ಸುದ್ದಿಮೂಲ ವಾರ್ತೆ
ಬೆಂಗಳೂರು, ಏ.25: ರಾಜ್ಯದ ವಿಧಾನಸಭಾ ಚುನವಣಾ ಪ್ರಚಾರದ ಭಾಗವಾಗಿ ನಾಳೆ ಮತ್ತು ನಾಡಿದ್ದು (ಏ.25, 26) ಎಲ್ಲ 224 ಕ್ಷೇತ್ರಗಳಲ್ಲಿ ಬಿಜೆಪಿ ವಿಶೇಷ ‘ಮಹಾ ಪ್ರಚಾರ ಅಭಿಯಾನ’ವನ್ನು ಹಮ್ಮಿಕೊಂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ತಿಳಿಸಿದರು.
ನಗರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಎಲ್ಲ 224 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಕೇಂದ್ರ ನಾಯಕರಾದ ಅಮಿತ್ ಶಾ, ಜೆ.ಪಿ. ನಡ್ಡಾ ಚುನಾವಣಾ ಪ್ರವಾಸ ಆರಂಭಿಸಿದ್ದಾರೆ. ಒಂದು ತಿಂಗಳ ಹಿಂದೆ ಆರಂಭಿಸಿದ ಬೂತ್ ವಿಜಯ್ ಅಭಿಯಾನದಲ್ಲಿ ಡಬಲ್ ಇಂಜಿನ್ ಸರ್ಕಾರದ ಸಾಧನೆಗಳು ಮತ್ತು ಯೋಜನೆಗಳನ್ನು ಕಾರ್ಯಕರ್ತರು ಮನೆ-ಮನೆಗೆ ತಲುಪಿಸಿದ್ದಾರೆ. ನಾಮಪತ್ರ ಸಲ್ಲಿಕೆ ನಂತರ ಅಭ್ಯರ್ಥಿಗಳ ಪರಿಚಯದೊಂದಿಗೆ ಕಾರ್ಯಕರ್ತರು ಪ್ರಚಾರ ನಡೆಸಲಿದ್ದಾರೆ ಎಂದು ಹೇಳಿದರು.
ಮತಗಟ್ಟೆ ಆಧಾರದಡಿ ಏ.25, 26ರಂದು ‘ವಿಶೇಷ ಮಹಾ ಪ್ರಚಾರ ಅಭಿಯಾನ’ವನ್ನು ಬಿಜೆಪಿ ಹಮ್ಮಿಕೊಂಡಿದೆ. ಕೇಂದ್ರ, ರಾಜ್ಯ ಹಾಗೂ ಜಿಲ್ಲಾ ಮಟ್ಟದ ನಾಯಕರು ಈ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ. ಎಲ್ಲ 224 ಕ್ಷೇತ್ರಗಳಲ್ಲಿ ಸಾರ್ವಜನಿಕ ಸಭೆ, ರೋಡ್ ಶೋ, ಸುದ್ದಿಗೋಷ್ಠಿ, ಮನೆ-ಮನೆಗೆ ಭೇಟಿ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿವರ ನೀಡಿದರು.
ಕೇಂದ್ರ- ರಾಜ್ಯದ ನಾಯಕರು
ಜೆ.ಪಿ.ನಡ್ಡಾ, ಅಮಿತ್ ಶಾ, ರಾಜನಾಥ್ ಸಿಂಗ್, ಅರುಣ್ಸಿಂಗ್, ಸ್ಮೃತಿ ಇರಾನಿ, ಧರ್ಮೇಂದ್ರ ಪ್ರದಾನ್ ನಿರ್ಮಲಾ ಸೀತಾರಾಮನ್. ಮನ್ಸುಖ್ ಮಾಂಡವೀಯ, ಯೋಗಿ ಆದಿತ್ಯನಾಥ್, ದೇವೇಂದ್ರ ಫಡಣವಿಸ್, ಸಿ.ಟಿ.ರವಿ, ಅಣ್ಣಾಮಲೈ ಸೇರಿದಂತೆ 98 ಮಂದಿ ಬಿಜೆಪಿ ಕೇಂದ್ರ ನಾಯಕರು ಮತ್ತು ಕೇಂದ್ರ ಸಚಿವರು, ಪಕ್ಷದ ರಾಜ್ಯದ ನಾಯಕರು, ಸಚಿವರು, ಸಂಸದರು ಸೇರಿದಂತೆ 150 ರಾಜ್ಯ ನಾಯಕರು ಈ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ನಳಿನ್ಕುಮಾರ್ ಕಟೀಲ್ ಅವರು ತಿಳಿಸಿದರು.
150ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಗುರಿಯೊಂದಿಗೆ ನಾಯಕರು ಮತ್ತು ಕಾರ್ಯಕರ್ತರು ಬೆಳಿಗ್ಗೆಯಿಂದ ಸಂಜೆ ವರೆಗೆ ಮನೆ-ಮನೆಗೆ ಭೇಟಿ ಬಿಜೆಪಿ ಸರ್ಕಾರಗಳ ಕಾರ್ಯಯೋಜನೆಗಳು ಮತ್ತು ಸಾಧನೆಗಳನ್ನು ತಿಳಿಸಲಿದ್ದಾರೆ. ಬೆಳಿಗ್ಗೆ ಮಂದಿರ ದೇವಸ್ಥಾನಗಳಿಗೆ ಭೇಟಿ ನೀಡಿ ಬಳಿಕ ರಾಷ್ಟ್ರ ನಾಯಕರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ, ಆ ನಂತರ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಫಲಾನುಭವಿಗಳು ಮತ್ತು ಸಮುದಾಯಗಳ ಮುಖಂಡರೊಂದಿಗೆ ಸಂವಾದ ನಡೆಸಲಿದ್ದಾರೆ. ಕಾರ್ಯಕರ್ತರ ಆಧಾರದಡಿ ಬಿಜೆಪಿ ಚುನಾವಣೆ ಎದುರಿಸಲಿದೆ ಎಂದು ಹೇಳಿದರು.
40 ಕ್ಷೇತ್ರಗಳಲ್ಲಿ ಅಮಿತ್ ಶಾ ಪ್ರಚಾರ
ಕೇಂದ್ರ ಸಚಿವೆ ಹಾಗೂ ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕರಾದ ಕು.ಶೋಭಾ ಕರಂದ್ಲಾಜೆ ಮಾತನಾಡಿ, ಅಭಿಯಾನದಡಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಹಿಂದುಳಿದ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಕಾಲೋನಿಗಳಿಗೆ ಭೇಟಿ ನೀಡಿ ಸರ್ಕಾರ ಒದಗಿಸಿರುವ ಮೀಸಲಾತಿಯ ಬಗ್ಗೆ ತಿಳಿಸಲಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನಾಲ್ಕು ದಿನ ದಕ್ಷಿಣ, ಕನ್ನಡ, ಕರಾವಳಿ, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕದಲ್ಲಿ ಪ್ರಚಾರ ನಡೆಸಲಿದ್ದಾರೆ. ಅಮಿತ್ ಶಾ ಅವರು 35 ರಿಂದ 40 ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ವಕ್ತಾರರು ಮತ್ತು ವಿಧಾನಪರಿಷತ್ ಸದಸ್ಯೆ ಡಾ. ತೇಜಸ್ವಿನಿ ಗೌಡ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆ ಉಪಸ್ಥಿತರಿದ್ದರು.