ಬಿ. ವೆಂಕಟ್ಸಿಂಗ್
ಬೆಂಗಳೂರು, ಏ.3: ಕಾಂಗ್ರೆಸ್ ಮತ್ತು ಜೆಡಿಎಸ್ ಈಗಾಗಲೇ ತನ್ನ ಮೊದಲನೇ ಪಟ್ಟಿ ಬಿಡುಗಡೆ ಮಾಡಿದ ಬೆನ್ನಲ್ಲೇ ಆಡಳಿತಾರೂಢ ಭಾರತೀಯ ಜನತಾ ಪಕ್ಷ ಸಹ ತನ್ನ ಮೊದಲನೇ ಪಟ್ಟಿ ಬಿಡುಗಡೆಗೆ ಕಸರತ್ತು ನಡೆಸಿದೆ. ಇದೇ ಮೊದಲ ಬಾರಿಗೆ ಎನ್ನಲಾದ ಕಾರ್ಯಕರ್ತರ ಮೂಲಕ ಕ್ಷೇತ್ರವಾರು ಅಭ್ಯರ್ಥಿಗಳ ಆಯ್ಕೆಗೆ ವಿನೂತನವಾಗಿ ಬ್ಯಾಲೆಟ್ ಬಾಕ್ಸ್ನಲ್ಲಿ ಅಭಿಪ್ರಾಯ ಸಂಗ್ರಹ ಮಾಡಿದ್ದಾರೆ.
ರಾಜ್ಯಾದ್ಯಂತ ಸಂಗ್ರಹವಾದ ಅಭಿಪ್ರಾಯಗಳು ಕ್ರೂಢೀಕರಿಸಿ ಕಳೆದ ಎರಡು ದಿನಗಳ ಹಿಂದೆ ರಾಜ್ಯಮಟ್ಟದ ಕೋರ್ ಕಮಿಟಿ ಸಭೆಯಲ್ಲಿ ಕ್ಷೇತ್ರವಾರು ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದ್ದಾರೆ.
ಮೊದಲ ಸುತ್ತಿನಲ್ಲಿ ಕನಿಷ್ಠ 150 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ ಮಾಡಬೇಕೆಂಬ ಹಿನ್ನೆಲೆಯಲ್ಲಿ ನಾಳೆಯಿಂದ ಎರಡು ದಿನಗಳ ಕಾಲ ಬಿಜೆಪಿ ಚುನಾವಣಾ ಸಮಿತಿ ಸಭೆ ಪಕ್ಷದ ಕೇಂದ್ರ ಕಚೇರಿ ಮಲ್ಲೇಶ್ವರಂನಲ್ಲಿ ನಡೆಯಲಿದೆ. ಈಗಾಗಲೇ ಹಲವು ಖಾಸಗಿ ಸಂಸ್ಥೆಗಳ ಹಾಗೂ ವಿವಿಧ ಮಾಧ್ಯಮ ಸಂಸ್ಥೆಗಳು ಮತ್ತು ಪಕ್ಷದ ವತಿಯಿಂದ ಕೈಗೊಂಡ ಸಮೀಕ್ಷೆಗಳ ವರದಿ ಮತ್ತು ಜಿಲ್ಲಾವಾರು ಪಕ್ಷದ ಪ್ರಮುಖರು ಮಾಹಿತಿಗಳ ಆಧರಿಸಿ ಎರಡು ದಿನಗಳ ಕಾಲ ಅಭ್ಯರ್ಥಿಗಳ ಆಯ್ಕೆಗೆ ಕಸರತ್ತು ನಡೆಸಲಿದ್ದಾರೆ.
