ಸುದ್ದಿಮೂಲ ವಾರ್ತೆ
ಹುಬ್ಬಳ್ಳಿ, ಏ.25: ಜಗದೀಶ್ ಶೆಟ್ಟರ್ ಅವರೊಬ್ಬರಿಗೆ ಮಾತ್ರ ಟಿಕೆಟ್ ಕೈತಪ್ಪಿಲ್ಲ. ಬದಲಿಗೆ ಹಲವು ಹಿರಿಯರಿಗೆ ಟಿಕೆಟ್ ಸಿಕ್ಕಿಲ್ಲ. ಹಾಗೆಂದು ಅವರು ಪಕ್ಷ ಬಿಟ್ಟು ಹೋಗಿರುವುದರಿಂದ ಬಿಜೆಪಿಗೆ ಯಾವುದೇ ನಷ್ಟವೂ ಇಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಹುಬ್ಬಳ್ಳಿಯ ಖಾಸಗಿ ಹೋಟೆಲ್ನಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವರಿಗೆ ಏಕೆ ಈ ಬಾರಿ ಟಿಕೆಟ್ ನೀಡುತ್ತಿಲ್ಲ ಎಂಬುದನ್ನು ಅವರಿಗೆ ತಿಳಿಸಿದ್ದೆವು. ಆ ಕಾರಣಗಳನ್ನು ಇಲ್ಲಿ ಬಹಿರಂಗವಾಗಿ ಹೇಳುವುದಕ್ಕೆ ಸಾಧ್ಯವಿಲ್ಲ. ಅದೆಲ್ಲ ಪಕ್ಷದ ವಿಚಾರಗಳು. ಮತದಾರರಿಗೆ ಯಾವ ರೀತಿ ಮನವರಿಕೆ ಮಾಡಿಕೊಡಬೇಕೋ ಆ ರೀತಿ ತಿಳಿಸಿದ್ದೇವೆ ಎಂದು ಹೇಳಿದರು.
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಬಿಜೆಪಿ ಮತ ಬ್ಯಾಂಕ್ ಹೊಂದಿದೆ. ವ್ಯಕ್ತಿ ಮುಖ್ಯವಲ್ಲ, ಪಕ್ಷ ಮುಖ್ಯ. ಜಗದೀಶ್ ಶೆಟ್ಟರ್ ಸೋಲುತ್ತಾರೆ. ಶೆಟ್ಟರ್ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಆಗಿದ್ದಾಗ ಬಿಜೆಪಿ ಯಾರ ಕಪಿಮುಷ್ಟಿಯಲ್ಲಿತ್ತು? ಯಾರ ಕಪಿಮುಷ್ಟಿಯಲ್ಲೂ ಇಲ್ಲ, ಹಿಂದೆ ಹೇಗಿದೆಯೋ ಹಾಗೆಯೇ ಇದೆ
ಎಂದು ಅಮಿತ್ ಶಾ ಹೇಳಿದರು.
ಬಿಜೆಪಿಯಿಂದ ಲಿಂಗಾಯತರಿಗೆ ಟಿಕೆಟ್ ತಪ್ಪಿದ್ದರೆ ಆ ಕ್ಷೇತ್ರದಲ್ಲಿ ಮರಳಿ ಲಿಂಗಾಯತ ಸಮುದಾಯದವರಿಗೇ ಟಿಕೆಟ್ ನೀಡಿದ್ದೇವೆ. ಕಾಂಗ್ರೆಸ್ ಇಬ್ಬರು ಲಿಂಗಾಯತ ಮುಖ್ಯಮಂತ್ರಿಗಳಿಗೆ ಅಪಮಾನ ಮಾಡಿದೆ. ಬಿಜೆಪಿ ಲಿಂಗಾಯತರಿಗೆ ಅನ್ಯಾಯ ಮಾಡಿದೆ ಎಂದು ಹೇಳಲು ಕಾಂಗ್ರೆಸ್ಗೆ ನೈತಿಕತೆ ಇಲ್ಲ. ಬಿಜೆಪಿ ಎಲ್ಲ ಸಮುದಾಯಕ್ಕೂ ಗೌರವ ಕೊಟ್ಟಿದೆ ಎಂದರು.
ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪೂರ್ಣ ಬಹುಮತದೊಂದಿಗೆ ಸರಕಾರ ರಚಿಸಲಿದೆ. ರಾಜಕೀಯ ಸ್ಥಿರತೆ ಮತ್ತು ನೂತನ ಕರ್ನಾಟಕದ ದೂರದೃಷ್ಟಿಯೊಂದಿಗೆ ನಾವು ಚುನಾವಣೆ ಎದುರಿಸುತ್ತಿದ್ದೇವೆ. ನಮ್ಮದು ನರೇಂದ್ರ ಮೋದಿಜಿ ಅವರ ನೇತೃತ್ವದ ಅಭಿವೃದ್ಧಿಪರ ಡಬಲ್ ಎಂಜಿನ್ ಸರಕಾರ. ಕಾಂಗ್ರೆಸ್ನದು ರಿವರ್ಸ್ ಗೇರ್ ಸರಕಾರ ಎಂದು ಅವರು ನುಡಿದರು.
ಜೆಡಿಎಸ್ ಒಂದು ಕುಟುಂಬದ ಪಕ್ಷ. ಕಾಂಗ್ರೆಸ್ ಪಕ್ಷದ ವಿರುದ್ಧ ಚುನಾವಣೆಗೆ ಹೋಗುವ ಜೆಡಿಎಸ್ ಪಕ್ಷವು ಚುನಾವಣೆಯ ಬಳಿಕ ಅಧಿಕಾರದ ಗದ್ದುಗೆ ಹಿಡಿಯಲು ಕಾಂಗ್ರೆಸ್ ಪಕ್ಷದ ಜೊತೆ ತೆರಳುತ್ತದೆ. ಕರ್ನಾಟಕದ ಜನತೆ ಬಿಜೆಪಿಯ ಪೂರ್ಣ ಬಹುಮತದ ಸ್ಥಿರ ಸರಕಾರವನ್ನು ಚುನಾಯಿಸಬೇಕು. ಈ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗೆ ಅವಕಾಶ ಮಾಡಿಕೊಡಿ ಎಂದು ವಿನಂತಿಸಿದರು.
ಸುರಕ್ಷಿತ, ಅಭಿವೃದ್ಧಿಶೀಲ ಕರ್ನಾಟಕಕ್ಕಾಗಿ ಬಿಜೆಪಿಗೆ ಬಹುಮತ ಕೊಡಲು ಅವರು ವಿನಂತಿಸಿದರು. ಡಬಲ್ ಎಂಜಿನ್ ಸರಕಾರ ಮಾತ್ರ ಕರ್ನಾಟಕದ ಜನತೆಯ ಆಶೋತ್ತರಗಳಿಗೆ ಸ್ಪಂದಿಸಲು ಸಾಧ್ಯ ಎಂದು ಅವರು ನುಡಿದರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮತ್ತಿತರ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.