ಸುದ್ದಿಮೂಲ ವಾರ್ತೆ
ಚೇಳೂರು,ಅ.18: ತಾಲೂಕಿನ ಅನೇಕ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ನಿಂತಿದ್ದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ರಿಪೇರಿ ಮಾಡಲು ಮುಂದಾಗುತ್ತಿಲ್ಲ.
ಚಾಕವೇಲು ಗ್ರಾಮ ಪಂಚಾಯ್ತಿಯ ಬುದ್ಧಲವಾರಪಲ್ಲಿ ಗ್ರಾಮದಲ್ಲಿ ಮೂರು ವರ್ಷದ ಹಿಂದೆ ಈ ಘಟಕ ನಿರ್ಮಾಣ ಮಾಡಿ, ಬಳಕೆ ಮಾಡಲು ಪ್ರಾರಂಭ ಮಾಡಲಾಗಿತ್ತು. ಆದರೆ, ಇದು ಮೂರೇ ತಿಂಗಳಿಗೆ ಕೆಟ್ಟು ನಿಂತಿದೆ ಎಂದು ಗ್ರಾಮಸ್ಥರು ಹಾಗು ಪಂಚಾಯ್ತಿ ಸದಸ್ಯ ಆರೋಪ ಮಾಡಿದ್ದಾರೆ. ಕೆಟ್ಟು ಮೂರು ನಾಲ್ಕು ವರ್ಷ ಕಳೆಯುತ್ತ ಬಂದರು ಇದುವರೆಗೂ ಯಾರು ಇದನ್ನು ಸರಿಪಡಿಸಲು ಮುಂದಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಯೋಜನೆ ಜನರಿಗೆ ಉಪಯೋಗ ಆಗುವ ಬದಲು ಕೆಲ ಗುತ್ತಿಗೆದಾರರ ಹಾಗೂ ಅಧಿಕಾರಿಗಳ ಜೇಬು ತುಂಬಿಸುವ ಯೋಜನೆ ಎಂದು ಗಂಭೀರ ಆರೋಪಗಳು ಕೇಳಿ ಬಂದಿವೆ. ತಾಲ್ಲೂಕಿನದ್ಯಂತ ಕೋಟಿ ಕೋಟಿ ಅನುದಾನ ಈ ಯೋಜನೆಗೆ ಬಳಕೆ ಮಾಡಲಾಗಿದೆ. ಆದರೆ, ಈ ಕೋಟಿ ಹಣವೆಲ್ಲಾ ಸಮುದ್ರಕ್ಕೆ ಉಪ್ಪು ಸುರಿದಂತೆ ಆಗಿದೆ.
ಸಣ್ಣ ನೀರಾವರಿ ಇಲಾಖೆ, ಹಾಗು ಜಿಲ್ಲಾ ನಿರ್ಮಿತಿ ಕೇಂದ್ರ ಇಲಾಖೆಗಳಿಗೆ ಸರ್ಕಾರ ಈ ಯೋಜನೆಗೆ ಅನುದಾನ ನೀಡುತ್ತದೆ. ಈ ಇಲಾಖೆಗಳು ಟೆಂಟರ್ ಮೂಲಕ ಗುತ್ತಿಗೆದಾರರಿಗೆ ಕಾಮಗಾರಿಗಳನ್ನು ನೀಡಲಾಗುತ್ತದೆ. ಮೂಲಗಳ ಪ್ರಕಾರ ಗುತ್ತಿಗೆ ಪಡೆದ ಗುತ್ತಿಗೆದಾರರು ಘಟಕ ನಿರ್ಮಾಣ ಮಾಡಿ, ಐದು ವರ್ಷ ಘಟಕದ ನಿರ್ವಹಣೆ ಮಾಡಿ ನಂತರ ಸ್ಥಳೀಯ ಗ್ರಾಮ ಪಂಚಾಯ್ತಿಗಳಿಗೆ ಘಟಕ ಒಪ್ಪಿಸಬೇಕಾಗುತ್ತದೆ. ಆದರೆ, ಗುತ್ತಿಗೆ ಪಡೆದ ವ್ಯಕ್ತಿ ಘಟಕ ನಿರ್ಮಾಣ ಮಾಡಿ ಬಿಲ್ ಪಡೆದ ಬಳಿಕ ಘಟಕಗಳತ್ತ ಬರುವುದೇ ಇಲ್ಲ.
ಇದರ ಪರಿಣಾಮ “ಅರಸನಿಲ್ಲದ ರಾಜ್ಯ, ದೀಪವಿಲ್ಲದ ಮನೆ” ಎಂಬಂತೆ ಆಗಿದೆ. ಇವುಗಳ ಪರಿಸ್ಥಿತಿ, ಇದರಿಂದ ಸಂಬಂಧಪಟ್ಟ ಅಧಿಕಾರಿಗಳು ತಾಲ್ಲೂಕಿನದ್ಯಂತ ಕೆಟ್ಟುನಿಂತ ಘಟಕಗಳನ್ನು ಸರಿಪಡಿಸಿ ಗ್ರಾಮಗಳ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯ ಮಾಡಿದ್ದಾರೆ.