ಸುದ್ದಿಮೂಲ ವಾರ್ತೆ
ಬೆಂಗಳೂರು, ಜೂ.3: ಕಾಂಗ್ರೆಸ್ ಸರಕಾರದ ಕಾನೂನಾತ್ಮಕ ದೌರ್ಜನ್ಯ ತಡೆಗೆ ಶೀಘ್ರವೇ ರಾಜ್ಯ ಬಿಜೆಪಿ ಕಾನೂನು ಘಟಕದಿಂದ ಸಹಾಯವಾಣಿ (ಹೆಲ್ಪ್ಲೈನ್) ಆರಂಭಿಸಲಾಗುವುದು ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಕಾನೂನು ಪ್ರಕೋಷ್ಠವು ನಮ್ಮ ಎಲ್ಲ ವಕೀಲರ ಸಭೆ ನಡೆಸಿದೆ. ಕಾಂಗ್ರೆಸ್ ಸರಕಾರದ ಎಲ್ಲ ಕಾನೂನಾತ್ಮಕ ದೌರ್ಜನ್ಯ, ಅಧಿಕಾರ ದುರ್ಬಳಕೆ, ಸುಳ್ಳು ಕೇಸು, ಸುಳ್ಳು ಎಫ್ಐಆರ್ಗಳನ್ನು ಸಮರ್ಥವಾಗಿ ಎದುರಿಸಲು ಮುಂದಾಗಿದೆ. ಇದಕ್ಕಾಗಿ ಹೆಲ್ಪ್ಲೈನ್ ನಂಬರನ್ನು ಒಂದು ವಾರದ ಒಳಗೆ ನಾವು ಪ್ರಕಟಿಸಲಿದ್ದೇವೆ ಎಂದು ತಿಳಿಸಿದರು.
ಈ ಹೆಲ್ಪ್ಲೈನ್ ನಂಬರ್ ರಾಜ್ಯದ ಕಾರ್ಯಕರ್ತರ ಉಪಯೋಗಕ್ಕೆ ಇರುವ ಸಂಖ್ಯೆ. 24 ಗಂಟೆ ಕಾರ್ಯ ನಿರ್ವಹಿಸಲಿದೆ. ನಮ್ಮ ಕಾರ್ಯಕರ್ತರ ಮೇಲೆ ಸುಳ್ಳು ಕೇಸು ದಾಖಲಿಸಿದಾಗ, ತಪ್ಪು ಆರೋಪ ಹೊರಿಸಿ ಪೊಲೀಸ್ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕೆಲಸ ಮಾಡಿದಾಗ ಈ ಸಂಖ್ಯೆಗೆ ಕರೆ ಮಾಡಿ ನೆರವು ಪಡೆಯಬಹುದು. ರಾಜ್ಯದ ಮೂಲೆಮೂಲೆಗಳಲ್ಲೂ ಕೂಡ ಇರುವ ನಮ್ಮ ವಕೀಲರ ತಂಡ ಕಾರ್ಯಕರ್ತರ ನೆರವಿಗೆ ಧಾವಿಸಲಿದೆ. ಕಾರ್ಯಕರ್ತರ ಪರವಾಗಿ ಕೋರ್ಟಿನಲ್ಲಿ, ಪೊಲೀಸ್ ಠಾಣೆಯಲ್ಲಿ ಕೇಸು ನಡೆಸಿ ಅವರ ರಕ್ಷಣೆ ಮಾಡಲಿದೆ ಎಂದು ಭರವಸೆ ನೀಡಿದರು.
ಕಾಂಗ್ರೆಸ್ ಸರಕಾರ ಬಂದಿದೆ ಎಂದು ಧೈರ್ಯಗೆಡದಿರಿ. ಕಾಂಗ್ರೆಸ್ ಹಿಂದೆ ಅಧಿಕಾರದಲ್ಲಿ ಇದ್ದಾಗ ಸುಳ್ಳು ಕೇಸು ಹಾಕಿದ್ದು, ಅಭಿವ್ಯಕ್ತಿ ಸ್ವಾತಂತ್ರ್ಯ, ಧ್ವನಿ ಹತ್ತಿಕ್ಕುವ ಕೆಲಸ ಮಾಡಿದ ಅಂಶಗಳಲ್ಲಿ ನಮಗೆ ಅನುಭವವಿದೆ. ರಾಜ್ಯದ ಎಲ್ಲ ಕಾರ್ಯಕರ್ತರು, ಸಂಘ ಪರಿವಾರದ, ಹಿಂದುತ್ವದ ಕೆಲಸ ಮಾಡುವ ಕಾರ್ಯಕರ್ತರು ಮತ್ತು ಹಿತೈಷಿಗಳು ಧೈರ್ಯಗೆಡುವ ಅಗತ್ಯವಿಲ್ಲ. ಅವರು ಒಂದು ಕೇಸು ಹಾಕಿದರೆ ರಾತ್ರಿಯೇ ಆಗಿದ್ದರೂ ನಿಮ್ಮ ಜೊತೆ ಬಂದು ಹೆಗಲಿಗೆ ಹೆಗಲು ಕೊಟ್ಟು ಕಾನೂನು ಹೋರಾಟ ಮಾಡಿ ನಿಮ್ಮ ಜೊತೆ ಹೋರಾಟ ಮಾಡುತ್ತೇವೆ ಎಂದು ಆಶ್ವಾಸನೆ ನೀಡಿದರು.
ಹೊಸ ಕಾಂಗ್ರೆಸ್ ಸರಕಾರ ಬಂದ ಬಳಿಕ ಧಮ್ಕಿ ಹಾಕುವುದು, ಸುಳ್ಳು ಆಪಾದನೆ ಹೊರಿಸಿ ನಮ್ಮ ಕಾರ್ಯಕರ್ತರನ್ನು ಗುರಿ ಮಾಡಿ ಪೊಲೀಸ್ ಸ್ಟೇಷನ್ಗಳಲ್ಲಿ ಕೇಸು ದಾಖಲಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ನಿನ್ನೆ ತಾನೇ ರಾಯಚೂರಿನಲ್ಲೂ ಕೂಡ ಒಬ್ಬ ಕಾರ್ಯಕರ್ತರ ಮೇಲೆ ಕೇಸು ಹಾಕಿ ಬಂಧಿಸಿದ ಪ್ರಕರಣ ರಾಜ್ಯದ ಗಮನಕ್ಕೆ ಬಂದಿದೆ ಎಂದು ಆಕ್ಷೇಪಿಸಿದರು.
ಬಿಜೆಪಿ ರಾಜ್ಯ ಕಾನೂನು ಪ್ರಕೋಷ್ಟದ ಸಂಚಾಲಕ ಯೋಗೇಂದ್ರ ಹೂಡಾಘಟ್ಟ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.