ಸುದ್ದಿಮೂಲ ವಾರ್ತೆ
ಬೆಂಗಳೂರು, ಆ.26: ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಳೂರು ಭೇಟಿ ಮತ್ತು ರೋಡ್ ಶೋ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಸಹಿತ ಬಿಜೆಪಿ ಹಿರಿಯ ಶಾಸಕರು ರಸ್ತೆ ಬದಿ ಬ್ಯಾರಿಕೇಡ್ಗಳ ಹಿಂದೆ ನಿಂತು ಕೈಬೀಸಿದ್ದು ಕಾಂಗ್ರೆಸ್ ನಾಯಕರಿಂದ ಗೇಲಿಗೆ ಒಳಗಾಗಿದೆ.
ಚಂದ್ರಯಾನ-3ರ ಯಶಸ್ಸಿನ ಹಿನ್ನೆಲೆಯಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿಗಳನ್ನು ಅಭಿನಂದಿಸಲು ಪ್ರಧಾನ ಮಂತ್ರಿಯವರು ಶನಿವಾರ ನಗರಕ್ಕೆ ಬಂದಿದ್ದರು. ಆ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬೆಂಗಳೂರಿನ ಶಾಸಕರಾದ ಆರ್. ಅಶೋಕ್, ಮುನಿರತತ್ನ, ಕೆ. ಗೋಪಾಲಯ್ಯ, ಎಂ. ಕೃಷ್ಣಪ್ಪ, ಎಸ್.ಆರ್. ವಿಶ್ವನಾಥ್, ದಾಸರಹಳ್ಳಿ ಮುನಿರಾಜು ಸಹಿತ ಹಲವರು ಪ್ರಧಾನಿ ಭೇಟಿಗೆ ವಿಮಾನ ನಿಲ್ದಾಣಕ್ಕೆ ತೆರಳಿದ್ದರು. ಆದರೆ, ಅವರಿಗೆ ಅವಕಾಶ ನೀಡದಿರುವುದರಿಂದ ಹೊರಗೆ ಬ್ಯಾರಿಕೇಡ್ ಹಿಂಭಾಗ ಸಾಮಾನ್ಯರಂತೆ ನಿಂತಿದ್ದರು. ಮೋದಿ ಬರುತ್ತಿದ್ದಂತೆ ಬ್ಯಾರಿಕೇಡ್ಗಳನ್ನು ಏರಿ ಅವರತ್ತ ಕೈಬೀಸಿದರು. ಇದು ಕಾಂಗ್ರೆಸ್ ನಾಯಕರ ಲೇವಡಿಗೆ ಒಳಗಾಗಿದೆ.
ಇದೊಂದು ಅನೌಪಚಾರಿಕ ಭೇಟಿ ಆಗಿದ್ದರಿಂದ ರಾಜ್ಯಪಾಲರು, ಮುಖ್ಯಮಂತ್ರಿ ಸಹಿತ ಯಾರೂ ಸಹ ಶಿಷ್ಟಾಚಾರ ಪಾಲಿಸುವ ಅಗತ್ಯವಿಲ್ಲ ಎಂದು ಪ್ರಧಾನಿ ಕಚೇರಿಯಿಂದ ಸಂದೇಶ ಬಂದಿತ್ತು. ಹೀಗಾಗಿ ಎಚ್.ಎ.ಎಲ್. ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿಯವರನ್ನು ಸ್ವಾಗತಿಸಲು ಕೇವಲ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು ಮತ್ತು ಪೊಲೀಸ್ ಅಧಿಕಾರಿಗಳು ಮಾತ್ರ ತೆರಳಿದ್ದರು. ಈ ವೇಳೆ ಬಿಜೆಪಿ ನಾಯಕರಿಗೂ ಸಹ ವಿಮಾನ ನಿಲ್ದಾಣಕ್ಕೆ ಆಹ್ವಾನ ಇರಲಿಲ್ಲ.
