ಸುದ್ದಿಮೂಲ ವಾರ್ತೆ
ಬೆಂಗಳೂರು,ಏ.24: ಲಿಂಗಾಯತ ಮುಖ್ಯಮಂತ್ರಿಗಳು ರಾಜ್ಯವನ್ನು ಹಾಳು ಮಾಡಿದ್ದಾರೆ ಎಂಬ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರವರ ಹೇಳಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿಕಾರಿದರು.
ಬಸವ ಜಯಂತಿ ಪ್ರಯುಕ್ತ ವಿಧಾನಸೌಧ ಮುಂಬಾಗ ಅಶ್ವಾರೂಢ ಬಸವೇಶ್ವರರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಹೇಳಿಕೆ ನೋವು ತಂದಿದೆ ಎಂದು ವಿರುದ್ಧ ವಾಗ್ದಾಳಿ ನಡೆಸಿದರು.
ಲಿಂಗಾಯತ ಸಮುದಾಯದ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿರುವುದು ಸರಿಯಲ್ಲ. ಸಿದ್ದರಾಮಯ್ಯ ನೀಡಿರುವ ಹೇಳಿಕೆ ಅವರ ಗೌರವ-ಘನತೆಗೆ ತಕ್ಕದ್ದಲ್ಲ. ಈ ಹೇಳಿಕೆಗೆ ಮುಂದಿನ ದಿನಗಳಲ್ಲಿ ರಾಜ್ಯದ ಜನರೇ ಉತ್ತರ ನೀಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾವು ಬಸವ ತತ್ವದ ಆಧಾರದ ಮೇಲೆ ಮುಂದುವರೆಯುತ್ತೇವೆ ಎಂದು ಹೇಳಿದ ಅವರು, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಬಿಜೆಪಿಗೆ ಮತ್ತೊಮ್ಮೆ ಆರ್ಶೀವಾದ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಮಾಜ ಸುಧಾರಕ ಬಸವಣ್ಣನವರ ತತ್ವ ಆದರ್ಶಗಳು ಸದಾಕಾಲಕ್ಕೂ ಪ್ರಸ್ತುತ. ಬಸವಣ್ಣನವರ ವಿಚಾರಧಾರೆಗಳು ಸಮಾನತೆಯ ತಳಹದಿ ಮೇಲೆ ನಿಂತಿದೆ. ಹೀಗಾಗಿ ಅವರ ಚಿಂತನೆ ಮನುಕುಲಕ್ಕೆ ಆದರ್ಶ ಎಂದು ಹೇಳಿದರು