ಸುದ್ದಿಮೂಲವಾರ್ತೆ ಮಾನ್ವಿ ಏ-5
ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರಕಾರಗಳು ದೇಶದ ರೈತರ ಅಭಿವೃದ್ದಿಗಾಗಿ ಅನೇಕ ಕೃಷಿ ಯೋಜನೆಗಳನ್ನು ಜಾರಿ ಮಾಡುವ ಮೂಲಕ ರೈತರ ಬೆಳೆಗೆ ಉತ್ತಮ ಬೆಲೆ ಮತ್ತು ಆದಾಯ ತಂದು ಕೊಟ್ಟಿವೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಎನ್.ಶಂಕ್ರಪ್ಪ ಹೇಳಿದರು.
ಬುಧವಾರ ಪಟ್ಟಣದ ತೊಗಟವೀರ ಕ್ಷತ್ರಿಯ ಸಮುದಾಯ ಭವನದಲ್ಲಿ ಬಿಜೆಪಿ ಜಿಲ್ಲಾ ರೈತ ಮೋರ್ಚಾ ವತಿಯಿಂದ ನಡೆದ ಜಿಲ್ಲಾ ಮಟ್ಟದ ರೈತ ಸಮಾವೇಶ ಉದ್ಘಾಟಿಸಿ ಮಾತನಾಡುತ್ತಿದ್ದರು.
ಪ್ರಸ್ತುತ ದೇಶದ ಜಿಡಿಪಿಯಲ್ಲಿ ಕೃಷಿ ವಲಯದ ಪಾಲು ಶೇ.20 ಕ್ಕೆ ಹೆಚ್ಚಿದೆ.ರಾಜ್ಯ ಮತ್ತು ಕೇಂದ್ರ ಸರಕಾರದಿಂದ ರೈತರಿಗೆ ಕೃಷಿ ಸಮ್ಮಾನ್ ಯೋಜನೆ ಅಡಿಯಲ್ಲಿ ಪ್ರತಿ ರೈತರ ಖಾತೆಗೆ ಕೇಂದ್ರದಿಂದ 6 ಸಾವಿರ ರೂ, ರಾಜ್ಯದಿಂದ 4 ಸಾವಿರ ರೂ.ಗಳಂತೆ 5 ವರ್ಷದಲ್ಲಿ ಪ್ರತಿ ರೈತನಿಗೆ 50 ಸಾವಿರ ರೂ.ಅರ್ಥಿಕ ನೆರವು ನೀಡುವ ಯೋಜನೆಯಿಂದ ರೈತರಿಗೆ ಅನುಕೂಲವಾಗಿದೆ. ಜಿಲ್ಲೆಯ ರೈತರ ಕೊನೆ ಭಾಗದ ಜಮೀನುಗಳಿಗೆ ತುಂಗಭದ್ರಾ ಜಲಾಶಯದಿಂದ ಕಾಲುವೆ ಮೂಲಕ ನೀರು ದೊರೆಯಲಿ ಎನ್ನುವ ಉದ್ದೇಶದಿಂದ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಜಿಲ್ಲೆಯ ಎಲ್ಲಾ ಉಪ ಕಾಲುವೆಗಳನ್ನು 12 ಸಾವಿರ ಕೋಟಿ ರೂ. ಅನುದಾನದಲ್ಲಿ ಅಧುನೀಕರಣಗೊಳಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಕೂಡಾ ರೈತರಿಗೆ ಅನೇಕ ಸೌಲಭ್ಯಗಳನ್ನು ಕಲ್ಪಿಸಿದ್ದು ರೈತ ಮೋರ್ಚಾದ ಸದಸ್ಯರು ರೈತರಿಗೆ ಬಿಜೆಪಿ ಸರಕಾರದ ಯೋಜನೆ, ಸೌಲಭ್ಯಗಳ ಬಗ್ಗೆ ತಿಳಿಸಬೇಕೆಂದು ಹೇಳಿದರು.
ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ ಮಾತನಾಡಿ ರೈತರು ಸ್ವಾಭಿಮಾನದಿಂದ, ಋಣಮುಕ್ತರಾಗಿ ಬದುಕಬೇಕು ಎನ್ನುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿಯವರು ರೈತ ಪರವಾದ ಆಡಳಿತವನ್ನು ನೀಡಿದ್ದಾರೆ ಎಂದು ಹೇಳಿದರು.
ಮಾಜಿ ಶಾಸಕ ಗಂಗಾಧರ ನಾಯಕ ಮಾತನಾಡಿ ದೇಶದ ಪ್ರಧಾನಿ ನರೇಂದ್ರ ಮೋದಿಯವರು ರೈತ ಮಹಿಳೆಯರಿಗೆ ಉಜ್ವಲ ಯೋಜನೆ ಅಡಿಯಲ್ಲಿ ಗ್ಯಾಸ್ ಸರಬರಾಜು, ಆಯುಷ್ಮಾನ್ ಯೋಜನೆ ಅಡಿಯಲ್ಲಿ 5 ಲಕ್ಷದ ವರೆಗೆ ಆರೋಗ್ಯ ವಿಮೆ ಸೌಲಭ್ಯ ಯೋಜನೆ ಸೇರಿದಂತೆ ಅನೇಕ ರೈತಪರ, ಮಹಿಳಾಪರ ಯೋಜನೆ ನೀಡಿದ್ದಾರೆ ಎಂದು ಹೇಳಿದರು.
ಆರಂಭದಲ್ಲಿ ಮಾಜಿ ಉಪ ಪ್ರಧಾನಿ ಹಾಗೂ ಹಸಿರು ಕ್ರಾಂತಿಯ ಹರಿಕಾರರಾದ ಡಾ.ಬಾಬು ಜಗಜೀವನ್ ರಾಮ್ ರವರ ಜನ್ಮದಿನಾಚರಣೆ ಅಂಗವಾಗಿ ಡಾ.ಬಾಬು ಜಗಜೀವನ್ ರಾಮ್ ರವರ ಭಾವಚಿತ್ರಕ್ಕೆ ವೇದಿಕೆಯಲ್ಲಿದ್ದ ಮುಖಂಡರು ಪುಷ್ಪ ಸಮರ್ಪಣೆ ಮಾಡಿದರು.
ವೇದಿಕೆಯ ಮೇಲೆ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಶರಣಪ್ಪಗೌಡ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಎಂ.ಸಿದ್ದನಗೌಡ ನೆಲಹಾಳ, ಬಿಜೆಪಿ ಜಿಲ್ಲಾಧ್ಯಕ್ಷ ರಮಾನಂದ ಯಾದವ್, ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಜಕ್ಕಲದಿನ್ನಿ, ಮುಖಂಡರಾದ ಮಲ್ಲನಗೌ ನಕ್ಕುಂದಿ, ಎಸ್.ತಿಮ್ಮಾರೆಡ್ಡಿ ಭೋಗಾವತಿ, ಮಲ್ಲಿಕಾರ್ಜುನ ಪಾಟೀಲ್ ಸಂಗಾಪುರ, ಕೊಟ್ರೇಶಪ್ಪ ಕೋರಿ, ನಾಗನಗೌಡ, ವೀರೇಶನಾಯಕ ಬೆಟ್ಟದೂರು, ಗುರು ಸಿದ್ದಪ್ಪಗೌಡ ಕಣ್ಣೂರು, ಸಿದ್ದಮ್ಮ, ಸುಲೋಚನಮ್ಮ, ವೀರೋಜಮ್ಮ, ಲಕ್ಷ್ಮೀದೇವಿ ದೇವಿ, ಉದಯಕುಮಾರ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳ ಬಿಜೆಪಿ ರೈತ ಮೋರ್ಚಾದ ಪದಾಧಿಕಾರಿಗಳು ಭಾಗವಹಿಸಿದ್ದರು.