ಸುದ್ದಿಮೂಲ ವಾರ್ತೆ
ಬೆಂಗಳೂರು, ಏ.3: ರಾಜ್ಯದ ಜನ ಕಾಂಗ್ರೆಸ್ ಪರ ಒಲವು ತೋರುತ್ತಿದ್ದು,ಕಾಂಗ್ರೆಸ್ ಪಕ್ಷ ಗೆಲುವಿನತ್ತ ಹೆಜ್ಜೆ ಹಾಕುತ್ತಿದೆ. ಹೀಗಾಗಿ ಅನೇಕ ನಾಯಕರು ಬಿಜೆಪಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಕರೆದಿದ್ದ ಮಾಧ್ಯಮಗೋಷ್ಠಿಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಕೂಡ್ಲಿಗಿ ಮಾಜಿ ಶಾಸಕ ಎನ್.ವೈ. ಗೋಪಾಲಕೃಷ್ಣ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ಬಳಿಕ ಮಾತನಾಡಿದರು.
ಗೋಪಾಲಕೃಷ್ಣ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಇಂದು ಕಾಂಗ್ರೆಸ್ ಸೇರುತ್ತಿದ್ದಾರೆ. ಅವರನ್ನು ಪಕ್ಷದ ಎಲ್ಲಾ ನಾಯಕರ ಪರವಾಗಿ ಸ್ವಾಗತಿಸುತ್ತೇನೆ ಎಂದು ಹೇಳಿದರು.
ಗೋಪಾಲಕೃಷ್ಣ ಅವರು ಯಾವುದೇ ಷರತ್ತು ಇಲ್ಲದೆ, ಪಕ್ಷದ ಕಾರ್ಯಕರ್ತನಾಗಿ ದುಡಿಯಲು ಸಿದ್ಧನಿದ್ದೇನೆ ಎಂದು ನಮ್ಮ ಬಳಿ ಇಚ್ಛೆ ವ್ಯಕ್ತಪಡಿಸಿದರು. ಅವರು ಪಕ್ಷ ಸೇರುವ ಇಂಗಿತ ವ್ಯಕ್ತಪಡಿಸಿದಾಗ ನೀವು ಈಗಾಗಲೇ ಶಾಸಕರಾಗಿದ್ದು ಕಾಂಗ್ರೆಸ್ ಸೇರುತ್ತಿರುವುದೇಕೆ ಎಂದು ನಾನು ಕೇಳಿದೆ. ಅದಕ್ಕೆ ಅವರು ಉತ್ತರಿಸಿ, ‘ನಾನು ಬಿಜೆಪಿ ನೋಡಿದ್ದೇನೆ. ನಾನು ಸಾಯುವ ಮುನ್ನ ಕಾಂಗ್ರೆಸಿಗನಾಗಿ ಸಾಯಬೇಕು ಅದಕ್ಕಾಗಿ ನಾನು ಕಾಂಗ್ರೆಸ್ ಸೇರಲು ಬಯಸುತ್ತೇನೆ’ ಎಂದರು.
ಇವರ ಸಹೋದರ ನ್ಯಾಯಾಧೀಶರಾಗಿದ್ದರೂ, ಸಂಸತ್ತಿನ ಸದಸ್ಯರಾಗಿದ್ದರು. ಅವರು ನೀನು ಬಿಜೆಪಿಗೆ ಹೋಗಿದ್ದರೂ ನಾನು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುತ್ತೇನೆ ಎಂದಿದ್ದರು. ಈ ರೀತಿ ಕಾಂಗ್ರೆಸ್ ಪಕ್ಷದ ಸಿದ್ಧಾಂತಕ್ಕೆ ಬೆರೆತಿರುವ ನಾಯಕರು ಮತ್ತೆ ತಮ್ಮ ಮನೆಗೆ ಮರಳಿದ್ದಾರೆ. ಅವರ ಜತೆ ಸಾವಿರಾರು ಕಾರ್ಯಕರ್ತರು ಇಂದು ಪಕ್ಷ ಸೇರುತ್ತಿದ್ದಾರೆ. ಇಲ್ಲಿರುವ ಎಲ್ಲರೂ ಮೊದಲು ಕಾರ್ಯಕರ್ತರು, ನಂತರ ನಾಯಕರಾಗಿದ್ದಾರೆ.