ರಾಜ್ಯದಲ್ಲಿ ಇಲ್ಲಿಯವರೆಗೂ ಭಾರತೀಯ ಜನತಾ ಪಕ್ಷಕ್ಕೆ ಅಧಿಕಾರದ ಚುಕ್ಕಾಣಿ ಹಿಡಿಯಲು ಸ್ಪಷ್ಟ ಬಹುಮತ ದೊರೆತಿಲ್ಲವಾದ್ದರಿಂದ 2023ರ ವಿಧಾನಸಭಾ ಚುನಾವಣೆಯಲ್ಲಿ 150 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಜಯ ಗಳಿಸುವ ಲೆಕ್ಕಾಚಾರದ ಮೇಲೆ ಅಭ್ಯರ್ಥಿಗಳನ್ನು ಅಳೆದು ತೂಗಿ ಆಯ್ಕೆ ಮಾಡಲು ಪಕ್ಷ ನಿರ್ಧಾರ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸು ಮತ್ತು ಕಳೆದ ಮೂರುವರೆ ವರ್ಷಗಳ ಕಾಲ ರಾಜ್ಯದಲ್ಲಿ ಬಿಎಸ್ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಅಭಿವೃದ್ಧಿಯನ್ನು ಜನರ ಮುಂದಿಟ್ಟು ಮತಯಾಚನೆ ಮಾಡುವುದು ಪಕ್ಷದ ಮುಖ್ಯ ಉದ್ದೇಶವಾಗಿದೆ. ಆದರೆ, ಆಪರೇಷನ್ ಕಮಲದ ಮೂಲಕ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ಸೇರ್ಪಡೆ ಮಾಡಿಕೊಂಡು ಸರ್ಕಾರ ರಚನೆ ಮಾಡಿದ್ದರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ರೀತಿಯಲ್ಲಿ ಪಕ್ಷದ ಶಾಸಕರು ನಡೆದುಕೊಂಡಿದ್ದಾರೆಂಬ ಆರೋಪಗಳು ಇದ್ದು ಅದನ್ನು ಮೀರಿ ಈಗ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಅಭ್ಯರ್ಥಿಗಳನ್ನು ಆಯ್ಕೆಮಾಡಬೇಕಾಗಿದೆ.
ಈ ಮಧ್ಯೆ ಕಳೆದ ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಪರಿಶಿಷ್ಟರ ಒಳಮೀಸಲಾತಿ ಮತ್ತು ಪರಿಶಿಷ್ಟರ ಮೀಸಲಾತಿ ಹೆಚ್ಚಳ ಹಾಗೂ ಅಲ್ಪ ಸಂಖ್ಯಾತರ ಮೀಸಲಾತಿ ಕಡಿತಗೊಳಿಸಿ, ಲಿಂಗಾಯತ ಮತ್ತು ಒಕ್ಕಲಿಗರಿಗೆ ತಲಾ ಶೇ.2ರಷ್ಟು ವರ್ಗಾವಣೆ ಮಾಡಿ ಅವರನ್ನು ಆರ್ಥಿಕವಾಗಿ ಹಿಂದುಳಿದವರ (ಇಡಬ್ಲ್ಯೂಎಸ್)ಗೆ ಸೇರ್ಪಡೆ ಮಾಡಿದ್ದಲ್ಲದೆ ಪರಿಶಿಷ್ಟರ ಒಳಮೀಸಲಾತಿಯಲ್ಲಿ ಬಂಜಾರ, ಭೋವಿ, ಕೊರಮ, ಕೊರಚ ಜನರಿಗೆ ಅನ್ಯಾಯವಾಗಿದೆ ಎಂಬ ಆಕ್ರೋಶ ಮುಗಿಲು ಮುಟ್ಟಿದ್ದು, ಅದನ್ನು ಗಮನದಲ್ಲಿಟ್ಟುಕೊಂಡ ಅಭ್ಯರ್ಥಿಗಳ ಆಯ್ಕೆಗೆ ರಣತಂತ್ರ ರೂಪಿಸಬೇಕಾಗಿದೆ.