ಇದನ್ನು ಟೀಕಿಸಿರುವ ರಾಜ್ಯ ಕಾಂಗ್ರೆಸ್, ‘ನಾಯಕರದ್ದು ಎಂತಹಾ ದುಸ್ಥಿತಿ.. ರಾಜ್ಯ ಬಿಜೆಪಿಯ ‘ದಂಡ’ನಾಯಕರು, ಚಕ್ರವರ್ತಿಗಳು, ಸಾಮ್ರಾಟರೆಲ್ಲಾ ಬೀದಿ ಪಾಲಾಗಿದ್ದಾರೆ! ಬಿಜೆಪಿಯ ಹೈಕಮಾಂಡ್ ಹಾಗೂ ಮೋದಿ ಹೀನಾಯ ಸೋಲಿನ ಬಳಿಕ ರಾಜ್ಯದ ನಾಯಕರನ್ನು ಹತ್ತಿರಕ್ಕೂ ಸೇರಿಸದೇ ಬೀದಿ ಪಾಲು ಮಾಡಿದ್ದಾರೆ ಎಂಬುದಕ್ಕೆ ಈ ಚಿತ್ರಗಳೇ ಸಾಕ್ಷಿ! ಛೇ, ಮಿನಿಮಮ್ ಮರ್ಯಾದೆಯೂ ಇಲ್ಲದಾಯಿತೇ? ಎಂದು ಟ್ವೀಟ್ ಮೂಲಕ ಗೇಲಿ ಮಾಡಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಟ್ವೀಟ್ ಮೂಲಕ, ಪ್ರಧಾನಿ ಬೆಂಗಳೂರಿಗೆ ಬಂದಿದ್ದು ಚಂದ್ರಯಾನದ ಅಭೂತಪೂರ್ವ ಯಶಸ್ಸಿನ ಹಿನ್ನೆಲೆಯಲ್ಲಿ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸುವುದಕ್ಕೇ ಹೊರತು ಪಕ್ಷದ ಸಭೆಗಲ್ಲ. ಆದಾಗ್ಯೂ ನಮ್ಮ ಪಕ್ಷದ ಪ್ರಮುಖರು ಜನಸಾಮಾನ್ಯರಂತೆ ನಿಂತು ಅವರ ಸಂತಸದಲ್ಲಿ ಪಾಲ್ಗೊಂಡು ಅವರೊಡನೆ ತಮ್ಮ ಅಭಿಮಾನ ಪ್ರದರ್ಶಿಸಿರುವುದರಲ್ಲಿ ಹುಳುಕು ಹುಡುಕಲೆತ್ನಿಸಿರುವ ನಿಮಗೆ ಕಾಮಾಲೆಯಂತೆ ಏನೋ ಕಾಯಿಲೆ ಇರಬಹುದು! ಎಂದು ತಿರುಗೇಟು ನೀಡಿದೆ.
ನಾಯಕರ ಮಧ್ಯೆ ವಾಕ್ಸಮರು:
ಇದು ಇಷ್ಟಕ್ಕೆ ಸುಮ್ಮನಾಗದೆ ಎರಡೂ ಪಕ್ಷಗಳ ಮಧ್ಯೆ ವಾಕ್ಸಮರಕ್ಕೂ ಕಾರಣವಾಗಿದೆ. ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು, ‘ಬ್ಯಾರಿಕೇಡ್ ಬಂಧಿಗಳು’ ಎಂದು ಟ್ವೀಟ್ ಮೂಲಕ ಕುಟುಕಿದ್ದಾರೆ. ಪ್ರಧಾನಿ ಮುಂದೆ ಬ್ಯಾರಿಕೇಡ್ ಬಂಧಿಗಳಾಗಿ ಗಮನ ಸೆಳೆಯಲು ಹರಸಾಹಸ ಮಾಡುತ್ತಿರುವ ಬಿಜೆಪಿ ನಾಯಕರು ಸ್ವಾಭಿಮಾನ, ಆತ್ಮಗೌರವವನ್ನು ಬೀದಿಪಾಲು ಮಾಡಿಕೊಂಡಿದ್ದು ಕರುಣಾಜನಕವಾಗಿದೆ ಎಂದಿದ್ದಾರೆ.
