ಸುದ್ದಿಮೂಲ ವಾರ್ತೆ
ಚನ್ನಪಟ್ಟಣ, ಏ.30: ಜೆಡಿಎಸ್ ಪಕ್ಷಕ್ಕೆ ನೀಡಿದ ಪ್ರತಿಯೊಂದು ಮತವೂ ಕಾಂಗ್ರೆಸ್ ಪಕ್ಷಕ್ಕೆ ಹೋಗಲಿದೆ. ರಾಜ್ಯದಲ್ಲಿ ಅಸ್ಥಿರ ಸರಕಾರವನ್ನು ಅದು ತರಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನೆನಪಿಸಿದರು.
ಚನ್ನಪಟ್ಟಣದಲ್ಲಿ ಇಂದು ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಈ ಬಾರಿಯ ನಿರ್ಧಾರ, ಬಹುಮತದ ಬಿಜೆಪಿ ಸರಕಾರ’ ಎಂದು ಕನ್ನಡದಲ್ಲಿ ತಿಳಿಸಿದರಲ್ಲದೆ, ಜೆಡಿಎಸ್- ಕಾಂಗ್ರೆಸ್ ಪಕ್ಷಗಳು ಕುಟುಂಬವಾದವನ್ನು ಪೋಷಿಸುವ ಪಕ್ಷಗಳು. ದೆಹಲಿಯಲ್ಲಿ ಪರಸ್ಪರ ಸಹಕರಿಸುವ ಪಕ್ಷಗಳು ಎಂದು ಟೀಕಿಸಿದರು. ಇವೆರಡೂ ಪಕ್ಷಗಳಿಗೆ ಅಸ್ಥಿರತೆಯಲ್ಲೇ ಅವಕಾಶ ಕಾಣುತ್ತದೆ. ಜೆಡಿಎಸ್ 15-20 ಶಾಸಕ ಸ್ಥಾನಗಳ ಜೊತೆ ಕಿಂಗ್ಮೇಕರ್ ಆಗುವ ಕನಸು ಕಾಣುತ್ತದೆ ಎಂದು ಆಕ್ಷೇಪಿಸಿದರು.
ಸ್ವಾರ್ಥ ರಾಜಕಾರಣದ ಜೆಡಿಎಸ್, ಕಾಂಗ್ರೆಸ್ ಪಕ್ಷಗಳನ್ನು ದೂರವಿಡಿ ಎಂದು ಮನವಿ ಮಾಡಿದ ಅವರು, ಕಾಂಗ್ರೆಸ್- ಜೆಡಿಎಸ್ ಸರಕಾರದಿಂದ ಕೆಲವೇ ಪರಿವಾರಗಳಿಗೆ ಲಾಭವಾಗುತ್ತದೆ. ಬಿಜೆಪಿ ಡಬಲ್ ಎಂಜಿನ್ ಸರಕಾರ ಬಂದುದರಿಂದ, ರಾಮನಗರ ಜಿಲ್ಲೆಯ 3 ಲಕ್ಷ ಜನ್ಧನ್ ಖಾತೆ ತೆರೆಯಲಾಗಿದೆ. ಲಕ್ಷಾಂತರ ಜನರಿಗೆ ಅಟಲ್ ಪಿಂಚಣಿ, ನಲ್ಲಿಯಿಂದ ನೀರು, ಉಚಿತ ಗ್ಯಾಸ್, ಶೌಚಾಲಯದ ಸೌಕರ್ಯ ಲಭಿಸಿದೆ. ಉಚಿತ ಕೋವಿಡ್ ಲಸಿಕೆ, ಉಚಿತ ಪಡಿತರ ಸಿಕ್ಕಿದೆ. ಡಬಲ್ ಎಂಜಿನ್ ಸರಕಾರ ಎಂದರೆ ಎಲ್ಲರ ಸರಕಾರ. ಎಲ್ಲರ ಸೇವೆ ಮಾಡುವ, ಪ್ರತಿಶತ ಪ್ರಯೋಜನ ನೀಡುವ ಸರಕಾರ ಎಂದು ನೆನಪಿಡಿ ಎಂದು ವಿನಂತಿಸಿದರು.
ಕಾಂಗ್ರೆಸ್ ಆಡಳಿತದ ಸಾಲ ಮನ್ನಾದಿಂದ ಕೆಲವೇ ಕೆಲವು ಕುಟುಂಬಗಳಿಗೆ ಪ್ರಯೋಜನ ಲಭಿಸಿತು. ಸಾಲ ಮನ್ನಾದ ಹಣ ಭ್ರಷ್ಟರ ಪಾಲಾಗಿತ್ತು. 100ರಲ್ಲಿ 10ರಷ್ಟು ರೈತರ ಸಾಲವೂ ಸರಿಯಾಗಿ ಮನ್ನಾ ಆಗಿರಲಿಲ್ಲ. ಇದು ಕಾಂಗ್ರೆಸ್ ಟ್ರ್ಯಾಕ್ ರೆಕಾರ್ಡ್. ಕಾಂಗ್ರೆಸ್ ಪಕ್ಷದ ಪ್ರತಿ ಘೋಷಣೆ ಮತ್ತು ಭರವಸೆಯು ಸುಳ್ಳಿನ ಕಂತೆ ಎಂದು ಕಿವಿಮಾತು ಹೇಳಿದರು.
ನಮ್ಮ ಸರಕಾರ ರೇಷ್ಮೆ ರೈತರಿಗೆ ಸಹಾಯವನ್ನು ನೀಡಿದೆ. ರೇಷ್ಮೆ ರಫ್ತು ಕೂಡ ಹೆಚ್ಚಾಗಿದೆ ಎಂದ ಅವರು, ಕಾಂಗ್ರೆಸ್ ಪಕ್ಷದ ವಾರಂಟಿ ಮುಗಿದಿದೆ. ಆದ್ದರಿಂದ ಅದರ ಎಲ್ಲ ಗ್ಯಾರಂಟಿಗಳೂ ಸುಳ್ಳಾಗಿರುತ್ತವೆ. ಹಿಮಾಚಲ ಪ್ರದೇಶದಲ್ಲಿ ಮಹಿಳೆಯರಿಗೆ ತಿಂಗಳಿಗೆ 1500 ರೂ. ನೀಡುವುದಾಗಿ ತಿಳಿಸಿದ್ದರು. ಆದರೆ, ಕಾಂಗ್ರೆಸ್ ಪಕ್ಷ ಅಲ್ಲಿನ ಮಹಿಳೆಯರಿಗೆ ವಿಶ್ವಾಸಘಾತ ಮಾಡಿದೆ ಎಂದು ಟೀಕಿಸಿದರು.