ಸುದ್ದಿಮೂಲವಾರ್ತೆ
ಕೊಪ್ಪಳ ಏ ೦೪: ಮೇ ೧೦ ರಂದು ನಡೆಯುವ ಚುನಾವಣೆಗೆ ರಾಜಕೀಯ ಪಕ್ಷಗಳು ಸಿದ್ದತೆ ನಡೆಸಿವೆ. ಈ ಮಧ್ಯೆ ಕಾಂಗ್ರೆಸ್ ಅಭ್ಯರ್ಥಿ ಈಗಾಗಲೇ ಪ್ರಚಾರ ಆರಂಭಿಸಿದ್ದಾರೆ. ಆದರೆ ಬಿಜೆಪಿಯಲ್ಲಿ ಯಾರಿಗೆ ಟಿಕೆಟ್ ಎಂಬ ಗೊಂದಲ ಮುಂದುವರಿದಿದೆ. ಹಾಲಿ ಸಂಸದ ಸಂಗಣ್ಣ ಕರಡಿ ಟಿಕೆಟ್ ಗಾಗಿ ಲಾಭಿ ನಡೆಸಿದ್ದಾರೆ. ಹೇಗಾದರೂ ಆಗಲಿ ವಿಧಾನಸಭೆಗೆ ಹೋಗಬೇಕೆಂಬ ಆಸೆ ಹೊಂದಿದ್ದಾರೆ.
೨೦೨೩ ರ ಚುನಾವಣೆಗೆ ಆಖಾಡ ಸಿದ್ದವಾಗಿದೆ. ಈ ಬಾರಿ ಕೊಪ್ಪಳ ವಿಧಾನಸಭೆಯಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳರಿಗೆ ಮೂರನೇಯ ಬಾರಿಯ ಗೆಲುವಿಗೆ ಬ್ರೇಕ್ ಹಾಕಲು ಬಿಜೆಪಿ ಅಭ್ಯರ್ಥಿಗಳ ಹುಡುಕಾಟ ನಡೆಸಿದೆ. ಈ ಬಾರಿ ವಿಧಾನಸಭೆಗೆ ಸ್ಪರ್ಧಿಸಲು ಕೊಪ್ಪಳ ಸಂಸದ ಸಂಗಣ್ಣ ಕರಡಿ ಲಾಭಿ ನಡೆಸಿದ್ದಾರೆ. ಕೊಪ್ಪಳ ವಿಧಾನಸಭೆಯಿಂದ ನಾಲ್ಕು ಬಾರಿ ಆಯ್ಕೆಯಾಗಿರುವ ಸಂಗಣ್ಣ ಕರಡಿ ೨೦೧೩ ರಲ್ಲಿ ಸೋಲು ಅನುಭವಿಸಿದ್ದರು. ೨೦೧೪ ರಿಂದ ಎರಡು ಬಾರಿ ಲೋಕಸಭಾ ಚುನಾವಣೆಗೆ ಆಯ್ಕೆಯಾಗಿದ್ದಾರೆ. ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾದರೂ ಸಚಿವ ಸ್ಥಾನ ಸಿಕ್ಕಿಲ್ಲ. ಈ ಬಾರಿ ಮತ್ತೆ ವಿಧಾನಸಭೆಗೆ ಸ್ಪರ್ಧಿಸಿ ಆಯ್ಕೆಯಾಗಿ ಸಚಿವರಾಗಬೇಕೆಂಬ ಆಸೆ ಇದೆ. ಈ ಮಧ್ಯೆ ಬಿಜೆಪಿಯಲ್ಲಿ ಹಾಲಿ ಸಂಸದರಿಗೆ ಟಿಕೆಟ್ ಇಲ್ಲ ಹಾಗು ವಯಸ್ಸಿನ ಕಾರಣಕ್ಕಾಗಿ ಸಂಗಣ್ಣ ಕರಡಿಗೆ ಟಿಕೆಟ್ ಇಲ್ಲ ಎಂಬ ವದಂತಿ ಇದೆ. ಆದರೆ ತಮಗೆ ಟಿಕೆಟ್ ನೀಡಬೇಕೆಂದು ಬಿಜೆಪಿ ಹಿರಿಯ ಮುಖಂಡರಲ್ಲಿ ಲಾಭಿ ನಡೆಸಿದ್ದಾರೆ. ಇಲ್ಲಿಯವರೆಗೂ ಬಿಜೆಪಿ ನಡೆಸಿರುವ ಸಮಿಕ್ಷೆಯಲ್ಲಿ ಕೊಪ್ಪಳದಿಂದ ಸಂಗಣ್ಣ ಹೆಸರು ಮುಂಚೂಣಿಯಲ್ಲಿದೆ ಎನ್ನಲಾಗಿದೆ. ಒಂದು ವೇಳೆ ಸಂಗಣ್ಣ ಕರಡಿಗೆ ಟಿಕೆಟ್ ನೀಡಿದರೆ ಮತ್ತಷ್ಟು ಲೋಕಸಭಾ ಸದಸ್ಯರು ಟಿಕೆಟ್ ಕೇಳುವ ಸಾಧ್ಯತೆ ಇದೆ. ಈಗ ಸಂಗಣ್ಣ ಕರಡಿ ಕೊನೆಯ ಹಂತದಲ್ಲಿ ಪ್ರಯತ್ನ ನಡೆಸಿದ್ದಾರೆ.
