ಕೊಪ್ಪಳ ಜು 01: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕೊಪ್ಪಳ ವಿಶ್ವವಿದ್ಯಾಲಯದಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡುವ ಕನಸು ಇದೆ. ಈ ಕನಸಿಗೆ ಜಿಲ್ಲೆಯ ಜನಪ್ರತಿನಿಧಿಗಳು ಸಹಕಾರ ನೀಡಬೇಕೆಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಡಾ ಬಿ ಕೆ ರವಿ ಹೇಳಿದರು.
ಅವರು ಇಂದು ಕೊಪ್ಪಳ ಮೀಡಿಯಾ ಕ್ಲಬ್ ನಿಂದ ತಾಲೂಕಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಪತ್ರಿಕೆ, ಪತ್ರಕರ್ತ ಎಂಬುವುದು ಪವಿತ್ರವಾದ ಕೆಲಸ. ಈ ಹಿಂದೆ ಇದ್ದ ಮಾಧ್ಯಮ ಕ್ಷೇತ್ರ ಈಗ ಬದಲಾಗಿದೆ. ತಂತ್ರಜ್ಞಾನ ಬಳಕೆ ಹೆಚ್ಚಾಗಿದೆ. ತಂತ್ರಜ್ಞಾನದಿಂದ ಭಾಷಾ ಬೆಳವಣಿಗೆಯಾಗುತ್ತಿಲ್ಲ. ಸಣ್ಣ ಹಾಗು ಮಾಧ್ಯಮ ಪತ್ರಿಕೆಗಳು ಬೆಳೆಯಬೇಕು. ಕಲ್ಯಾಣ ಕರ್ನಾಟಕ ವಿಭಾಗದಲ್ಲಿ ಮಾಧ್ಯಮಗಳಿಗೆ ಇನ್ನಷ್ಟು ಹೆಚ್ಚಾಗಬೇಕು ಎಂದರು.
ಇದೇ ವೇಳೆ ಮಾತನಾಡಿದ ಹಿರಿಯ ಪತ್ರಕರ್ತ ನಾರಾಯಣರಾವ್ ಕುಲಕರ್ಣಿ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಎಲ್ಲರು ಯತ್ನಿಸಬೇಕು. ಜನರು ಮಾಧ್ಯಮದವರ ಮೇಲೆ ನಂಬಿಕೆ ಇಟ್ಟಿದ್ದಾರೆ. ನಂಬಿಕೆ ಉಳಿಸಕೊಳ್ಳಬೇಕು.ಮಾಧ್ಯಮ ಎಂಬುವುದು ತ್ಯಾಗದ ಸಂಕೇತವಾಗಿದೆ. ನಮ್ಮ ಪಾವಿತ್ರ್ಯತೆ ಉಳಿಸಿಕೊಳ್ಳಬೇಕು ಎಂದರು.
ಸಾನಿಧ್ಯ ವಹಿಸಿದ್ದ ಭಾಗ್ಯನಗರದ ಶ್ರೀಶಿವಪ್ರಕಾಶಾನಂದ ಸ್ವಾಮಿಗಳು ಪತ್ರಕರ್ತ ವಿಷಯವನ್ನು ಸಂಪೂರ್ಣವಾಗಿ ಅರಿತು ಕೆಲಸ ಮಾಡಬೇಕೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶರಣಪ್ಪ ಬಾಚಲಾಪುರ ವಹಿಸಿಕೊಂಡಿದ್ದರು. ಭಾಷಾ ಹಿರೇಮನಿ ಪ್ರಾರ್ಥನೆ ಮಾಡಿದರು. ಹುಸೇನ ಪಾಷಾ ಸ್ವಾಗತಿಸಿದರು. ರವೀಂದ್ರ ವಿ ಕೆ ಪ್ರಸ್ತಾವಿಕವಾಗಿ ಮಾತನಾಡಿದರು. ದತ್ತಪ್ಪ ಕಮ್ಮಾರ ವಂದಿಸಿದರು. ಈ ಸಂದರ್ಭದಲ್ಲಿ ಮೌನೇಶ ಬಡಿಗೇರ, ಸಮೀರಪಾಟೀಲ, ನಾಗರಾಜ ಹಡಗಲಿ, ಪ್ರಕಾಶ ಕಂದಕೂರ ಹಾಗು ಭರತ ಕಂದಕೂರರನ್ನು ಸನ್ಮಾನಿಸಿದರು.