ಇನ್ನು ಜೆಡಿಎಸ್ ಶಾಸಕರಾದ ಶಿವಲಿಂಗೇಗೌಡರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, 9ರಂದು ತಮ್ಮ ಕ್ಷೇತ್ರದಲ್ಲಿ ಪಕ್ಷ ಸೇರಲು ಕೋರಿದ್ದಾರೆ. ಪಕ್ಷಕ್ಕೆ ಅರ್ಜಿ ಹಾಕುವಂತೆ ನಾವು ಸೂಚನೆ ನೀಡಿದ್ದೇವೆ ಎಂದು ಹೇಳಿದರು.
ಜೆಡಿಎಸ್ ಹಾಗೂ ಬಿಜೆಪಿ ಶಾಸಕರು ಸ್ವಯಂ ಪ್ರೇರಿತರಾಗಿ ಕಾಂಗ್ರೆಸ್ ಸೇರುತ್ತಿದ್ದಾರೆ. ಈ ಸಂದರ್ಭದಲ್ಲಿ ದಲಿತ ಕವಿ ಸಿದ್ದಲಿಂಗಯ್ಯ ಅವರ ಮಾತು ನೆನಪಾಗುತ್ತಿದೆ. ಹೋರಾಟ ಸಾಗಾರ ಸಾವಿರಾರು ನದಿಗಳು ಸೇರಿದಂತೆ ಎಂದು ಹೇಳಿದ್ದಾರೆ. ಅದೇ ರೀತಿ ಕಾಂಗ್ರೆಸ್ ಎಂದರೆ ಹೋರಾಟದ ಸಾಗರವಾದರೆ ಈ ಪಕ್ಷಕ್ಕೆ ಸೇರುತ್ತಿರುವ ಶಾಸಕರು, ನಾಯಕರು ನದಿಯಾಗಿದ್ದಾರೆ ಎಂದು ಬಣ್ಣಿಸಿದರು.
ಭ್ರಷ್ಟಾಚಾರ ಹಾಗೂ ಬೆಲೆ ಏರಿಕೆ ವಿರೋಧಿಸಿ ರಾಜ್ಯದ ಜನ ಕಾಂಗ್ರೆಸ್ ಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಮೂರ್ನಾಲ್ಕು ಬಾರಿ ಶಾಸಕರಾಗಿದ್ದ ನಾಯಕರೆಲ್ಲರೂ ತಮ್ಮ ಅಧಿಕಾರ ಅವಧಿ ಇದ್ದರೂ ಅದನ್ನು ತ್ಯಜಿಸಿ ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಪುಟ್ಟಣ್ಣ ಅವರು ಪರಿಷತ್ ನಲ್ಲಿ ನಾಲ್ಕು ವರ್ಷ ಅಧಿಕಾರ ಹೊಂದಿದ್ದರು, ಬಾಬುರಾವ್ ಚಿಂಚನಸೂರು ಅವರು ಕೂಡ ಅಧಿಕಾರ ಅವಧಿ ಇತ್ತು. ಗೋಪಾಲಕೃಷ್ಣ ಅವರು ಕೂಡ ಈಗ ಬಂದಿದ್ದಾರೆ. ದಳದಿಂದ ಅನೇಕ ನಾಯಕರು ಕಾಂಗ್ರೆಸ್ ಸೇರಿದ್ದಾರೆ. ಡಬಲ್ ಇಂಜಿನ ಸರ್ಕಾರದಿಂದ ಯಾವುದೇ ರೀತಿಯ ಅನುಕೂಲವಾಗಿಲ್ಲ ಎಂದು ಜನ ರಾಜ್ಯದಲ್ಲಿ ಬದಲಾವಣೆಗೆ ತೀರ್ಮಾನ ಮಾಡಿದ್ದಾರೆ.
