ಸುದ್ದಿಮೂಲ ವಾರ್ತೆ
ರಾಮನಗರ,ಏ.19: ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆಯ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಗೌತಮ್ ಗೌಡ ರಾಮನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಬುಧವಾರ ನಾಮಪತ್ರ ಸಲ್ಲಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ, ಪಕ್ಷದ ಮುಖಂಡರಾದ ಸಿ ಪಿ ಯೋಗೀಶ್ವರ್, ವಿಧಾನ ಪರಿಷತ್ ಮಾಜಿ ಸದಸ್ಯ ಅಶ್ವತ್ಥನಾರಾಯಣ ಗೌಡ ಮುಂತಾದವರು ಅವರಿಗೆ ಸಾಥ್ ನೀಡಿದರು.
ಸಾವಿರಾರು ಅಭಿಮಾನಿಗಳು ಮತ್ತು ಕಾರ್ಯಕರ್ತರೊಂದಿಗೆ ಬೃಹತ್ ಮೆರವಣಿಗೆಯಲ್ಲಿ ನಾಯಕರೊಂದಿಗೆ ಸಾಗಿಬಂದ ಗೌತಮ್ ಗೌಡ ಅವರು ಚುನಾವಣಾಧಿಕಾರಿಗಳಿಗೆ ಸುಮುಹೂರ್ತ ನೋಡಿಕೊಂಡು ನಾಮಪತ್ರ ಸಲ್ಲಿಸಿದರು. ಸ್ಥಳೀಯ ಜಾನಪದ ತಂಡಗಳು ಮೆರವಣಿಗೆಗೆ ಸಾಂಸ್ಕೃತಿಕ ರಂಗು ತುಂಬಿದ್ದವು. ಅಭಿಮಾನಿಗಳು ಮತ್ತು ಕಾರ್ಯಕರ್ತರು ಬಿಜೆಪಿ ಬಾವುಟ ಮತ್ತು ಅಂಗವಸ್ತ್ರಗಳ ಸಮೇತ, ಬಿಸಿಲನ್ನೂ ಲೆಕ್ಕಿಸದೆ ಪಟ್ಟಣದ ಬೀದಿಗಳಲ್ಲಿ ಹೆಜ್ಜೆ ಇಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಅಶ್ವತ್ಥನಾರಾಯಣ ಅವರು, “ರಾಮನಗರದಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ತ್ರಿಕೋನ ಸ್ಪರ್ಧೆ ಇದೆ. ರಾಮನಗರದ ಜನರು ಆ ಎರಡು ಪಕ್ಷಗಳನ್ನು ಆರಿಸಿ, ಭ್ರಮನಿರಸನರಾಗಿದ್ದಾರೆ. ಈ ಬಾರಿ ಅಭಿವೃದ್ಧಿಕೇಂದ್ರಿತ ರಾಜಕಾರಣದ ಯುಗವನ್ನು ಆರಂಭಿಸಿರುವ ಬಿಜೆಪಿ ಪರ ಇಲ್ಲಿ ಜನಾದೇಶ ಹೊಮ್ಮುವ ವಾತಾವರಣ ನಿರ್ಮಾಣವಾಗಿದೆ. ಇದಕ್ಕೆ ಬಿಜೆಪಿ ಸರಕಾರವು ಜಿಲ್ಲೆಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಯೋಜನೆಗಳೇ ಕಾರಣವಾಗಿವೆ” ಎಂದರು.
ಜನರು ಈಗ ವ್ಯವಸ್ಥೆಯಲ್ಲಿ ಬದಲಾವಣೆಯನ್ನು ಬಯಸಿದ್ದಾರೆ. ಪಕ್ಷದ ಅಭ್ಯರ್ಥಿಯಾಗಿರುವ ಗೌತಮ್ ಗೌಡ ಅವರು ಜನರ ಸೇವೆ ಮಾಡಬೇಕೆಂಬ ಕಾಳಜಿಯಿಂದ ವಿದೇಶದಲ್ಲಿದ್ದ ಉದ್ಯೋಗವನ್ನು ತೊರೆದು ಬಂದಿದ್ದಾರೆ. ಇದರ ಜತೆಗೆ ನರೇಂದ್ರ ಮೋದಿ ಮತ್ತು ಬಸವರಾಜ ಬೊಮ್ಮಾಯಿ ನೇತೃತ್ವದ ಡಬಲ್ ಎಂಜಿನ್ ಬಿಜೆಪಿ ಸರಕಾರವು ರಾಮನಗರ ಜಿಲ್ಲೆಯಲ್ಲಿ ಸಾವಿರಾರು ಕೋಟಿ ರೂ. ಮೊತ್ತದ ಅಭಿವೃದ್ಧಿ ಚಟುವಟಿಕೆಗಳನ್ನು ಯಶಸ್ವಿಯಾಗಿ ಮುಗಿಸಿದೆ ಎಂದು ಅವರು ನುಡಿದರು.
ರಾಮನಗರದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗಬೇಕು ಎನ್ನುವುದು ಬಿಜೆಪಿ ಸಂಕಲ್ಪವಾಗಿದೆ. ಪಕ್ಕದ ಕನಕಪುರದಲ್ಲೂ ಪಕ್ಷದ ವತಿಯಿಂದ ಹಿರಿಯ ನಾಯಕರಾದ ಆರ್ ಅಶೋಕ್ ಅವರನ್ನು ಕಣಕ್ಕಿಳಿಸುತ್ತಿದ್ದೇವೆ. ಈ ಮೂಲಕ ನಾವು ನಮ್ಮ ಬದ್ಧತೆಯನ್ನು ಪ್ರದರ್ಶಿಸಿದ್ದೇವೆ. ಡಿ.ಕೆ.ಶಿವಕುಮಾರ್ ಅವರ ಸಹೋದರ ಡಿ.ಕೆ ಸುರೇಶ್ ಅವರು ಬೆಂಗಳೂರಿನ ಪದ್ಮನಾಭ ನಗರದಲ್ಲಿ ಸ್ಪರ್ಧಿಸಿದರೆ ಅವರನ್ನೂ ನಾವು ಸಮರ್ಥವಾಗಿ ಎದುರಿಸುತ್ತೇವೆ ಎಂದು ಅವರು ಪ್ರತಿಪಾದಿಸಿದರು.
ರಾಮನಗರ ಜಿಲ್ಲೆಯ ಹೆಮ್ಮೆಯ ಪುತ್ರರಾಗಿದ್ದ ಕೆಂಗಲ್ ಹನುಮಂತಯ್ಯನವರ ಆಡಳಿತವು ನಮಗೆ ಮಾದರಿಯಾಗಿದೆ. ಇಲ್ಲಿ ಬಿಜೆಪಿಯನ್ನು ಗೆಲ್ಲಿಸಿದರೆ ಆ ಮಾದರಿಯ ಗತವೈಭವವನ್ನು ಪುನಃ ತರುವುದು ನಮ್ಮ ಪಕ್ಷದ ಕನಸಾಗಿದೆ. ಪ್ರಜಾಪ್ರಭುತ್ವದ ಉಳಿವಿನ ಬಗ್ಗೆ ಮಾತನಾಡುತ್ತಿರುವ ಶಿವಕುಮಾರ್ ಮತ್ತು ಸುರೇಶ್ ಅವರು ಮೊದಲು ಕನಕಪುರದಲ್ಲಿ ಆ ಕೆಲಸ ಮಾಡಲಿ. ಅದಂತೂ ಕನಕಪುರ ರಿಪಬ್ಲಿಕ್ ಆಗಿಹೋಗಿದೆ. ಇಂತಹ ಕೆಟ್ಟ ಪರಿಸ್ಥಿತಿಯನ್ನು ತೊಡೆದು ಹಾಕಲು ಬಿಜೆಪಿ ಮಾತ್ರ ಸಮರ್ಥವಾಗಿದೆ ಎಂದು ಅವರು ಹೇಳಿದರು.
ಗೌತಮ್ ಗೌಡ ಅವರು ಬುಧವಾರದಂದು ರಾಮನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಜತೆಯಲ್ಲಿ ಉಸ್ತುವಾರಿ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ, ಬಿಜೆಪಿ ಮುಖಂಡರಾದ ಸಿ ಪಿ ಯೋಗೀಶ್ವರ್, ವಿಧಾನ ಪರಿಷತ್ ಮಾಜಿ ಸದಸ್ಯ ಅಶ್ವತ್ಥನಾರಾಯಣ ಗೌಡ ಮುಂತಾದವರು ಇದ್ದರು.