ಸುದ್ದಿಮೂಲ ವಾರ್ತೆ
ಬೆಂಗಳೂರು, ಏ.2: ನಗರ ಹೊರವಲಯದಲ್ಲಿ ಬಿಜೆಪಿ ನಡೆಸುತ್ತಿರುವ ಕೋರ್ ಕಮಿಟಿ ಸಭೆ ಭಾನುವಾರ ಮುಕ್ತಾಯವಾಗಿದ್ದು, ಏ.8 ರಂದು ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುವ ನಿರೀಕ್ಷೆ ಇದೆ.
ಕಾಂಗ್ರೆಸ್ ಈಗಾಗಲೇ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ಮಂಗಳವಾರ ಎರಡನೇ ಪಟ್ಟಿ ಬಿಡುಗಡೆ ಮಾಡಲು ಸಿದ್ಧವಾಗಿದ. ಜೆಡಿಎಸ್ ಸಹ ತನ್ನ ಮೊದಲ ಪಟ್ಟಿ ಬಿಡುಗಡೆಗೊಳಿಸಿ ಎರಡನೇ ಪಟ್ಟಿಯ ನಿರೀಕ್ಷೆಯಲ್ಲಿದೆ. ಹೀಗಾಗಿ ಬಿಜೆಪಿ ಅಭ್ಯರ್ಥಿಗಳಲ್ಲಿ ತೀವ್ರ ತಳಮಳವಾಗುತ್ತಿದ್ದು, ಶೀಘ್ರ ಪಟ್ಟಿ ಬಿಡುಗಡೆಗೆ ಆಕಾಂಕ್ಷಿಗಳು ಕಾತರಿಸುತ್ತಿದ್ದಾರೆ. ಆದಷ್ಟು ಬೇಗ ಪಟ್ಟಿ ಬಿಡುಗಡೆ ಆಂತರಿಕವಾಗಿ ಒತ್ತಡ ಹೆಚ್ಚಾಗುತ್ತಿದೆ.
ನವದೆಹಲಿಯಲ್ಲಿ ಏ.4ರಂದು ಬಿಜೆಪಿ ಸಂಸದೀಯ ಮಂಡಳಿ ಸಭೆ ಕರೆಯಲಾಗಿದೆ. ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಅಂತಿಮಗೊಳಿಸಿದ ಪಟ್ಟಿಯನ್ನು ಬಿಜೆಪಿ ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಲಾಗುತ್ತದೆ. ಅಲ್ಲಿ ಅಭ್ಯರ್ಥಿಗಳ ಪಟ್ಟಿ ಪರಿಶೀಲಿಸಿ ಅದನ್ನು ಸಂಸದೀಯ ಮಂಡಳಿಯ ಮುಂದೆ ಇಡಲಾಗುತ್ತದೆ. ಏ.8 ರಂದು ಸಂಸದೀಯ ಮಂಡಳಿ ಸಭೆ ನಡೆಯಲಿದ್ದು, ಅಂದೇ ತನ್ನ ಮೊದಲ ಪಟ್ಟಿ ಬಿಡುಗಡೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.
ಆಡಳಿತಾರೂಢ ಬಿಜೆಪಿಗೆ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿದೆ. ಮೊದಲ ಹಂತದಲ್ಲಿ ಯಾವುದೇ ಗೊಂದಲ ಇಲ್ಲದ ಹಾಲಿ ಸಚಿವರು, ಶಾಸಕರು ಸಹಿತ ಬಿಜೆಪಿ ಹಿಡಿತದಲ್ಲಿರುವಂತಹ ಸುಮಾರು 150 ಕ್ಷೇತ್ರಗಳಿಗೆ ಮಾತ್ರ ಅಭ್ಯರ್ಥಿಗಳನ್ನು ಘೋಷಿಸಲಾಗುತ್ತದೆ. ಅದಾದ ಕೆಲ ದಿನಗಳ ಬಳಿಕ ಎರಡನೇ ಪಟ್ಟಿ ಬಿಡುಗಡೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.
ಈ ಮಧ್ಯೆ ಬೆಂಗಳೂರಿನಲ್ಲಿ ಜಿಲ್ಲಾ ಮುಖಂಡರುಗಳೊಂದಿಗೆ ನಡೆಸಿದ ಸಭೆಯಲ್ಲಿ ಹಾಲಿ ಸಚಿವರು ಮತ್ತು ಶಾಸಕರ ಬಗ್ಗೆ ಕೆಲವೆಡೆ ಭಿನ್ನಾಭಿಪ್ರಾಯಗಳು ಕೇಳಿಬಂದಿವೆ. ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ಹೊಂದಿರುವ ಕೆಲವು ಶಾಸಕರಿಗೆ ಟಿಕೆಟ್ ಕೈತಪ್ಪುವ ಆತಂಕವೂ ಎದುರಾಗಿದೆ.
ಬಿಜೆಪಿಯ15ಕ್ಕೂ ಹೆಚ್ಚು ಹಾಲಿ ಶಾಸಕರಿಗೆ ಟಿಕೆಟ್ ಕೈತಪ್ಪುತ್ತದೆ ಎಂದು ಹೇಳಲಾಗುತ್ತದೆ. ಸಚಿವ ಶಿವರಾಮ್ ಹೆಬ್ಬಾರ್, ದಾವಣಗೆರೆ ಉತ್ತರ ಕ್ಷೇತ್ರದ ಎಸ್.ಎ. ರವೀಂದ್ರನಾಥ್, ಮಾಯಕೊಂಡ ಕ್ಷೇತ್ರದ ಹಾಲಿ ಶಾಸಕ ಪ್ರೊ. ಲಿಂಗಣ್ಣ, ಕಳಕಪ್ಪ ಬಂಡಿ, ಪರಣ್ಣ ಮುನವಳ್ಳಿ, ಗೂಳಿಹಟ್ಟಿ ಶೇಖರ್, ನೆಹರೂ ಓಲೆಕಾರ್ ಸಹಿತ ಹಲವರಿಗೆ ಟಿಕೆಟ್ ಕೈತಪ್ಪುವ ಆತಂಕ ಎದುರಾಗಿದೆ.
ಇನ್ನು ವಯಸ್ಸಿನ ಕಾರಣಕ್ಕಾಗಿ ಸಚಿವ ಗೋವಿಂದ ಕಾರಜೋಳ, ಕೆ.ಎಸ್. ಈಶ್ವರಪ್ಪ, ಎಸ್. ಅಂಗಾರ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೂ ಸಹ ಟಿಕೆಟ್ ಅನುಮಾನ ಎಂದು ಹೇಳಲಾಗುತ್ತಿದೆ.
ಪ್ರಮುಖ ನಾಯಕರಿಗೆ ಟಿಕೆಟ್ ತಪ್ಪಿಸಿ ಅವರನ್ನು ಪಕ್ಷ ಸಂಘಟನೆಗೆ ಬಳಸಿಕೊಳ್ಳಲಾಗುತ್ತದೆ. ಅಂತಹ ಕ್ಷೇತ್ರಗಳಲ್ಲಿ ಸಂಘ ನಿಷ್ಠ, ಪಕ್ಷ ನಿಷ್ಠ ಯುವಕರಿಗೆ ಟಿಕೆಟ್ ನೀಡಲು ಚಿಂತಿಸಲಾಗಿದೆ ಎಂದೂ ಹೇಳಲಾಗುತ್ತದೆ.