ಸುದ್ದಿಮೂಲ ವಾರ್ತೆ
ಕುಷ್ಟಗಿ, ಮೇ.16: ತಾಲೂಕಿನ ತಾವರಗೇರಾ ಪಟ್ಟಣದ ಮೂಲಕ ಹಾಯ್ದು ಹೋಗಿರುವ ಕುಷ್ಟಗಿ – ಸಿಂಧನೂರ ರಾಜ್ಯ ಹೆದ್ದಾರಿಯಲ್ಲಿ ಬೊಂಗಾ ಬಿದ್ದಿದ್ದು, ಸಂಚರಿಸುವ ವಾಹನಗಳಿಗೆ ಅಪಾಯಕ್ಕೆ ಆಹ್ವಾನ ನೀಡುತ್ತಿದೆ.
ತಾವರಗೇರಾ ಪಟ್ಟಣದ ಪ್ರವಾಸಿ ಮಂದಿರದ ಪಕ್ಕದ ಕಿತ್ತೂರರಾಣಿ ಚನ್ನಮ್ಮ ವೃತ್ತದ ಬಳಿಯ ರಾಜ್ಯ ಹೆದ್ದಾರಿಯ ತಿರುವಿನ ಮಧ್ಯ ಭಾಗದಲ್ಲಿ ದೊಡ್ಡ ಗಾತ್ರದ ವೃತ್ತಾದಕಾರದಲ್ಲಿ ಬೊಂಗಾ ಬಿದ್ದಿದೆ. ನಿತ್ಯ ಸಂಚರಿಸುವ ವಾಹನ ಸವಾರರಿಗೆ ಆತಂಕ ಎದುರಾಗಿದೆ. ತಾಲೂಕು ಕೇಂದ್ರ ಕುಷ್ಟಗಿ ಮಾರ್ಗವಾಗಿ ರಾಯಚೂರು, ಹೈದ್ರಾಬಾದ್’ಗೆ ಸಂಪರ್ಕಿಸುವ ಮುಖ್ಯ ರಸ್ತೆಯಿದಾಗಿದ್ದು, ಇಲ್ಲಿ ಪ್ರತಿನಿತ್ಯ ಹಗಲು – ರಾತ್ರಿ ಗೂಡ್ಸ್ ಏರಿಕೊಂಡು ಭಾರಿ ವಾಹನಗಳು ಸೇರಿದಂತೆ ಸಾರಿಗೆ ಬಸ್, ಕಾರು, ಟೆಂಪೋ, ಕ್ರುಸರ್, ಜೀಪ್, ಟಾಟಾ ಎಸಿ, ಟ್ರ್ಯಾಕ್ಟರ್ ಹಾಗೂ ದ್ವಿಚಕ್ರ ವಾಹನಗಳು ಹೆಚ್ಚು ಸಂಚರಿಸುತ್ತವೆ. ರಾತ್ರಿ ವೇಳೆ ಬೊಂಗಾ ಗಮನಿಸದೇ ಸಂಚರಿಸಿದರೆ ಅಪಘಾತ ಕಟ್ಟಿಟ್ಟಬುತ್ತಿ.
ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಕೂಡಲೇ ಎಚ್ಚೆತ್ತು ರಸ್ತೆ ಮಧ್ಯೆದ ಬೊಂಗಾ ಮುಚ್ಚಿ ನಿರ್ಭೀತಿಯ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು ಎಂದು ವಾಹನಗಳ ಸವಾರರು ಒತ್ತಾಯಿಸಿದ್ದಾರೆ.