ಸುದ್ದಿಮೂಲ ವಾರ್ತೆ
ಬೆಂಗಳೂರು, ಏ.9: ಬಿಜೆಪಿಯ ನಾಯಕರು ಆ ಪಕ್ಷ ತೊರೆಯಲು ಕಾಯುತ್ತಿದ್ದಾರೆ. ಹೀಗಾಗಿ ತಮ್ಮ ನಾಯಕರುಗಳನ್ನು ಪಕ್ಷದಲ್ಲೇ ಹಿಡಿದಿಟ್ಟುಕೊಳ್ಳು ಅವರು ಪಟ್ಟಿ ಬಿಡುಗಡೆ ಮಾಡುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳು ಭಾನುವಾರ ಮಾತನಾಡಿದ ಅವರು, ಬಿಜೆಪಿಯಲ್ಲಿ ಸಾಕಷ್ಟು ಗೊಂದಲಗಳಿವೆ. ಅವರಿಗೆ ಅಭ್ಯರ್ಥಿ ಅಂತಿಮ ಮಾಡಲು ಸಾಧ್ಯವಾಗುತ್ತಿಲ್ಲ. ಕೊನೆ ಕ್ಷಣದವರೆಗೂ ಪಕ್ಷ ತೊರೆಯಲು ಅವಕಾಶ ನೀಡಬಾರದು ಎಂದು ಕಾಯುತ್ತಿದ್ದಾರೆ ಎಂದು ಹೇಳಿದರು.
ಬಿಜೆಪಿಯವರು ತಮ್ಮ ನಾಯಕರನ್ನು ಈ ರೀತಿ ಹಿಡಿದಿಟ್ಟುಕೊಳ್ಳಬಹುದು. ಆದರೆ ರಾಜ್ಯದ ಮತದಾರರು ಬಿಜೆಪಿ ಸರ್ಕಾರವನ್ನು ಕಿತ್ತೊಗೆದು ಕಾಂಗ್ರೆಸ್ ಸರ್ಕಾರವನ್ನು ತರಲು ತೀರ್ಮಾನ ಮಾಡಿಯಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದ ಮೂರನೇ ಪಟ್ಟಿ ಬಿಡುಗಡೆ ಯಾವಾಗ ಎಂದು ಕೇಳಿದಾಗ, ‘ಬಿಜೆಪಿಯ ಪಟ್ಟಿ ನೋಡೋಣ. ಅವರ ಮೊದಲ ಪಟ್ಟಿ ಬಿಡುಗಡೆ ಯಾವಾಗ ಎಂದು ನೀವು ಅವರನ್ನು ಕೇಳುತ್ತಲೇ ಇಲ್ಲ. ಅವರು ಪಟ್ಟಿ ಬಿಡುಗಡೆ ಮಾಡಲಿ ನೋಡೋಣ ಎಂದರು.
ಅನೇಕ ಟಿಕೆಟ್ ವಂಚಿತರಿಗೆ ಜೆಡಿಎಸ್ ಗಾಳ ಹಾಕುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಅವರು ಹಾಕಲಿ, ತೊಂದರೆ ಇಲ್ಲ. ಅವರ ಪಕ್ಷದಿಂದ ಹಾಲಿ ಶಾಸಕರುಗಳೇ ನಮ್ಮ ಪಕ್ಷ ಸೇರುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಅವರ ಪಕ್ಷದಿಂದ ಸ್ಪರ್ಧಿಸಿದ್ದ 20 ಮಂದಿ ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ನಾವು ಅವರ ಪ್ರಯತ್ನವನ್ನು ಪ್ರಶ್ನಿಸುವುದಿಲ್ಲ. ರಾಜಕೀಯದಲ್ಲಿ ಇದೆಲ್ಲವೂ ಸರ್ವೇ ಸಾಮಾನ್ಯ. ರಾಜ್ಯದ ಜನರ ಆಶೀರ್ವಾದದಿಂದ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಪಡೆಯಲಿದೆ. ಜನರ ಸೇವೆ ಮಾಡಿ ಪ್ರಜಾಪ್ರಭುತ್ವ ರಕ್ಷಣೆ ಮಾಡುತ್ತೇವೆ’ ಎಂದು ಉತ್ತರಿಸಿದರು.
ವರುಣಾದಲ್ಲಿ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಲು ಬಿಜೆಪಿ ತಯಾರಿ ನಡೆಸುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ಅವರ ಪಕ್ಷದಲ್ಲಿ ಅವರು ಏನಾದರೂ ಮಾಡಿಕೊಳ್ಳಲಿ. ನಮ್ಮ ಯಾವುದೇ ಅಭ್ಯಂತರವಿಲ್ಲ ಎಂದು ಹೇಳಿದರು.