ಸುದ್ದಿಮೂಲ ವಾರ್ತೆ
ಶಿಡ್ಲಘಟ್ಟ, ಏ.15: ತಾಲ್ಲೂಕಿನ ಹಲವು ಭಾಗಗಳಲ್ಲಿ ನಡೆದ 132ನೇ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಬಿಜೆಪಿ ಅಭ್ಯರ್ಥಿ ಸೀಕಲ್ ರಾಮಚಂದ್ರಗೌಡ, ಮಾಜಿ ಶಾಸಕ ಎಂ.ರಾಜಣ್ಣ ಪಾಲ್ಗೊಂಡು ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರ ಮತ್ತು ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡುವ ಮೂಲಕ ನಮನ ಸಲ್ಲಿಸಿದರು.
ಶಿಡ್ಲಘಟ್ಟ ನಗರದಲ್ಲಿರುವ ಎಂಟನೇ ವಾರ್ಡಿನ ಸಿದ್ದಾರ್ಥ ನಗರದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಜಯಂತಿಯಲ್ಲಿ ಭಾಗವಹಿಸಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ಡಾ. ಬಿ.ಆರ್ ಅಂಬೇಡ್ಕರ್ ಜಯಂತಿಯ ಅಂಗವಾಗಿ ಸಿದ್ದಾರ್ಥ ನಗರದ ಮಣಿ ಎಂಬುವರ ಮನೆಯಲ್ಲಿ ಶಿಡ್ಲಘಟ್ಟ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಎಂ.ರಾಜಣ್ಣ ಹಾಗೂ ಬಿಜೆಪಿ ಅಭ್ಯರ್ಥಿ ಸೀಕಲ್ ರಾಮಚಂದ್ರಗೌಡ ರವರು ಊಟ ಸವಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ಸೀಕಲ್ ರಾಮಚಂದ್ರಗೌಡ, ಡಾ. ಬಿ ಆರ್ ಅಂಬೇಡ್ಕರ್ ಅವರು ಇಡಿ ವಿಶ್ವಕಂಡ ಮಹಾನ್ ಮಾನವತಾವಾದಿ ಆಗಿದ್ದು, ಇವರನ್ನು ಪಡೆದ ಭಾರತೀಯರಾದ ನಾವುಗಳು ಪುಣ್ಯವಂತರು. ಜನಸಂಘದ ಕಾಲದಿಂದಲೂ ಅಂಬೇಡ್ಕರ್ ಅವರನ್ನು ನಾವು ಗೌರವಿಸುತ್ತಿದ್ದೇವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಎಂ.ರಾಜಣ್ಣ ಮಾತನಾಡಿ, ಇಂದು ದೇಶದಲ್ಲಿ ಸಾಮಾಜಿಕ ನ್ಯಾಯ ಉಳಿದುಕೊಂಡಿದೆ ಎಂಬುದಕ್ಕೆ ಅಂಬೇಡ್ಕರ್ ಅವರ ಸಂವಿಧಾನ ಸಾಕ್ಷಿಯಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಸಮನಾದ ಮೀಸಲಾತಿ ಕಲ್ಪಿಸಿದ ಏಕೈಕ ರಾಜ್ಯ ಕರ್ನಾಟಕ. ಅದರಲ್ಲಿಯೂ ಮೀಸಲಾತಿಯನ್ನು ಜಾರಿಗೊಳಿಸಿದ್ದು ಬಿಜೆಪಿ ಪಕ್ಷ ಎಂಬುದು ಹೆಮ್ಮೆಯ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು
ಈ ಸಂದರ್ಭದಲ್ಲಿ ಬಿಜೆಪಿ ನಗರ ಜಿಲ್ಲಾ ಉಪಾಧ್ಯಕ್ಷ ನಂದೀಶ್, ಜಿಲ್ಲಾ ವಕ್ತಾರ ರಮೇಶ್ ಬಾಯರಿ,ಯುವ ಮೋರ್ಚಾ ಅಧ್ಯಕ್ಷ ಭರತ್ ಕುಮಾರ್, ಎಸ್ಡಿಎಂಸಿ ಮಾಜಿ ಅಧ್ಯಕ್ಷ ಮಣಿ, ಓಬಿಸಿ ಮೋರ್ಚಾ ನಗರ ಮಂಡಲ ಅಧ್ಯಕ್ಷ ಕಿರಣ್, ನಗರಸಭೆ ನಾಮ ನಿರ್ದೇಶಕ ಸದಸ್ಯ ಪ್ರಕಾಶ್, ಕಾರ್ಮಿಕ ಪ್ರಕೋಷ್ಠ ಜಿಲ್ಲಾ ಸಂಚಾಲಕ ನರೇಶ್, ಎಸ್ಸಿ ಮೋರ್ಚ ನಗರ ಮಂಡಲ ಉಪಾಧ್ಯಕ್ಷ ನರಸಿಂಹಮೂರ್ತಿ, ಪ್ರಧಾನ ಕಾರ್ಯದರ್ಶಿ ಮುರಳಿ, ರಘು, ಮಣಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.