ಈ ಮಧ್ಯೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮೊದಲು ಸಿ ವಿ ಚಂದ್ರಶೇಖರರಿಗೆ ಟಿಕೆಟ್ ಘೋಷಣೆ ಮಾಡಿತ್ತು. ಕೊನೆಯ ಘಳಿಗೆಯಲ್ಲಿ ಸಂಸದ ಸಂಗಣ್ಣ ಕರಡಿ ಪುತ್ರ ಅಮರೇಶ ಕರಡಿಗೆ ಬಿ ಫಾರ್ಮ ನೀಡಲಾಗಿತ್ತು. ಇದೇ ಕಾರಣಕ್ಕೆ ಬಿಜೆಪಿ ಸೋಲು ಅನುಭಿಸಿತು ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ. ಕಳೆದ ಬಾರಿ ನನಗೆ ಅನ್ಯಾಯವಾಗಿದೆ. ಈ ಬಾರಿ ನನಗೆ ಟಿಕೆಟ್ ಸಿಗುತ್ತದೆ ಎಂಬ ವಿಶ್ವಾಸವನ್ನು ಸಿ ವಿ ಚಂದ್ರಶೇಖರ ಹೇಳಿದ್ದಾರೆ.
ಬಿಜೆಪಿಯಲ್ಲಿ ಟಿಕೆಟ್ ಗೊಂದಲ ಮುಂದುವರಿದಿದ್ದರೆ ಕಳೆದ ವಾರವೇ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಮಾಡಿದ್ದು ಹಾಲಿ ಶಾಸಕ ರಾಘವೇಂದ್ರ ಹಿಟ್ನಾಳ ಈಗ ಪ್ರಚಾರ ಆರಂಭಿಸಿದ್ದಾರೆ. ತಮ್ಮ ವಿರುದ್ದ ಯಾರೇ ನಿಂತರೂ ನಾನು ಗೆಲ್ಲುತ್ತೇನೆ. ಮೂರನೆಯ ಬಾರಿ ಕೊಪ್ಪಳ ವಿಧಾನಸಭೆಯಲ್ಲಿ ಆಯ್ಕೆಯಾಗುತ್ತೇನೆ ಎಂದು ಹೇಳಿದ್ದಾರೆ.
ಒಂದು ವೇಳೆ ಸಂಗಣ್ಣ ಕರಡಿಗೆ ಬಿಜೆಪಿ ಟಿಕೆಟ್ ನೀಡದಿದ್ದರೆ ಪಕ್ಷೇತರ ಅಥವಾ ಜೆಡಿಎಸ್ ನಿಂದಲೂ ಸ್ಪರ್ಧಿಸಬಹುದು ಎಂಬ ವದಂತಿ ಇದೆ. ಸಂಗಣ್ಣ ಜೆಡಿಎಸ್ ಗೆ ಬರುತ್ತಾರೆ ಎಂಬ ಕಾರಣಕ್ಕೆ ಜೆಡಿಎಸ್ ಕಾದು ನೋಡುವ ತಂತ್ರ ಅನುಸರಿಸುತ್ತಿದೆ. ಬಿಜೆಪಿಯಲ್ಲಿ ಈಗ ನಾಲ್ಕು ಹೆಸರುಗಳು ಪ್ರಬಲವಾಗಿ ಕೇಳಿ ಬರುತ್ತಿವೆ. ಸಂಸದ ಸಂಗಣ್ಣ ಕರಡಿ. ಸಿ ವಿ ಚಂದ್ರಶೇಖರ. ರಾಜಶೇಖರ ಆಡೂರು ಹಾಗು ಸಂಗಣ್ಣ ಕರಡಿ ಟಿಕೆಟ್ ನಿರಾಕರಿಸಿದರೆ ಪುತ್ರ ಗವಿಸಿದ್ದಪ್ಪ ಕರಡಿ. ಬೆಂಬಲಿಗ ಮಹಾಂತೇಶ ಪಾಟೀಲ ಅಥವಾ ಬಸವರಾಜ ಪುರದರಿಗೆ ಟಿಕೆಟ್ ನೀಡಿ ಎಂದು ಕೇಳುತ್ತಿದ್ದಾರೆ ಎಂಬ ವದಂತಿ ಕೇಳಿ ಬರುತ್ತಿದೆ. ಬಿಜೆಪಿಯ ಟಿಕೆಟ್ ಗೊಂದಲ ಮುಂದುವರಿದಂತೆ ಕೊಪ್ಪಳದಲ್ಲಿ ಬಿಜೆಪಿಯಲ್ಲಿ ಗೊಂದಲ ಅಧಿಕವಾಗಲಿದೆ ಎನ್ನಲಾಗಿದೆ.