ಕಲಬುರಗಿ, ಜು.25: ಅನುದಾನ ಬೇಡಿಕೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಾನು ಬರೆದಿರುವ ಎನ್ನಲಾಗುತ್ತಿರುವ ಪತ್ರ ನಕಲಿ ಪತ್ರವಾಗಿದ್ದು, ಯಾರೋ ನನ್ನ ಹೆಸರಿನ ನಕಲಿ ಲೆಟರ್ ಹೆಡ್ ನ್ನು ಬಳಸಿ, ಪತ್ರವನ್ನು ವೈರಲ್ ಮಾಡಿದ್ದಾರೆ ಎಂದು ಆಳಂದ ಶಾಸಕ ಬಿ.ಆರ್. ಪಾಟೀಲ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಈ ಹಿಂದೆ ಶಾಸಕನಾಗಿದ್ದಾಗ ಇದ್ದ ಲೆಟರ್ ಪ್ಯಾಡ್ ಇದಾಗಿದ್ದು, ಅದರಲ್ಲಿ ಶಾಂತಿ ನಗರ ಮನೆ ವಿಳಾಸವಿದೆ. ಹೊಸ ಲೆಟರ್ ಹೆಡ್ ನಲ್ಲಿ ಅಕ್ಕ ಮಹಾದೇವಿ ಕಾಲೋನಿಯ ನಿವಾಸದ ವಿಳಾಸವಿದೆ ಎಂದರು.
ನನ್ನ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ನಡುವೆ ಭಿನ್ನಾಭಿಪ್ರಾಯ ಮೂಡಿಸಲು ಈ ನಕಲಿ ಪತ್ರ ಸೃಷ್ಟಿ ಮಾಡಿದ್ದಾರೆ. ಈ ನಕಲಿ ಪತ್ರದ ಸೃಷ್ಟಿಯನ್ನು ಬಿಜೆಪಿ ಪಕ್ಷದವರು ಮಾಡಿರಬಹುದು ಎಂದು ಹೇಳಿದ ಅವರು, ಈ ಬಗ್ಗೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗೆ ದೂರು ನೀಡುತ್ತೇನೆ ಎಂದು ಬಿ ಆರ್ ಪಾಟೀಲ್ ಹೇಳಿದರು.
ವೈರಲ್ ಪತ್ರದಲ್ಲೇನಿದೆ..
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜಿಲ್ಲೆಯ ಆಳಂದ ಶಾಸಕ ಬಿ.ಆರ್. ಪಾಟೀಲ್ ಅವರು ಬರೆದಿರುವ ಎನ್ನಲಾದ ಪತ್ರದಲ್ಲಿ ಉಲ್ಲೇಖಿಸಿದಂತೆ. “ಜನರ ವಿಶ್ವಾಸ, ಭರವಸೆ ಹಾಗೂ ಅವರ ಪ್ರೀತಿಯಿಂದ ನಾವು ಶಾಸಕರಾಗಿ ಆಯ್ಕೆಯಾಗಿದ್ದೇವೆ. ಆದರೆ, ನಮ್ಮನ್ನು ಆಯ್ಕೆ ಮಾಡಿ ಕಳಿಸಿದ ಜನರ ವಿಶ್ವಾಸಕ್ಕೆ ತಕ್ಕಂತೆ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ವಿವಿಧ ಇಲಾಖೆಗಳ 20 ಕ್ಕೂ ಅಧಿಕ ಸಚಿವರುಗಳಿಗೆ ನಮ್ಮ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರೂ ಸ್ಪಂದಿಸುತ್ತಿಲ್ಲ. ಇದರಿಂದ ಜನರ ಅಶೋತ್ತರ ಈಡೇರಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಅಲ್ಲದೇ ಅನುದಾನ ಬಿಡುಗಡೆ ಮಾಡುವುದಕ್ಕೂ ಸಚಿವರು ಮೂರನೇ ವ್ಯಕ್ತಿ ಮೂಲಕ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ. ಸ್ಥಳೀಯ ಶಾಸಕರು ನಾವು ಆಗಿದ್ದರೂ ಅನುದಾನಕ್ಕಾಗಿ ಮೂರನೇ ವ್ಯಕ್ತಿಯ ಮೊರೆ ಹೋಗಬೇಕಾಗಿರುವುದು ಅತ್ಯಂತ ಬೇಸರ ವಿಷಯ.
ಇದಲ್ಲದೆ ಸಚಿವರು ತಮಗೆ ಬೇಕಾದ ಅಧಿಕಾರಿಗಳಿಗೆ ಮಣೆ ಹಾಕಿ, ಸ್ವಜನ ಪಕ್ಷಪಾತ ಮಾಡುತ್ತಿದ್ದಾರೆ. ನಮ್ಮ ಯಾವುದೇ ವರ್ಗಾವಣೆ ಶಿಫಾರಸು ಪತ್ರಗಳಿಗೆ ಮಾನ್ಯತೆ ಕೊಡುತ್ತಿಲ್ಲ. ಇದರಿಂದಾಗಿ ಯಾವ ಅಧಿಕಾರಿಗಳು ನಮ್ಮ ಕೆಲಸವನ್ನು ಮಾಡಿಕೊಡುತ್ತಿಲ್ಲ. ಮಾತಿಗೆ ಬೆಲೆಯೂ ನೀಡುತ್ತಿಲ್ಲ. ಆದ್ದರಿಂದ ತಾವು ತಕ್ಷಣವೇ ಮಧ್ಯಪ್ರವೇಶಿಸಿ ಸಮಸ್ಯೆ ಪರಿಹರಿಸಬೇಕು ಎಂಬುದು ನಮ್ಮ ಕೋರಿಕೆ. ನಮ್ಮ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ತಾವು ನಡೆದುಕೊಳ್ಳುತ್ತೀರೆಂದು ಭಾವಿಸಿದ್ದೇವೆ” ಎಂದು ಪತ್ರದಲ್ಲಿ ಉಲ್ಲೇಖವಿದೆ.