ಈ ಎಲ್ಲಾ ಬೆಳವಣಿಗೆ ಮಧ್ಯೆ ಆಡಳಿತಾರೂಢ ಬಿಜೆಪಿಯಲ್ಲಿ ಇನ್ನು ಅಧಿಕಾರಾವಧಿ ಇದ್ದರೂ ಮೂರು ಜನ ವಿಧಾನಪರಿಷತ್ ಸದಸ್ಯರಾದ ಪುಟ್ಟಣ್ಣ, ಬಾಬರಾವ್ ಚಿಂಚನಸೂರು ಮತ್ತು ಆಯನೂರು ಮಂಜುನಾಥ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಈ ಪೈಕಿ ಪುಟ್ಟಣ್ಣ ಅವರಿಗೆ ಬೆಂಗಳೂರಿನ ರಾಜಾಜಿನಗರ ಕ್ಷೇತ್ರದಿಂದ ಈಗಾಗಲೇ ಟಿಕೆಟ್ ಘೋಷಣೆಯಾಗಿದೆ. ಚಿಂಚನಸೂರು ಗುರುಮಿಠಕಲ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಲು ಪ್ರಯತ್ನದಲ್ಲಿದ್ದಾರೆ. ಅದೇ ರೀತಿ ಬಿಜೆಪಿಯ ಕೂಡ್ಲಿಗಿ ಶಾಸಕ ಎನ್.ವೈ. ಗೋಪಾಲಕೃಷ್ಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಇಂದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಈ ಬೆಳವಣಿಗೆ ಭಾರತೀಯ ಜನತಾ ಪಕ್ಷಕ್ಕೆ ಆಘಾತ ಮೂಡಿಸಿದೆ. 2023ರ ಚುನಾವಣೆಯಲ್ಲಿ ತಮ್ಮ ಸಾಧನೆ ಆಧರಿಸಿ ಅಧಿಕಾರ ಹಿಡಿಯಲು ಬಿಜೆಪಿ ಯತ್ನಿಸುತ್ತಿದ್ದರೆ ಅದೇ ಪಕ್ಷದಲ್ಲಿ ಅಧಿಕಾರ ಅನುಭವಿಸಿದವರು ಪಕ್ಷ ಬಿಡುತ್ತಿರುವುದು ಬಿಜೆಪಿ ಲೆಕ್ಕಚಾರಕ್ಕೆ ತಲೆಕೆಳಗಾಗುವಂತೆ ಮಾಡಿದೆ. ಎಲ್ಲಾ ಬೆಳವಣಿಗೆ ಮಧ್ಯೆ ಕೋರ್ ಕಮಿಟಿ ಸಭೆಯಲ್ಲಿ ಒಂದರಿಂದ ಎರಡು ಹೆಸರುಗಳು ಅಂತಿಮಗೊಳಿಸಿದ್ದು ನಾಳೆಯಿಂದ ನಡೆಯುವ ಚುನಾವಣೆ ಸಮಿತಿ ಸಭೆಯಲ್ಲಿ ಸಂಭ್ಯಾವ್ಯ ಅಭ್ಯರ್ಥಿಗಳ ಪಟ್ಟಿ ಬಿಜೆಪಿಯ ಕೇಂದ್ರ ಸಮಿತಿ ದೆಹಲಿಗೆ ರವಾನೆಯಾಗುವ ಸಾಧ್ಯತೆಯಿದೆ. ಹೀಗಾಗಿ ಏಪ್ರಿಲ್ 7 ಅಥವಾ 8ರಂದು ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆಯಾಗಲಿದ್ದು, ಬಿಜೆಪಿ ಸೋಲುವ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ನಿಂದ ಯಾರಾದರೂ ಪಕ್ಷ ಸೇರುವವರಿದ್ದರೆ. ಅಂತವರಿಗೆ ಗೆಲುವಿನ ಮಾನದಂಡದ ಆಧಾರದ ಮೇಲೆ ಟಿಕೆಟ್ ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.