ಸುದ್ದಿಮೂಲ ವಾರ್ತೆ
ಬೆಂಗಳೂರು: ಕೇಂದ್ರದ ಯೋಜನೆಗಳನ್ನು ರಾಜ್ಯದ ಜನರಿಗೆ ತಲುಪಿಸುವಲ್ಲಿ ರಾಜಕಾರಣ ಮಾಡಿದರೆ ರಾಜ್ಯಕ್ಕೆ ನಷ್ಟವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇಂದು ಕೇಂದ್ರ ಸರ್ಕಾರ ಒಂಬತ್ತು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.
ವಿಶ್ವ ಮಾನ್ಯ ನಾಯಕರಾದಂತಹ ನರೇಂದ್ರಮೋದಿ ನೇತೃತ್ವದ ಸರ್ಕಾರ 9 ವರ್ಷ ಪೂರ್ಣಗೊಳಿಸಿದೆ. ಒಂಭತ್ತು ವರ್ಷದಲ್ಲಿ ಸಾಕಷ್ಟು ಬದಲಾಗಿದೆ. ಪ್ರತಿಯೊಬ್ಬ ನಾಗರಿಕನ ಬದುಕಿನಲ್ಲಿ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಉನ್ನತೀಕರಣ ಆಗಿರುವುದನ್ನು ನಾವು ನೋಡಿದ್ದೇವೆ ಎಂದರು.
ಪ್ರಧಾನಿ ಮೋದಿ ಅಧಿಕಾರ ತೆಗೆದುಕೊಂಡಾಗ ಆರ್ಥಿಕ ಪರಿಸ್ಥಿತಿ ಸರಿಯಾಗಿರಲಿಲ್ಲ. ಭಾರತದ ವಿಶ್ವಾಸಾರ್ಹತೆ ಕುಸಿತ ಕಂಡಿತ್ತು. ಇಂತಹ ಸಂದರ್ಭದಲ್ಲಿ ಮೋದಿಯವರು ತಾವು ಗುಜರಾತಿನ ಮುಖ್ಯಮಂತ್ರಿಯಾಗಿ ಪಡೆದಿದ್ದ ಅನುಭವ ಹಾಗೂ ಇಡೀ ದೇಶ ಅರಿತಿದ್ದರಿಂದ ದೇಶದ ಆಂತರಿಕ ಮತ್ತು ಬಾಹ್ಯ ಸುರಕ್ಷತೆಗೆ ಒತ್ತು ಕೊಟ್ಟಿದ್ದಾರೆ ಎಂದರು.
ಯುಪಿಎ ಅವಧಿಯಲ್ಲಿ ಭಯೋತ್ಪಾದಕ ಚಟುವಟಿಕೆ ಹೆಚ್ಚಾಗಿತ್ತು. ರಾಷ್ಟ್ರದ ಸುರಕ್ಷತೆ ಮತ್ತು ಏಕತೆ ಅಖಂಡತೆಯನ್ನು ಕಾಪಾಡುವ ಕೆಲಸ ಮಾಡಿದರು. ಆರ್ಟಿಕಲ್ 370 ರದ್ದು ಮಾಡುವ ಮೂಲಕ ದೇಶದ ಏಕತೆ ಕಾಪಾಡಿದರು. ಪ್ರಧಾನಿಯಾದ ಮೇಲೆ ಮೋದಿಯವರು ಎಲ್ಲ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಿ.ಎಸ್.ಟಿ ಜಾರಿಗೆ ತಂದರು. ಇದರಿಂದ ದೇಶ ಹಾಗೂ ರಾಜ್ಯಗಳ ಆರ್ಥಿಕ ಪ್ರಗತಿ ಹೆಚ್ಚಾಯಿತು. ಮೊದಲ ಐದು ರಾಜ್ಯಗಳಿಗೆ 14% ಗ್ಯಾರೆಂಟಿ ಫಂಡ್ ಬರುವಂತೆ ಮಾಡಿದರು ಎಂದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ನಿತಿ ಆಯೋಗ ಜಾರಿಗೆ ತಂದು, ರಾಜ್ಯಗಳಿಗೆ 40 ರಷ್ಟು ಫಂಡ್ ಡೆವ್ಯಲೂಸನ್ ಮಾಡಿದರು. ಶಿಕ್ಷಣ ಪದ್ದತಿಯಲ್ಲಿ ಅಮೂಲಾಗ್ರ ಬದಲಾವಣೆ ತರಲು ಎನ್ ಇಪಿ ಜಾರಿಗೆ ತಂದಿದ್ದಾರೆ. ಕರ್ನಾಟಕ ಎನ್ ಇ ಪಿ ಜಾರಿಗೆ ತಂದಿರುವ ಮೊದಲ ರಾಜ್ಯವಾಗಿದೆ. ಮೂಲ ಸೌಕರ್ಯ ಅಭಿವೃದ್ಧಿ ಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ ಎಂದರು.
