ಸುದ್ದಿಮೂಲ ವಾರ್ತೆ
ಮೈಸೂರು, ಸೆ.23:ಕಾವೇರಿಗಾಗಿರುವ ಅನ್ಯಾಯವನ್ನು ಖಂಡಿಸಿ ಶನಿವಾರ ಮೈಸೂರು, ಹಾಸನ, ಚಾಮರಾಜನಗರ ಜಿಲ್ಲೆಗಳಲ್ಲೂ ಪ್ರತಿಭಟನೆ ನಡೆಸಲಾಯಿತು.
ಮೈಸೂರು ನಗರದ ಜಿಲ್ಲಾ ನ್ಯಾಯಾಲಯದ ಎದುರು ಕಲಾಪಗಳಿಂದ ಹೊರ ಉಳಿದು ಪ್ರತಿಭಟನೆ ನಡೆಸಿದ ವಕೀಲರು, ನಮ್ಮವಳು ನಮ್ಮವಳು ಕಾವೇರಿ ನಮ್ಮವಳು ಎಂದು ಘೋಷಣೆ ಕೂಗಿದರು.
ಅಧಿವೇಶನದಲ್ಲಿ ಮಾತನಾಡದ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಸುಪ್ರೀಂ ಕೋರ್ಟ್ ಮರುಪರಿಶೀಲನೆ ಮಾಡಬೇಕು.ನ್ಯಾಯಾಲಯ ಮುಂಭಾಗದ ರಸ್ತೆ ಬಂದ್ ಮಾಡಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು
ಅರೆಬೆತ್ತಲೆ ಉರುಳುಸೇವೆ
ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅರೆ ಬೆತ್ತಲೆಯಾಗಿ ಉರುಳು ಸೇವೆ ಮಾಡಿದರು. ಶ್ರೀ ಚಾಮರಾಜೇಶ್ವರ ಉದ್ಯಾನವನದಿಂದ ಶ್ರೀ ಭುವನೇಶ್ವರಿ ವೃತ್ತದ ತನಕ ಮೆರವಣಿಗೆಯಲ್ಲಿ ಬಂದುರಾಷ್ಟ್ರೀಯ ಹೆದ್ದಾರಿಯಲ್ಲಿ ಅರೆ ಬೆತ್ತಲಾಗಿ ಉರುಳು ಸೇವೆ ಮಾಡಿದರು.
ಕರ್ನಾಟಕ ಸೇನಾಪಡೆಯ ರಾಜ್ಯಾಧ್ಯಕ್ಷ ಚಾ.ರಂ. ಶ್ರೀನಿವಾಸಗೌಡ, ಹಿರಿಯ ಚಳವಳಿಗಾರ ಶಾ.ಮುರಳಿ, ಹೋರಾಟಗಾರರಾದ ಗೋವಿಂದರಾಜು, ಜಿ.ಬಂಗಾರು ಸೇರಿದಂತೆ ಹಲವಾರು ಹೋರಾಟಗಾರರು ಭಾಗವಹಿಸಿದ್ದರು.
ಹಾಸನ ನಗರದಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಖಂಡಿಸಿ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.