ರಾಜಕೀಯವಾಗಿ, ಸೈದ್ದಾಂತಿಕವಾಗಿ ವಿರೋಧಿಗಳಾಗಿದ್ದರೂ ಕರ್ನಾಟಕ ಬಿಜೆಪಿ ನಾಯಕರ ದುರಾವಸ್ಥೆ ನೋಡಿ ಕರುಣೆ ಹುಟ್ಟುತ್ತಿದೆ! ಎಂದೂ ಟ್ವಿಟ್ ಮಾಡಿ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ‘ರಾಜ್ಯ ಬಿಜೆಪಿ ನಾಯಕರನ್ನು ಅವರ ಪಕ್ಷದ ವರಿಷ್ಠರು ಕಾಲ ಕಸಕ್ಕಿಂತ ಕಡೆಯಾಗಿ ನೋಡುತ್ತಾರೆ ಎಂಬುದಕ್ಕೆ ಮೋದಿ ಅವರ ಇಂದಿನ ವರ್ತನೆಯೇ ಸಾಕ್ಷಿ. ಬಿಜೆಪಿ ನಾಯಕರು ಇಂದು ಮೋದಿ ಅವರ ಮುಂದೆ ಹಲ್ಲು ಗಿಂಜಿ ಜೀ ಹುಜೂರ್ ಎಂದು ಮಂಡಿಯೂರಿ ನಿಂತರೂ ಮೋದಿ ಅವರು ಕಣ್ಣೆತ್ತಿ ನೋಡಿಲ್ಲ. ಬಿಜೆಪಿ ನಾಯಕರೇ ಇನ್ನಷ್ಟು ದಿನ ಆತ್ಮಗೌರವ, ಸ್ವಾಭಿಮಾನ ಕಳೆದುಕೊಂಡು ಇರುತ್ತೀರಿ, ಆತ್ಮವಿಮರ್ಶೆ ಮಾಡಿಕೊಳ್ಳಿ ಎಂದು ಟ್ವೀಟ್ ಮಾಡಿದ್ದಾರೆ.
ಪ್ರೊಟೋಕಾಲ್ ಪ್ರಜ್ಞೆ ಇಲ್ಲ: ಆರ್. ಅಶೋಕ್
ಕಾಂಗ್ರೆಸ್ ನಾಯಕರಿಗೆ ಸಮಯಪ್ರಜ್ಞೆ, ರಾಜಕೀಯ ಪ್ರಜ್ಞೆ, ಪ್ರೊಟೋಕಾಲ್ ಬಗ್ಗೆ ಅರಿವು ಇಲ್ಲ. ಅವರಿಗೆ ವಿಜ್ಞಾನಿಗಳನ್ನು ಕಂಡರೆ ಆಗುವುದಿಲ್ಲ. ಗರೀಬಿ ಹಠಾವೋ ಹೆಸರೇಳಿಕೊಂಡೇ ತಾತ, ಮಕ್ಕಳು, ಮೊಮ್ಮಕ್ಕಳು ಅಧಿಕಾರ ಅನುಭವಿಸಿದರು. ಮತಕಕ್ಕಾಗಿ ರಾಜಕೀಯ ಮಾಡುತ್ತಾರೆ, ಮೋದಿ ದೇಶಕ್ಕಾಗಿ ರಾಜಕೀಯ ಮಾಡುತ್ತಾರೆ.
ಪ್ರಧಾನಿ ಕಚೇರಿ ಸಂದೇಶ ಗೌರವಿಸಿದ್ದೇವೆ
ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಕಚೇರಿ ಆರ್. ಅಶೋಕ್ ಅವರನ್ನು ಲೆಕ್ಕಕ್ಕೇ ಇಟ್ಟುಕೊಂಡಿಲ್ಲ ಎಂಬುದಕ್ಕೆ ಅವರ ಮಾತೇ ಸಾಕ್ಷಿ. ನಮ್ಮ ಸರ್ಕಾರ ಬಂದ ಬಳಿಕ ಮೊದಲ ಬಾರಿಗೆ ಬರುವ ಪ್ರಧಾನಿ ಸ್ವಾಗತಕ್ಕೆ ನಾವು ಸಜ್ಜಾಗಿದ್ದೆವು. ಆದರೆ, ಆದರೆ ಪ್ರಧಾನಮಂತ್ರಿಗಳ ಕಚೇರಿಯ ಸಂದೇಶ ಗೌರವಿಸಿ, ಸ್ವಾಗತಕ್ಕೆ ತೆರಳಲಿಲ್ಲ. ಈ ವಿಚಾರದ ಬಗ್ಗೆ ಪ್ರಧಾನಿ ಕಚೇರಿಯಿಂದ ಮಾಹಿತಿ ಪಡೆದುಕೊಂಡು ನಂತರ ಅಶೋಕ್ ಮಾತನಾಡಲಿ.
– ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