ಕಳೆದ ಎಪ್ಪತ್ತು ವರ್ಷದಲ್ಲಿ ನಾಲ್ಕೂವರೆ ಸಾವಿರ ಕಿ.ಮೀ ರಸ್ತೆ ನಿರ್ಮಾಣ ಮಾಡಲಾಗಿತ್ತು. ಕಳೆದ ಒಂಬತ್ತು ವರ್ಷದಲ್ಲಿ 5 ಸಾವಿರ ಕಿ.ಮೀ ರಸ್ತೆ ನಿರ್ಮಾಣ ಮಾಡಲಾಗಿದೆ. ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಗೆ ವಿಶೇಷ ಅನುದಾನ ನೀಡಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ 5 ಸಾವಿರ ಕೋಟಿ ನೀಡಿದ್ದಾರೆ. ಮೆಟ್ರೋ ಯೋಜನೆಗೆ ಐದು ಸಾವಿರ ಕೋಟಿ ನಿಡಿದ್ದಾರೆ. ನಾಲ್ಕು ಮೆಡಿಕಲ್ ಕಾಲೇಜು, ಐಐಟಿ, ಕರಾವಳಿ ಅಭಿವೃದ್ಧಿಗೆ 1250 ಕೋಟಿ ನೀಡಿದ್ದಾರೆ. ಕರಾವಳಿಯಲ್ಲಿ ಸಿಆರ್ ಝಡ್ ಗೆ ಅನುಮತಿ ನೀಡಿದ್ದಾರೆ. ಕಲಬುರ್ಗಿಯಲ್ಲಿ 1 ಲಕ್ಷ ಉದ್ಯೋಗ ನೀಡುವ ಜವಳಿ ಪಾರ್ಕ್ ಗೆ ಅನುಮತಿ ನೀಡಿದ್ದಾರೆ ಎಂದರು.
ಕೇಂದ್ರ ಸರ್ಕಾರದ ಎಲ್ಲ ಯೋಜನೆಗಳನ್ನು ರಾಜ್ಯ ಸರ್ಕಾರ ರಾಜ್ಯದ ಜನತೆಗೆ ತಲುಪಿಸುವ ಕೆಲಸ ಮಾಡಬೇಕು. ಇದರಲ್ಲಿ ರಾಜಕಾರಣ ಮಾಡಿದರೆ ರಾಜ್ಯಕ್ಕೆ ನಷ್ಟವಾಗಲಿದೆ. ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ಸುಮಾರು 54 ಲಕ್ಷ ರೈತರಿಗೆ ಸುಮಾರು 16000 ಕೋಟಿ ರೂ. ನೇರವಾಗಿ ರೈತರಿಗೆ ತಲುಪಿದೆ. ಪ್ರಧಾನ ಮಂತ್ರಿ ಅವಾಸ್ ಯೋಜನೆ ಅಡಿಯಲ್ಲಿ ಎಲ್ಲರಿಗೂ ಸೂರು ಕಲ್ಪಿಸುವ ಕೆಲಸ ಮಾಡಲಾಗಿದೆ. ಮೋದಿ ಅವರು ಪ್ರಧಾನಿಯಾದ ಮೇಲೆ ವಿಶ್ವಮಾನ್ಯತೆ ದೊರೆತಿದೆ ಎಂದರು.
ಮುದ್ರಾ ಯೋಜನೆ ಅಡಿಯಲ್ಲಿ 60 ಲಕ್ಷ ಉದ್ಯಮಿಗಳಿಗೆ ಅನುಕೂಲವಾಗಿದೆ. ರೈತರಿಗೆ ಅತ್ಯಂತ ಪ್ರಮುಖವಾಗಿ ಎಮ್ ಎಸ್ ಪಿ ನೀಡುವ ಮೂಲಕ ರೈತರ ನೆರವಿಗೆ ನಿಂತಿದ್ದಾರೆ.
ಭಾರತ ಆರ್ಥಿಕವಾಗಿ ಸಾಕಷ್ಟು ಸಮರ್ಥವಾಗಿದ್ದು ಐದು ಟ್ರಿಲಿಯನ್ ಆರ್ಥಿಕತೆ ಮಾಡುವ ಗುರಿಗೆ ಕರ್ನಾಟಕವೂ ಕೂಡ ಒಂದು ಟ್ರಿಲಿಯನ್ ಆರ್ಥಿಕ ಶಕ್ತಿ ಮುಟ್ಟಲಿದೆ ಎಂದರು.
ಪ್ರಧಾನಿಯವರು ತಾವೇ ಆರಂಭಿಸುವ ಯೋಜನೆಗಳನ್ನು ತಾವೇ ಉದ್ಘಾಟನೆ ಮಾಡಿದ್ದಾರೆ. ಈಶಾನ್ಯ ರಾಜ್ಯಗಳ ಯೋಜನೆಗಳು, ಕಾಶ್ಮೀರ ಟನೆಲ್ ಗಳು, ಎಚ್ ಎ ಎಲ್ ವಿಮಾನ ನಿರ್ಮಾಣ ಮಾಡುವ ಕೆಲಸ ಮಾಡಿದೆ.
ಹೀಗಾಗಿ ಮೋದಿ ನೇತೃತ್ವದ ಸರ್ಕಾರ ಭಾರತವನ್ನು ವಿಶ್ವ ಮಾನ್ಯ ಮಾಡುವ ನಿಟ್ಟಿನಲ್ಲಿ ಅವರ ಆಡಳಿತ ಮುಂದುವರೆಯಬೇಕು ಎಂದರು.