ಸುದ್ದಿಮೂಲ ವಾರ್ತೆ
ಮೈಸೂರು, ಮೇ 2: ದಲಿತ ಮುಖಂಡ ವಿ. ಶ್ರೀನಿವಾಸಪ್ರಸಾದ್ ಅವರ ಆಶೀರ್ವಾದ ಇದೆ. ವರುಣ ಕ್ಷೇತ್ರದಿಂದ ಸೋಮಣ್ಣ ಅವರು 20 ಸಾವಿರ ಮತಗಳಿಂದ ಗೆಲ್ಲಿಸುವ ಮೂಲಕ ಇತಿಹಾಸ ಸೃಷ್ಟಿಯಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರೆ ನೀಡಿದ್ದಾರೆ.
ನಂಜನಗೂಡು ತಾಲೂಕು ಎಸ್. ಹೊಸಕೋಟಿ ಗ್ರಾಮದಲ್ಲಿ ಮಂಗಳವಾರ ನಡೆದ ಬಿಜೆಪಿ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ಗೆದ್ದರೆ ಕರ್ನಾಟಕ ಸುರಕ್ಷಿತ. ಈ ಚುನಾವಣೆಯಲ್ಲಿ ವರುಣ ಕ್ಷೇತ್ರದ ಚುನಾವಣೆ ಅತ್ಯಂತ ಪ್ರಮುಖವಾಗಿದೆ. ಲಿಂಗಾಯಿತ ಮುಖಂಡರು ಅತಿ ಹೆಚ್ಚು ಭ್ರಷ್ಟಾಚಾರ ನಡೆಸಿದರು ಎಂದು ಸಿದ್ದರಾಮಯ್ಯನವರು ಹೇಳಿ ಅವಮಾನ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಮ್ಮ ಪ್ರಣಾಳಿಕೆಯಲ್ಲಿ ವಿಧವೆಯರ ಮಾಸಿಕ ಪಿಂಚಣಿಯನ್ನು 800 ರೂಪಾಯಿಯಿಂದ 2000ಕ್ಕೆ ಏರಿಸಿದ್ದೇವೆ.ಮೂರು ಸಿಲಿಂಡರ್ ಉಚಿತ, ಪ್ರತಿ ದಿನ ಅರ್ಧ ಲೀಟರ್ ಹಾಲು, 5 ಕಿಲೋ ಸಿರಿಧಾನ್ಯ ನೀಡಲು ತೀರ್ಮಾನಿಸಿದ್ದೇವೆ. ಸೋಮಣ್ಣ ಎಂತಹ ಕೆಲಸಗಾರ ಅಂತ ಎಲ್ಲರಿಗೂ ಗೊತ್ತು. ವರುಣಾ ಕ್ಷೇತ್ರದಲ್ಲಿ ಸೋಮಣ್ಣ 20-25 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆ.
ಕೇವಲ ಘೋಷಣೆಯಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ. ಮನೆ ಮನೆಗೆ ಹೋಗಿ ಮತಯಾಚನೆ ಮಾಡಿ ಕಿವಿಮಾತು ಹೇಳಿದರು. ಸಂಸದ ಪ್ರತಾಪ್ ಸಿಂಹ, ವರುಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಚಿವ ವಿ ಸೋಮಣ್ಣ, ನಂಜನಗೂಡು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹರ್ಷವರ್ಧನ್, ಟಿ ನರಸೀಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ ರೇವಣ್ಣ, ಮಾಜಿ ಸಂಸದ ಹಾಗು ನಟ ಶಶಿಕುಮಾರ್, ಮಾಜಿ ಸಚಿವ ಎಂ ಶಿವಣ್ಣ, ಮಾಜಿ ಎಂಎಲ್ಸಿ ಸಿ ರಮೇಶ್, ಮುಖಂಡರಾದ ಎಲ್ ರೇವಣ್ಣಸಿದ್ಧಯ್ಯ, ಕಾಪು ಸಿದ್ಧಲಿಂಗಸ್ವಾಮಿ, ಎಸ್ ಮಹದೇವಯ್ಯ, ಎಂ ಅಪ್ಪಣ್ಣ, ಮೈಸೂರು ಗ್ರಾಮಾಂತರ ಬಿಜೆಪಿ ಅಧ್ಯಕ್ಷೆ ಮಂಗಳಾ ಸೋಮಶೇಖರ್ ಸೇರಿದಂತೆ ಬಿಜೆಪಿಯ
ಪ್ರಮುಖ ನಾಯಕರು ಇದ್ದರು.
ವರುಣಾ ವಿಧಾನಸಭಾ ಕ್ಷೇತ್ರದ ವಿವಿಧೆಡೆಗಳಿಂದ ಆಗಮಿಸಿರುವ ಸಾವಿರಾರು ಬಿಜೆಪಿ ಕಾರ್ಯಕರ್ತರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.