ಸುದ್ದಿಮೂಲ ವಾರ್ತೆ
ಆನೇಕಲ್, ಅ.6: ರಾಜ್ಯ ಸರ್ಕಾರ ಜಿಹಾದಿಗಳ ಪರ ವಕಾಲತ್ತು ವಹಿಸುತ್ತಿದೆ ಎಂಬ ಸಂಸದ ತೇಜಸ್ವಿ ಸೂರ್ಯ ಹೇಳಿಕೆಗೆ ರಾಮಲಿಂಗಾರೆಡ್ಡಿ ತಿರಿಗೇಟು ನೀಡಿದ್ದಾರೆ.
ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಸರ್ಜಾಪುರ ದೊಮ್ಮಸಂದ್ರ ಮುಖ್ಯ ರಸ್ತೆಯಲ್ಲಿ ನೂತನ ಕೃಪ ಗ್ರಾರ್ಡ್ಮರ್ ಮಾರಾಟ ಮಳಿಗೆ ಉದ್ಘಾಟಿಸಿ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಬಿಜೆಪಿ ಕಾರ್ಯಕರ್ತ ಸಾವನ್ನಪ್ಪಿದ್ದ ವೇಳೆ ಇದೇ ವಿಚಾರವಾಗಿ ಬಿಜೆಪಿ ಮುಖಂಡರು ಗೃಹ ಸಚಿವರ ಮನೆ ಮುಂದೆ ಪ್ರತಿಭಟನೆ ನಡೆಸಿದರು. ಆದರೆ, ಈ ವಿಚಾರ ಬಗ್ಗೆ ಮನೆಯಲ್ಲಿ ಮಾತನಾಡುವಾಗ ತೇಜಸ್ವಿ ಸೂರ್ಯ ನಮ್ಮ ಸರ್ಕಾರ ಇದೆ ,ಅದೇ ಕಾಂಗ್ರೆಸ್ ಸರ್ಕಾರ ಇದ್ದಿದ್ರೆ ಕಲ್ಲು ಹೊಡೆಯಬಹುದಿತ್ತು ಎಂದು ಆಗ ಹೇಳಿದ್ದ ಆಡಿಯೋ ನಮ್ಮ ಬಳಿ ಇರುವುದಾಗಿ ತಿಳಿಸಿದರು.
ಶಿವಮೊಗ್ಗ ಕಲ್ಲುತೂರಾಟ ಪ್ರಕರಣದಲ್ಲೂ ಬಿಜೆಪಿ ರಾಜಕಾರಣ ಮಾಡುತ್ತಿದೆ. ಗಲಾಟೆಗಳಿಗೆ ಎಲ್ಲಿಯೂ ಆಸ್ಪದ ಕೊಡಬಾರದು. ಯಾರೇ ತಪ್ಪು ಮಾಡಿದರೂ ಶಿಕ್ಷೆ ಆಗಬೇಕು. ಅಂತಹ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಅದು ಯಾವುದೇ ಪಕ್ಷವಿರಲಿ, ಯಾವುದೇ ಧರ್ಮವಿರಲಿ. ಎಲ್ಲರನ್ನು ಮಟ್ಟಹಾಕುತ್ತೇವೆ ಎಂದು ಎಚ್ಚರಿಸಿದರು.
ಸರ್ಕಾರ ಪತನ ಬಗ್ಗೆ ಕುಮಾರಸ್ವಾಮಿ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿಯವರು ಹಗಲು ಕನಸು ಕಾಣುತ್ತಿದ್ದಾರೆ. ನಮ್ಮ ಸರ್ಕಾರಕ್ಕೆ 135 ಶಾಸಕರ ಬಲವಿದೆ. ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ. ಬಿಜೆಪಿ ಪಕ್ಷ ಹೇಳುವ ವಿಚಾರಕ್ಕೆ ಯಾವುದೇ ಬೆಲೆ ಇಲ್ಲ. ಅಕ್ರಮ ಮಾಡಿರುವ ವ್ಯಕ್ತಿಗಳನ್ನು ಬಿಜೆಪಿಗೆ ಸೇರಿ ಸೇರ್ಪಡೆ ಮಾಡುವುದು ಬಳಿಕ ಅವರಿಗೆ ಕ್ಲೀನ್ ಚಿಟ್ ನೀಡುವುದು ಅವರ ಸಿದ್ಧಾಂತ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು .