ರಿ ಪ್ರಚಾರ ಮಾಡುತ್ತಿದ್ದ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದು, ಕಲ್ಲು ತೂರಾಟ ನಡೆದು, ಓರ್ವ ಬಿಜೆಪಿ ಕಾರ್ಯಕರ್ತ ಗಾಯಗೊಂಡಿದ್ದ ಪ್ರಕರಣ ಈಗ ಮಗದಷ್ಟು ಆರೋಪ, ಟೀಕೆಗಳಿಗೆ ಗ್ರಾಸವಾಗಿದೆ. ಎರಡೂ ಪಕ್ಷಗಳ ನಡುವೆ ಈ ಘಟನೆ ಹಿನ್ನೆಲೆಯಲ್ಲಿ ಸಮರವೇ ನಡೆಯುತ್ತಿದೆ.
ಅಭ್ಯರ್ಥಿ ಸೋಮಣ್ಣ ಮತ್ತು ಸಂಸದ ಪ್ರತಾಪ್ ಸಿಂಹ ಮತ್ತವರ ಬೆಂಬಲಿಗರು ನೇರವಾಗಿ ಇದೇ ಕ್ಷೇತ್ರದಿಂದ ಕಣಕ್ಕೆ ಇಳಿದಿರುವ ಸಿದ್ದರಾಮಯ್ಯನವರ ಕುಮ್ಮಕ್ಕಿನಿಂದಲೇ ನಡೆದಿದೆ. ಇದು ಅವರ ಪಾಳೆಗಾರಿಕೆಗೆ ಸ್ಪಷ್ಟ ನಿರ್ದಶನ. ಸೋಲುವ ಹತಾಶೆಯಿಂದ ಕಾಂಗ್ರೆಸ್ ಕಾರ್ಯಕರ್ತರಿಂದ ಹಲ್ಲೆ ಮಾಡಿಸಲಾಗುತ್ತಿದೆ ಎಂದು ಆರೋಪ ಮಾಡಿದ್ದಾರೆ.
ಇದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯನವರು ಈ ಗಲಾಟೆಗೆ ಬಿಜೆಪಿಯವರೇ ನೇರ ಕಾರಣ, ಬಿಜೆಪಿ ಸಂಸದ ಕುಮ್ಮಕ್ಕಿನಿಂದಲೇ ಇದು ನಡೆದಿದೆ ಎಂದು ಹೇಳಿದ್ದರೆ, ಕಾಂಗ್ರೆಸ್ ವಕ್ತಾರ ಲಕ್ಷಣ ಅವರು ಮತದಾರರು ಕಾಂಗ್ರೆಸ್ ಪರ ಒಲಿಯುತ್ತಿರುವದನ್ನು ಸಹಿಸದೇ ಸುಖಾಸುಮ್ಮನೆ ಗಲಾಟೆಗಳನ್ನು ಹುಟ್ಟು ಹಾಕುತ್ತಿದ್ದಾರೆ ಎಂದು ಪ್ರತಿಯಾಗಿ ಟೀಕಿಸಿದ್ದಾರೆ.
ಏತ್ಮಧ್ಯೆ ಗಾಯಗೊಂಡು ಜೆಎಸ್ಎಸ್ ಆಸ್ಪತ್ರೆಗೆ ದಾಖಲಾಗಿದ್ದ ಬಿಜೆಪಿ ಕಾರ್ಯಕರ್ತ ಕೀಳನಪುರದ ನಾಗೇಶ್ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ.
ಪ್ರತಿಕ್ರಿಯೆಗಳು ಹೀಗಿವೆ.
ಸಿದ್ದರಾಮಯ್ಯ ಪಾಳಯದಲ್ಲಿ ಹತಾಶೆ ಮತ್ತು ಸೋಲಿನ ಭಯ ಶುರುವಾಗಿದೆ.ಬಿಜೆಪಿ ಅವರು ಪ್ರಚಾರಕ್ಕೆ ಹೋದ ಕಡೆಯಲೆಲ್ಲ ಕೆಲವರು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ.ಸಿದ್ದರಾಮಯ್ಯ ಈ ರೀತಿ ಸಣ್ಣತನ ಯಾಕೆ ಮಾಡುತ್ತಿದ್ದಾರೆ ಗೊತ್ತಿಲ್ಲ.ನಿನ್ನೆ ನಮ್ಮ ಪ್ರಚಾರ ಮೆರವಣಿಗೆ ಮೇಲೆ ಕಲ್ಲಲ್ಲಿ ಹೊಡೆದಿದ್ದಾರೆ.ಬಕೆಟ್ ಗಳಲ್ಲಿ ಕಲ್ಲು ಇಟ್ಟು ಕೊಂಡಿದ್ದರು.
–ಪ್ರತಾಪ್ಸಿಂಹ
—————————-
ಸಿದ್ದರಾಮಯ್ಯ ಅವರು ತಮ್ಮ ಸ್ವಜಾತಿಗೆ ಚಿತಾವಣೆ ಕೊಟ್ಟು ಈ ರೀತಿ ತೊಂದರೆ ಕೊಡಿಸುತ್ತಿದ್ದಾರೆ. ಸಿದ್ದರಾಮಯ್ಯ ಒಬ್ಬ ಜಾತಿವಾದಿ. ಸಿದ್ದರಾಮಯ್ಯ ಅವರಿಗೆ ಸ್ವಜಾತಿ ಮಾತ್ರ ಮುಖ್ಯ ಅನ್ನೋದು ವರುಣ ಜನರಿಗೆ ಗೊತ್ತಿದೆ. ಸಿದ್ದರಾಮಯ್ಯನವರ ಅಣ್ಣನ ಮನೆ ಮುಂದೆಯೇ ನಡೆದಿದೆ. ಚುನಾವಣೆ ಆಯುಕ್ತರಿಗೆ ಪತ್ರ ಬರೆಯುತ್ತೇನೆ.
–ವಿ.ಸೋಮಣ್ಣ, ಬಿಜೆಪಿ ಅಭ್ಯರ್ಥಿ
ನಮ್ಮೂರಿನಲ್ಲಿ ಗಲಾಟೆ ಶುರು ಮಾಡಿದ್ದೇ ಬಿಜೆಪಿಯವರೇ ಹೀಗೆ ಗಲಾಟೆ ಮಾಡಿಸುವ ಮೂಲಕ ಕೆಟ್ಟ ಹೆಸರು ತರವ ಪ್ರಯತ್ನ ಮಾಡುತ್ತಿದ್ದಾರೆ. ಇವೆಲ್ಲಾ ನಡೆಯುವುದಿಲ್ಲ. ಪ್ರಜಾಪ್ರಭುತ್ವ ಮಾದರಿಯಲ್ಲಿ ಚುನಾವಣೆ ಪ್ರಚಾರ ನಡೆಯಬೇಕು. ಅದು ಬಿಜೆಪಿ.ಮತ ಗಳಿಕೆಯ ಕಾರಣಕ್ಕಾಗಿ ಗಲಾಟೆ ಮಾಡಿಸಿದ್ದಾರೆ. ಆರೋಪ ಮಾಡಲು ಪ್ರತಾಪ್ ಸಿಂಹ ಯಾರು ?
ಸಿದ್ದರಾಮಯ್ಯ, ಕಾಂಗ್ರೆಸ್ ಅಭ್ಯರ್ಥಿ.