ಸುದ್ದಿಮೂಲ ವಾರ್ತೆ
ಬೆಂಗಳೂರು, ಏ.5: ಆಡಳಿತಾರೂಢ ಭಾರತೀಯ ಜನತಾ ಪಕ್ಷ ಬೆಂಗಳೂರಿನ ಹೊರವಲಯದಲ್ಲಿರುವ ಗೋಲ್ಡನ್ಪಾಮ್ ರೆಸಾರ್ಟ್ನಲ್ಲಿ ಸರಣಿ ಸಭೆಗಳನ್ನು ನಡೆಸಿ ಹಾಲಿ ಮತ್ತು ಒಂದೇ ಅಭ್ಯರ್ಥಿ ಇರುವಂತಹ 102 ಕ್ಷೇತ್ರಗಳಿಗೆ ಪಟ್ಟಿ ಅಂತಿಮಗೊಳಿಸುರುವದಾಗಿ ಗೊತ್ತಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್, ರಾಷ್ಟ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ಅಣ್ಣಾ ಮಲೈ ಸಮಕ್ಷಮ ಜರುಗಿದ ಸಭೆಯಲ್ಲಿ 102 ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಿರುವುದಾಗಿ ಪಕ್ಷದ ಮೂಲಗಳು ದೃಢಪಡಿಸಿವೆ.
ಉಳಿದಂತೆ 122 ಕ್ಷೇತ್ರಗಳಿಗೆ ಒಂದಕ್ಕಿಂತ ಹೆಚ್ಚು ಅಭ್ಯರ್ತಿಗಳ ಹೆಸರು ಪೈಪೋಟಿಯಲ್ಲಿದ್ದು, ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಪಕ್ಷದ ರಾಷ್ಟ್ರೀಯ ಮುಖಂಡರ ನಿರ್ಧಾರಕ್ಕೆ ಬಿಡಲು ತೀರ್ಮಾನ ಮಾಡಿರುವುದಾಗಿ ಗೊತ್ತಾಗಿದೆ.
ಹೀಗಾಗಿ 102 ಕ್ಷೇತ್ರಗಳಿಗೆ ಒಬ್ಬ ಅಭ್ಯರ್ಥಿ ಮತ್ತು 122 ಕ್ಷೇತ್ರಗಳಿಗೆ ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳ ಪಟ್ಟಿಯನ್ನು ಕಳೆದ ಎರಡು ದಿನಗಳಿಂದ ನಡೆದ ಸಭೆಯಲ್ಲಿ ಅಳೆದು ತೂಗಿ ನಿರ್ಧಾರ ಮಾಡಿದ್ದು, ಬುಧವಾರ ರಾತ್ರಿಯೇ ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಗೆ ಪಟ್ಟಿ ಶಿಫಾರಸು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಏ.8ರಂದು 102 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸುವುದಾಗಿ ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದು, ಈ ಹಿನ್ನೆಲೆಯಲ್ಲಿ ಗುರುವಾರ ಮತ್ತು ಶುಕ್ರವಾರ ರಾಜ್ಯದಿಂದ ಶಿಫಾರಸುಗೊಂಡ ಪಟ್ಟಿಯ ಕುರಿತು ಚರ್ಚೆಯ ಬಳಿಕ ಪ್ರಕಟಿಸುವ ಸಾಧ್ಯತೆ ಇದೆ.
ಉಳಿದಂತೆ 122 ಕ್ಷೇತ್ರಗಳಿಗೆ ಹಂತಹಂತವಾಗಿ ಎರಡನೇ ಮತ್ತು ಮೂರನೇ ಪಟ್ಟಿ ಪ್ರಕಟಿಸಲು ಸಹ ದೆಹಲಿ ಮಟ್ಟದಲ್ಲಿ ಸರಣಿ ಸಭೆಗಳನ್ನು ನಡೆಸಿ ನಿರ್ಧಾರ ತೆಗೆದುಕೊಳ್ಳುವ ಹಿನ್ನೆಲೆಯಲ್ಲಿ ಪಟ್ಟಿ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಇದಲ್ಲದೆ ಕಾಂಗ್ರೆಸ್ ಮತ್ತು ಜೆಡಿಎಸ್ ಟಿಕೆಟ್ ವಂಚಿತರಿಗೂ ಸಹ ಗಾಳ ಹಾಕಲು ಲೆಕ್ಕಾಚಾರ ಮಾಡಿರುವ ಬಿಜೆಪಿ ಎರಡನೇ ಮತ್ತು ಮೂರನೇ ಪಟ್ಟಿ ಕಾಂಗ್ರೆಸ್ನ ಅಂತಿಮ ಘೋಷಣೆ ಬಳಿಕ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಸಹ ಹೇಳಲಾಗುತ್ತಿದೆ.
ಹೀಗಾಗಿ ಬಿಜೆಪಿಯ ಅಂತಿಮ ಪಟ್ಟಿ ವಿಳಂಬವಾಗುವ ಸಾಧ್ಯತೆ ಇದೆ.