ಸುದ್ದಿಮೂಲ ವಾರ್ತೆ
ಮೈಸೂರು, ಮೇ 05: ಬಂದಿರುವ ಸಮೀಕ್ಷೆಗಳಿಂತ ಬಹಳ ಉತ್ತಮವಾದ ಸಂಖ್ಯೆ ಬರುವ ನಿರೀಕ್ಷೆ ನಮಗೆ ಇದೆ. ನಮ್ಮ ಸಮೀಕ್ಷೆ ಪ್ರಕಾರ ಸ್ಪಷ್ಟ ಬಹುಮತಕ್ಕಿಂತ ಒಂದಷ್ಟು ಸ್ಥಾನ ಹೆಚ್ಚಾಗಿಯೆ ಬರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಇಂದು ವರುಣ ಕ್ಷೇತ್ರಕ್ಕೆ ಮತ ಪ್ರಚಾರಕ್ಕೆ ಹೋಗುವ ಮುನ್ನ ಮೈಸೂರು ಏರ್ ಪೋರ್ಟ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ವರುಣ ದಲ್ಲಿ ನಮ್ಮ ಪರ ಅಲೆ ಮೊದಲಿಗಿಂತ ಉತ್ತಮಗೊಂಡಿದೆ. ಬಿಜೆಪಿಗೆ ಎಲ್ಲ ವರ್ಗದ ಜನರ ಬೆಂಬಲ ಇದೆ. ನಾವು ಗೆಲ್ಲುತ್ತೀವಿ ಎಂದು ನಮಗೆ ಆತ್ಮ ವಿಶ್ವಾಸವಿದೆ. ಕಾಂಗ್ರೆಸ್ ಗೆ ಎಷ್ಟು ಅಭದ್ರತೆ ಕಾಡುತ್ತಿದೆ ಎಂಬುದಕ್ಕೆ ರಾಜ್ಯದ ಹನುಮ ದೇವಾಲಯಗಳ ಅಭಿವೃದ್ಧಿ ಮಾಡ್ತಿವಿ ಎಂಬ ಈ ಭರವಸೆಯೆ ಸಾಕ್ಷಿ. ಮೊದಲು ತಪ್ಪು ಮಾಡಿ, ನಂತರ ಅದಕ್ಜೆ ಓವರ್ ರಿಯಾಕ್ಟ್ ಮಾಡೋದು. ಕಾಂಗ್ರೆಸ್ ನ ಮಾತುಗಳಲ್ಲಿ ಪ್ರಾಮಾಣಿಕತೆ ಇಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಕಾಂಗ್ರೆಸ್ ಗೆ ಅಭದ್ರತೆ ಎದ್ದು ಕಾಣುತ್ತಿದೆ
ಜನ ವಿರೋಧ ಆಗ್ತಿದೆ ಎಂದಾಗ ನಾವು ಅಭಿವೃದ್ಧಿ ಮಾಡ್ತೀವಿ ಅನ್ನೋದು ಅವರ ಅಪ್ರಾಮಾಣಿಕತೆ ಮತ್ತು ಅವರ ಅಭದ್ರತೆ ತೋರಿಸುತ್ತೆ. ಸಿದ್ದರಾಮಯ್ಯ ಮೊದಲು ನಾಮಪತ್ರ ಸಲ್ಲಿಸಲು ಮಾತ್ರ ಬರುತ್ತೀನಿ ಎಂದಿದ್ದರು. ನಂತರ ಎರಡು ಮೂರು ಬಾರಿ ಬಂದರು. ಈಗ ಸ್ಟಾರ್ ಗಳ ಸಮೇತ ಬಂದು ಪ್ರಚಾರ ಮಾಡ್ತಿದ್ದಾರೆ. ನಮ್ಮ ಪರಿಸ್ಥಿತಿ ಬಹಳ ಉತ್ತಮಗೊಂಡಿದೆ ಅಂತ ಇದಕ್ಕೇ ಹೇಳಿದ್ದು. ಇದರ ಅರ್ಥ ನಾವು ಗೆಲ್ಲುತ್ತಿದ್ದೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಸಿದ್ದರಾಮಯ್ಯ ಸ್ಪಷ್ಟೀಕರಣಕ್ಕೆ ಬೆಲೆ ಇಲ್ಲ
ಲಿಂಗಾಯತರ ವಿಚಾರದಲ್ಲಿ ಸಿದ್ದರಾಮಯ್ಯ ಸ್ಪಷ್ಟೀಕರಣ ವಿಚಾರಕ್ಕೂ ತಿರುಗೇಟು ನೀಡಿದ ಸಿಎಂ, “ಮೊದಲು ಅವರು ಲಿಂಗಾಯಿತರ ವಿಚಾರದಲ್ಲಿ ಡ್ಯಾಮೇಜ್ ಮಾಡಿದ್ರು. ನಂತರ ಡ್ಯಾಮೇಜ್ ಕಂಟ್ರೋಲ್ ಮಾಡಲು ಈಗ ಅದೂ ಇದೂ ಅಂತ ಹೇಳ್ತಿದ್ದಾರೆ. ಜನ ಇದನ್ನೆಲ್ಲಾ ನಂಬಲ್ಲ. ಈಗ ಕ್ಯಾಮರಾ ಇರೋದ್ರಿಂದ ನಾನು ಹಾಗೆ ಹೇಳಿಲ್ಲ ಅಂದ್ರೆ ಯಾರೂ ಕೇಳಲ್ಲ. ಜನ ಎಲ್ಲವನ್ನೂ ನೋಡ್ತಾರೆ. ಸ್ಪಷ್ಟೀಕರಣಕ್ಕೆ ಈಗ ಬೆಲೆ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಪ್ರಚಾರಕ್ಕೆ ಬರುತ್ತಿರುವುದರಿಂದ ವಿನ್ನಿಂಗ್ ಮಾರ್ಜಿನ್ ಹಾಗೂ ನಂಬರ್ ಎರಡೂ ಜಾಸ್ತಿ ಆಗುತ್ತೆ” ಎಂದು ಸಿಎಂ ಬೊಮ್ಮಾಯಿ ಹೇಳಿದರು.