ಬೀದರ್ ನಿಂದ ಚಾಮರಾಜನಗರದವರೆಗೂ ಅನೇಕ ಮಾಜಿ ಹಾಗೂ ಹಾಲಿ ಶಾಸಕರು ಪಕ್ಷ ಸೇರುತ್ತಿದ್ದಾರೆ. ಈ ಬಗ್ಗೆ ನಾನು ಹಾಗೂ ಸಿದ್ದರಾಮಯ್ಯ ಅವರು ಚರ್ಚೆ ಮಾಡಿದ್ದೇವೆ. ಅನೇಕ ನಾಯಕರು ರಾಜೀನಾಮೆ ನೀಡಿ ಕಾಂಗ್ರೆಸ್ ಬಾಗಿಲು ತಟ್ಟುತ್ತಿದ್ದಾರೆ. ಈಗ ಅವರ ಹೆಸರು ಹೇಳಲು ಬಯಸುವುದಿಲ್ಲ. ಅರ್ಜಿ ಬಂದ ನಂತರ ಉಳಿದ ವಿಚಾರ ಮಾತನಾಡುತ್ತೇವೆ. ಪಕ್ಷಕ್ಕೆ ಬರುವವರೆಲ್ಲರಿಗೂ ಸ್ಥಾನಮಾನ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಬಹಳ ಸೂಕ್ಷ್ಮವಾಗಿ ಪಕ್ಷ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ.
ಎನ್.ವೈ. ಗೋಪಾಲಕೃಷ್ಣ ಮಾತನಾಡಿ, ಕಾಂಗ್ರೆಸ್ ಕಚೇರಿಗೆ ಐದು ವರ್ಷಗಳ ಬಳಿಕ ಮರಳಿದ್ದೇನೆ. ಇಲ್ಲಿನ ಎಲ್ಲರೊಂದಿಗೂ ನನಗೆ ಭಾವನಾತ್ಮಕ ಸಂಬಂಧ ಇದೆ. ಮರಳಿ ಮನೆಗೆ ಬಂದಂತಾಗಿದೆ. ನನ್ನ ತಾಯಿ ಸಹಿತ ಇಡೀ ಕುಟುಂಬ ಕಾಂಗ್ರೆಸ್ಗಾಗಿ ಶ್ರಮಿಸಿದೆ ಎಂದು ಹೇಳಿದರು.
ನಾನು ಮೊಳಕಾಲ್ಮೂರು ಕ್ಷೇತ್ರದ ಆಕಾಂಕ್ಷಿ ನಿಜ. ಆದರೆ, ಕಾಂಗ್ರೆಸ್ ಪಕ್ಷ ಅದಕ್ಕೆ ಅವಕಾಶ ನೀಡಬೇಕು. ಕೇವಲ ನನ್ನ ಕ್ಷೇತ್ರ ಅಷ್ಟೇ ಅಲ್ಲದೆ, ವಿಜಯನಗರ, ಬಳ್ಳಾರಿ ಮತ್ತು ಚಿತ್ರದುರ್ಗ ಜಿಲ್ಲೆಗಳ ಇತರೆ ಅಭ್ಯರ್ಥಿಗಳ ಗೆಲುವಿಗೂ ನಾನು ನನ್ನ ಶ್ರಮ ಹಾಕುತ್ತೇನೆ. ಅಲ್ಲದೆ, ಕೂಡ್ಲಿಗಿ ಜನರೂ ಸಹ ಕಳೆದ ಬಾರಿ ನನ್ನನ್ನು ಗೆಲ್ಲಿಸಿದ್ದಾರೆ. ಆ ಜನರೊಂದಿಗೂ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದು, ಅಲ್ಲಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇನೆ ಎಂದು ಹೇಳಿದರು.
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ್ ರಾಠೋಡ್, ದಿನೇಶ್ ಗೂಳಿಗೌಡ, ಮಾಜಿ ಮೇಯರ್ ಹುಚ್ಚಪ್ಪ ಮತ್ತಿತರರು ಹಾಜರಿದ್ದರು.