ಸುದ್ದಿಮೂಲ ವಾರ್ತೆ
ಬೆಂಗಳೂರು, ಸೆ.27: ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಬೆಳೆ ಬೆಳೆದ ರೈತರನ್ನು ಅಕ್ರಮವಾಗಿ ಒಕ್ಕಲೆಬ್ಬಿಸಿ ಕೋಟ್ಯಂತರ ಬೆಳೆ ಹಾನಿ ಮಾಡಿದ ಡಿಎಫ್ಒ ಮತ್ತು ಸಂಸದರ ಮೇಲೆ ದೌರ್ಜನ್ಯ ಮಾಡಿದ ಎಸ್ಪಿಯನ್ನು ಅಮಾನತು ಮಾಡಬೇಕು. ಇಲ್ಲವಾದರೆ ಅಕ್ಟೋಬರ್ 3ರಂದು ಬೃಹತ್ ಹೋರಾಟ ಮಾಡುವುದಾಗಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸರಕಾರ ಒಂದು ರೀತಿ ಅಧಿಕಾರದ ಅಮಲಿನಲ್ಲಿದೆ. ಸರ್ವಾಧಿಕಾರಿಯಂತೆ ವರ್ತಿಸುತ್ತಿದೆ. ನೀರು ಕೊಡದೆ ಇವರಿಗೆ ಸಾಧ್ಯವಾಗುತ್ತಿಲ್ಲ. ಬದಲಾಗಿ ಮದ್ಯ ನೀಡಲು ಒಂದು ಸಾವಿರ ಮದ್ಯದಂಗಡಿಗಳನ್ನು ತೆರೆಯಲು ಮುಂದಾಗಿದೆ. ಇದೊಂದು ಅಮಲಿನ ಸರಕಾರ ಎಂದು ಟೀಕಿಸಿದರು.
ಕೋಲಾರ ಜಿಲ್ಲೆಯಲ್ಲಿ ರೈತರನ್ನು ಒಕ್ಕಲೆಬ್ಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅಲ್ಲಿ ಸಾವಿರಾರು ಎಕರೆ ಜಮೀನಿನಲ್ಲಿ ಮಾವು ಬೆಳೆಯುತ್ತಿದ್ದಾರೆ. ಶ್ರೀನಿವಾಸಪುರ ತಾಲ್ಲೂಕಿನ ಹಳ್ಳಿಗಳಲ್ಲಿ ಮಾವು, ರೇಷ್ಮೆ, ಟೊಮೆಟೊ, ತೆಂಗು, ತರಕಾರಿ ಬೆಳೆಯುವ ಒಂದು ಸಾವಿರ ಎಕರೆ ಜಮೀನಿನಲ್ಲಿ ಸಂಪೂರ್ಣ ಬೆಳೆ ನಾಶ ಮಾಡಿದ್ದಾರೆ. 30-40 ವರ್ಷಗಳಿಂದ ಬೆಳೆದುನಿಂತ ಮಾವಿನ ಮರಗಳನ್ನು ಕಡಿದು ಹಾಕಿದ್ದಾರೆ. ಇದಕ್ಕೆ ಸಿದ್ದರಾಮಯ್ಯನವರ ರೈತವಿರೋಧಿ ಸರಕಾರ ಕಾರಣ ಎಂದು ನುಡಿದರು.
ಡಿಎಫ್ಒ ಏಳುಕೊಂಡಲ ಅವರು ರೌಡಿಯಂತೆ ವರ್ತಿಸಿ ಜೆಸಿಬಿಯಿಂದ ತರಕಾರಿ, ಮಾವು ಮತ್ತಿತರ ಬೆಳೆ ನಾಶ ಮಾಡಿದ್ದಾರೆ. ರಾತ್ರೋರಾತ್ರಿ ಅರಣ್ಯದ ಸಸಿ ನೆಡಿಸಿದ್ದಾರೆ. ರೈತರ ಬಳಿ 30-40 ವರ್ಷಗಳಿಂದ ಆರ್ಟಿಸಿ ಇದೆ. ಈ ವಿಚಾರದಲ್ಲಿ ರೈತರ ಪರ ನಿಲ್ಲಬೇಕಾದ ಸರಕಾರ ಡಿಎಫ್ಒಗೆ ರಕ್ಷಣೆ ಕೊಡುತ್ತಿದೆ. ರೈತರು ಕಣ್ಣೀರು ಹಾಕುತ್ತಿದ್ದಾರೆ. ಹೋರಾಟ ಮಾಡಿದ ರೈತರನ್ನು ಬಂಧಿಸಲಾಗಿದೆ ಎಂದು ವಿವರಿಸಿದರು. ಡಿಎಫ್ಒ ಅಮಾನತಿಗೆ ಆಗ್ರಹಿಸಿದರು.
ಈಚೆಗೆ ಜನತಾ ದರ್ಶನ ನಡೆದಿತ್ತು. ರೈತರ ಮೇಲಿನ ದೌರ್ಜನ್ಯದ ವಿಷಯ ಹೇಳಲು ರೈತ ವಿರೋಧಿ ಸಚಿವರು ಅವಕಾಶ ಕೊಟ್ಟಿಲ್ಲ ಎಂದು ಟೀಕಿಸಿದರು. ಈ ವಿಷಯ ಪ್ರಶ್ನಿಸಿದ ಬಿಜೆಪಿ ಸಂಸದ ಮುನಿಸ್ವಾಮಿಯವರನ್ನು ಹೊರಗೆ ಹಾಕಿದ್ದಾರೆ. ಸಚಿವರು, ಶಾಸಕರ ಉಪಸ್ಥಿತಿಯಲ್ಲಿ ಈ ದುರ್ವರ್ತನೆ ನಡೆದಿದೆ ಎಂದು ಆಕ್ಷೇಪಿಸಿದರು.
ಕರ್ನಾಟಕದಲ್ಲಿ ಮತ್ತು ಕಾವೇರಿ ಕಣಿವೆಯಲ್ಲಿ ನೀರಿಲ್ಲ. ಕಾವೇರಿ ನೀರಿನ ವಿಚಾರದಲ್ಲಿ ಸರಕಾರವು ವಾಸ್ತವಸ್ಥಿತಿಯನ್ನು ಪ್ರಾಧಿಕಾರ ಮತ್ತು ಸುಪ್ರೀಂ ಕೋರ್ಟಿಗೆ ತಿಳಿಸಿಲ್ಲ. ಇದರಿಂದ ನಮ್ಮ ರೈತರಿಗೆ ಅನ್ಯಾಯವಾಗಿದೆ ಎಂದು ಅವರು ತಿಳಿಸಿದರು.
ಕೋಲಾರ ಸಂಸದ ಮುನಿಸ್ವಾಮಿ, ಎಸ್ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.